ಬೆಂಗಳೂರು: ಡಿಕೆಶಿಯನ್ನ ಈಗಾಗಲೇ ಇಡಿ ವಶಕ್ಕೆ ಪಡೆದು ತನಿಖೆ ಮುಂದುವರೆಸಿದೆ. ಆದ್ರೆ, ಇದೀಗ ಜಾರಿ ನಿರ್ದೇಶನಾಲಯ ಡಿಕೆಶಿ ಪುತ್ರಿ ಐಶ್ವರ್ಯಗೆ ಸಮನ್ಸ್ ಜಾರಿ ಮಾಡಿ ಸೆ.12 ಅಥವಾ 13ಕ್ಕೆ ವಿಚಾರಣೆಗೆ ಹಾಜರಾಗುವಂತೆ ತಿಳಿಸಿದೆ.
ಮಾಜಿ ಇಂಧನ ಸಚಿವ ಡಿ ಕೆ ಶಿವಕುಮಾರ್ ಪುತ್ರಿ ಐಶ್ವರ್ಯಾ ಹೆಸರಿನಲ್ಲಿ ಡಿಕೆಶಿ ಬಹುಪಾಲು ಆಸ್ತಿಯನ್ನ ಮಾಡಿದ್ದಾರೆ ಎನ್ನಲಾಗಿದೆ. ಚುನಾವಣಾ ಆಯೋಗಕ್ಕೆ ಸಲ್ಲಿಸಿದ ಅಫಿಡವಿಟ್ನಲ್ಲಿ ಕೂಡ ಮಗಳ ಆಸ್ತಿಯನ್ನ ಉಲ್ಲೇಖ ಮಾಡಿದ್ದಾರೆ. ಐಶ್ವರ್ಯ ಹೆಸರಿನಲ್ಲಿ 102.88 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ ಮತ್ತು 5.17 ಕೋಟಿ ರೂಪಾಯಿ ಮೌಲ್ಯದ ಚರಾಸ್ತಿ ಘೋಷಿಸಿಕೊಂಡಿದ್ದಾರೆ.
ಅಷ್ಟು ಮಾತ್ರವಲ್ಲದೇ ಐಶ್ವರ್ಯ ಹೆಸರಿನಲ್ಲಿ ಕಾಲೇಜು, ವಿದೇಶದಲ್ಲಿ ಪ್ರಾಪರ್ಟಿ ಕೂಡ ಇದೆ. ಹೀಗಾಗಿ ಡಿಕೆಶಿ ಮನೆ ಮೇಲೆ ಐಟಿ ದಾಳಿ ನಡೆಸಿ ಹಲವಾರು ಮಾಹಿತಿ ಕಲೆಹಾಕಲಾಗಿದೆ. ಹಾಗೆ ಐಟಿ, ಐಶ್ವರ್ಯಳನ್ನ ವಿಚಾರಣೆಗೆ ಒಳಪಡಿಸಿ ಇಡಿ ಗೆ ಮಾಹಿತಿಯನ್ನ ರವಾನೆ ಮಾಡಿತ್ತು. ಸದ್ಯ ಜಾರಿ ನಿರ್ದೇಶನಾಲಯದ ವಿಚಾರಣೆಗೆ ಹಾಜರಾಗುವಂತೆ ಐಶ್ವರ್ಯಗೆ ಸಮನ್ಸ್ ಜಾರಿ ಮಾಡಲಾಗಿದೆ.