ಬೆಂಗಳೂರು: ಕೆಪಿಸಿಸಿ ಅಧ್ಯಕ್ಷರು ಹಾಗೂ ಪುತ್ರಿಯ ವಿರುದ್ಧ ಜಾರಿ ನಿರ್ದೇಶನಾಲಯ(ಇಡಿ) ನೋಟಿಸ್ ನೀಡಿರುವುದನ್ನು ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಟ್ವೀಟ್ ಮಾಡಿ ಪ್ರಶ್ನಿಸಿದ್ದಾರೆ. ಇದೊಂದು ರಾಜಕೀಯ ಪಿತೂರಿ. ಚುನಾವಣಾ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕರನ್ನೇ ಟಾರ್ಗೆಟ್ ಮಾಡುತ್ತಿದ್ದಾರೆ. ಇಡಿ, ಸಿಬಿಐ, ಐಟಿಯಂತಹ ತನಿಖಾ ಏಜೆನ್ಸಿಗಳು ವಿಚಾರಣೆಯ ನೆಪದಲ್ಲಿ ಕಿರುಕುಳ ನೀಡುತ್ತಿವೆ. ಈ ಸಂಸ್ಥೆಗಳಿಗೆ ಕಾಂಗ್ರೆಸ್ ಬಿಟ್ಟು ಬಿಜೆಪಿ ನಾಯಕರ ಹಗರಣಗಳು ಕಾಣುವುದಿಲ್ಲವೇ? ಎಂದು ಕೇಳಿದ್ದಾರೆ.
ಇತ್ತೀಚೆಗೆ ತೆಲಂಗಾಣದಲ್ಲಿ ಒಬ್ಬೊಬ್ಬ ಶಾಸಕನಿಗೆ 100 ಕೋಟಿ ರೂ ಆಫರ್ ನೀಡಿ ಆಪರೇಷನ್ ಕಮಲಕ್ಕೆ ಬಿಜೆಪಿ ಯತ್ನಿಸಿತ್ತು. ಅದರ ಪ್ರಮುಖ ಆರೋಪಿ ಬಿ.ಎಲ್.ಸಂತೋಷ್. ಇಡಿ ಅಧಿಕಾರಿಗಳು ಇಲ್ಲಿಯವರೆಗೂ ಸಂತೋಷ್ ಅವರ ವಿಚಾರಣೆ ನಡೆಸಿದ್ದಾರಾ? ಒಬ್ಬೊಬ್ಬ ಶಾಸಕನಿಗೆ 100 ಕೋಟಿ ರೂ ಕೊಡಲು ದುಡ್ಡು ಎಲ್ಲಿಂದ ಬಂತು?, ಆ ದುಡ್ಡಿನ ಮೂಲ ಯಾವುದು ಎಂದು ಕೇಳಿದ್ದಾರಾ?.
ಕೇವಲ ಕಾಂಗ್ರೆಸ್ ನಾಯಕರನ್ನೇ ಗುರಿಯಾಗಿಸಿಕೊಂಡು ತನಿಖೆ ನಡೆಸುವ ಇಡಿ ಅಧಿಕಾರಿಗಳು ಬಿಜೆಪಿಯ ಏಜೆಂಟ್‌ಗಳೇ? ಸಾಂವಿಧಾನಿಕ ಸಂಸ್ಥೆ ಎಂಬ ಗೌರವ ಕಳೆದುಕೊಂಡಿರುವ ಇಡಿ ರಾಜಕೀಯ ಪಕ್ಷವೊಂದರ ಚಾಕರಿ ಮಾಡುತ್ತಿದೆ. ಇಡಿ ತನ್ನ ಕೇಂದ್ರ ಕಚೇರಿ ತೊರೆದು ದೆಹಲಿಯ ದೀನ್ ದಯಾಳ್ ಉಪಾಧ್ಯಾಯ ರಸ್ತೆಯಲ್ಲಿರೋ ಬಿಜೆಪಿ ಕಚೇರಿಯಲ್ಲಿ ಕುಳಿತು ಕಾರ್ಯನಿರ್ವಹಿಸಲಿ ಎಂದು ಕಿಡಿ ಕಾರಿದರು.
ಕಾಂಗ್ರೆಸ್ ಪಕ್ಷವೂ ಕೂಡಾ ಕೇಂದ್ರ, ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಮೋದಿ ಸರ್ಕಾರದ ಸಂಸದರು, ಸಚಿವರು ಹಿಂದೂ-ಮುಸ್ಲಿಮರ ಬಗ್ಗೆ ಮಾತ್ರ ಮಾತನಾಡುತ್ತಾರೆ. ಎಲ್ಲ ಧರ್ಮಗಳೂ ಒಂದೇ. ಪರಿಶಿಷ್ಟ ಜಾತಿಯವರನ್ನು ನಾವು ಹಿಂದೂಗಳೆಂದು ಪರಿಗಣಿಸುತ್ತೇವೆ ಎಂದಾದರೆ, ಅವರನ್ನು ದೇವಾಲಯದೊಳಗೆ ಏಕೆ ಬಿಡುವುದಿಲ್ಲ?, ಅವರಿಗೆ ಸಮಾನ ಸ್ಥಾನಮಾನ ಏಕೆ ನೀಡಬಾರದು? ಮೋದಿಯವರೇ, ದೌರ್ಜನ್ಯಗಳ ವಿಚಾರದಲ್ಲಿ ಮೌನವೇಕೆ? ಎಂದು ಕೇಳಿದೆ.
ಯೋಜನೆಗಳ ಬಾಹ್ಯ ನೆರವಿನ ಅನುದಾನದಲ್ಲಿ 5 ವರ್ಷಗಳಲ್ಲಿ ಕೇಂದ್ರ ಸರ್ಕಾರ ರಾಜ್ಯಕ್ಕೆ ನೀಡಿದ್ದು ಕೇವಲ ₹45 ಕೋಟಿ. ಈ ಮೊತ್ತ ಮೋದಿಯವರು ಎರಡು ಬಾರಿ ಕರ್ನಾಟಕಕ್ಕೆ ಭೇಟಿ ನೀಡಿದರೆ ಆಗುವ ಖರ್ಚಿಗಿಂತ ಕಡಿಮೆ. ಚುನಾವಣೆ ಮುಗಿಯುವಷ್ಟರಲ್ಲಿ ಮೋದಿ ಭೇಟಿಗಾಗಿಯೇ ಸಾವಿರ ಕೋಟಿ ಖರ್ಚಾಗಬಹುದು. ಆ ಖರ್ಚಿನ ಮೊತ್ತ ರಾಜ್ಯದ ಬೊಕ್ಕಸಕ್ಕೆ ಭಾರವಾಗಬಹುದು. ತೆರಿಗೆ ಪಾಲಿನಲ್ಲಷ್ಟೇ ಅಲ್ಲ, ಕೇಂದ್ರದ ವಿಶೇಷ ಅನುದಾನದಲ್ಲೂ ಕರ್ನಾಟಕಕ್ಕೆ ಬಿಜೆಪಿ ಡಬಲ್ ದ್ರೋಹವೆಸಗಿದ ಮೋದಿಯವರು ಕರ್ನಾಟಕಕ್ಕೆ ಯಾವ ಮುಖವಿಟ್ಟುಕೊಂಡು ಚುನಾವಣೆಗಾಗಿ ತಿಂಗಳಿಗೆ ಮೂರು ಬಾರಿ ಬರುತ್ತಾರೆ? ಅಲ್ಲೂ ಬಿಜೆಪಿ, ಇಲ್ಲೂ ಬಿಜೆಪಿ ಅಭಿವೃದ್ಧಿಯ ಹೊಳೆಯೇ ಹರಿಯುತ್ತದೆ ಎಂದಿದ್ದ ರಾಜ್ಯ ಬಿಜೆಪಿ ಈ ಅನ್ಯಾಯಕ್ಕೆ ಉತ್ತರಿಸುವುದೇ? ಎಂದು ಕೇಳಿದೆ.
ಮೋದಿ ಬಂದಮೇಲೆ 'ಕಮಿಷನ್' ಬಂದ್ ಆಗಿದೆ - ರವಿಶಂಕರ್ ಪ್ರಸಾದ್, ಬಿಜೆಪಿ ಸಂಸದ ರವಿಶಂಕರ್ ಪ್ರಸಾದ್ ಅವರೇ, ನೀವು ನಮ್ಮ ಕರ್ನಾಟಕದ ಕಡೆಯೂ ಸ್ವಲ್ಪ ನೋಡಿ. ಇಲ್ಲಿ ನಿಮ್ಮದೇ 40 ಪರ್ಸಂಟ್ ಸರ್ಕಾರ ಇದೆ. ನಿಮ್ಮ ಹೇಳಿಕೆ ನೋಡಿ ಇಲ್ಲಿ ನಿಮ್ಮವರೇ ನಗುತ್ತಿದ್ದಾರೆ ಎಂದು ಲೇವಡಿ ಮಾಡಿದೆ.
ನೆಟೆ ರೋಗದಿಂದ ರಾಜ್ಯಾದ್ಯಂತ ಅಪಾರ ಪ್ರಮಾಣದ ತೊಗರಿ ಬೆಳೆ ನಾಶವಾಗಿದೆ. ಸರ್ಕಾರ ನಾಮಕಾವಸ್ಥೆಗೆ ಕೆಲವು ಬಾಗಕ್ಕೆ ಮಾತ್ರ ಪರಿಹಾರ ನೀಡಿದೆ. ವಿಜಯಪುರ ಜಿಲ್ಲೆಯನ್ನು ಪರಿಹಾರ ನೀಡುವಲ್ಲಿ ಪರಿಗಣಿಸದೆ ಇರುವುದೇಕೆ ಬಸವರಾಜ ಬೊಮ್ಮಾಯಿ ಅವರೇ? ತೇಜಸ್ವಿ ಸೂರ್ಯನಂತೆ ತಾವೂ 'ರೈತರಿಗೆ ಪರಿಹಾರ ಕೊಟ್ಟರೆ ದೇಶಕ್ಕೆ ಲಾಭವಿಲ್ಲ' ಎಂದು ತೀರ್ಮಾನಿಸಿದ್ದೀರಾ? ಎಂದು ಪ್ರಶ್ನಿಸಿದೆ.
ಎಲ್ಲಾ ಜಿಲ್ಲಾಸ್ಪತ್ರೆಗಳನ್ನು ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಗಳಾಗಿ ಪರಿವರ್ತಿಸುತ್ತೇವೆ ಎಂದಿತ್ತು ಬಿಜೆಪಿ. ಆದರೆ ಈಗ ಈಗಾಗಲೇ ಇದ್ದ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗಳಲ್ಲೇ ಸಮರ್ಪಕ ವಿದ್ಯುತ್ ವ್ಯವಸ್ಥೆ ಇಲ್ಲ. ಬೆಡ್, ವೆಂಟಿಲೇಟರ್, ಆಕ್ಸಿಜನ್ ದೊರಕುತ್ತಿಲ್ಲ. ಈಗ ಇರುವುದು ಮಲ್ಟಿ ಭ್ರಷ್ಟಾಚಾರ ಮಾತ್ರ ಎಂದು ಆರೋಪಿಸಿದೆ.
ಇದನ್ನೂ ಓದಿ: 'ಸಾಚಾತನ ನಿರೂಪಿಸುವುದು ಬಿಟ್ಟು ಹಾವು ತುಳಿದಂತೆ ಹೌಹಾರುವುದೇಕೆ?': ಕಾಂಗ್ರೆಸ್