ಬೆಂಗಳೂರು : ಸಿಲಿಕಾನ್ ಸಿಟಿಯಲ್ಲಿ ಹಚ್ಚಹಸಿರು ಮರುಕಳಿಸಬೇಕೆಂಬ ಉದ್ದೇಶದಿಂದ ಶ್ರೀರಾಮ್ ಎಂಬುವರು ಪ್ರತಿನಿತ್ಯ 2-3 ಗಂಟೆಗಳ ಕಾಲ ಮತ್ತು ವಾರದಲ್ಲಿ ಎರಡು ದಿನ ಪ್ರಕೃತಿ ಮಾತೆಗಾಗಿ ಮುಡುಪಾಗಿಟ್ಟಿದ್ದಾರೆ. ಬೆಂಗಳೂರು ಪೂರ್ವ ತಾಲೂಕು ಕೆಆರ್‌ಪುರ ಕ್ಷೇತ್ರದ ನಿವಾಸಿಯಾದ ಎಂ ಶ್ರೀರಾಮ್ ಪ್ರಕೃತಿ ಮಾತೆಗಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟಿದ್ದಾರೆ. ಸರ್ಕಾರಿ ಬ್ಯಾಂಕ್ನಲ್ಲಿ ಉದ್ಯೋಗಿಯಾಗಿರುವ 57 ವರ್ಷದ ಶ್ರೀರಾಮ್ ಅವರ ಜೀವನಾವಧಿಯಲ್ಲಿ ಸರಿಸುಮಾರು 20 ಸಾವಿರ ಗಿಡಗಳನ್ನು ನೆಡುವುದರ ಜೊತೆಗೆ ಪೋಷಣೆ ಸಹ ಮಾಡುತ್ತಿದ್ದಾರೆ.
ಕೆಆರ್‌ಪುರ ಭಾಗದಲ್ಲಿ 10 ಸಾವಿರ ಗಿಡ : ಮಳೆಗಾಲದಲ್ಲಿ ಅತಿ ಹೆಚ್ಚು ಗಿಡಗಳನ್ನು ನೆಡುವ ಹವ್ಯಾಸವನ್ನು ಬೆಳೆಸಿಕೊಂಡಿರುವ ಇವರು ಕೆ ಆರ್ ಪುರ ಭಾಗದಲ್ಲಿ ಹತ್ತು ಸಾವಿರ ಗಿಡಗಳನ್ನು ನೆಟ್ಟಿದ್ದಾರೆ. ಕೆಆರ್ ಪುರದ ಸಾರ್ವಜನಿಕರ ಆಸ್ಪತ್ರೆ ಆವರಣ ಹಚ್ಚ ಹಸಿರಿನಿಂದ ಕೂಡಿರಲು ಇವರೇ ಕಾರಣ. ಇಷ್ಟು ಮಾತ್ರವಲ್ಲದೆ ಬೆಂಗಳೂರು, ಬೆಂಗಳೂರು ಗ್ರಾಮಾಂತರ ಚಿಂತಾಮಣಿ ಸೇರಿದಂತೆ ವಿವಿಧ ಭಾಗಗಳಲ್ಲಿ 5 ಸಾವಿರಕ್ಕೂ ಹೆಚ್ಚು ಗಿಡಗಳನ್ನು ನೆಟ್ಟಿದ್ದಾರೆ.
ಶಿವಕುಮಾರ್ ಸ್ವಾಮೀಜಿ ಒಡನಾಟದಿಂದ ಪರಿಸರ ಪ್ರೇಮ : ಇನ್ನೂ ಶ್ರೀರಾಮ್ ಅವರು ಪರಿಸರ ಪ್ರೇಮಿ ಆಗಲು ಮುಖ್ಯ ಕಾರಣ ಸಿದ್ದಗಂಗಾ ಮಠದಲ್ಲಿ 3 ವರ್ಷಗಳ ಕಾಲ ಶಿಕ್ಷಣವನ್ನು ಪಡೆದುಕೊಂಡಿದ್ದಂತೆ. ಶ್ರೀ ಶಿವಕುಮಾರ ಸ್ವಾಮಿಗಳ ಒಡನಾಟದಿಂದ ಇವರಿಗೆ ಪ್ರಕೃತಿಯ ಮೇಲೆ ಅತೀವ ಪ್ರೀತಿ ಹುಟ್ಟುವಂತೆ ಮಾಡಿತ್ತು.
ನಗರದ ಬಹುತೇಕ ಭಾಗಗಳಲ್ಲಿ ಪಕ್ಷಿಗಳಿಗೆ ಆಹಾರ ಸಿಗಲಿ ಎಂಬ ಉದ್ದೇಶದಿಂದ ಅರಳಿ ಮರ, ಅತ್ತಿಮರ, ನೇರಳೆ ಮರ, ಹಿಪ್ಪೆಮರ, ಬೆಟ್ಟದ ನೆಲ್ಲಿಕಾಯಿ ಸೇರಿ ಹಲವು ಸಸಿಗಳನ್ನು ನೆಟ್ಟಿದ್ದಾರೆ. ಆಮ್ಲಜನಕ ಅಧಿಕವಾಗಿ ನೀಡುವ ರೋಷಯು, ಕದಂಬ, ಸಂಪಿಗೆ, ದೇವಗಿರಿ, ಕಾಡುಮಲ್ಲಿಗೆ, ಅರ್ಜುನ ಅಶೋಕ, ಲಿಂಗದಮರದಂತಹ ಬಹುತೇಕ ಗಿಡಗಳನ್ನು ನೆಡುವುದರ ಜೊತೆಗೆ ಪೋಷಿಸುತ್ತಿದ್ದಾರೆ. ವಾಯು ಮಾಲಿನ್ಯ ತಡೆಗೆ ಪರಿಸರ ವೃತ್ತಿ ಒಂದೇ ಪರಿಹಾರ ಎಂಬುದು ಅವರ ಅಭಿಪ್ರಾಯವಾಗಿದೆ.

ಇದನ್ನೂ ಓದಿ: ದಟ್ಟ ಅರಣ್ಯದ ನಡುವೆ ಪುಟ್ಟ ಶಾಲೆ: ಪಾಠದ ಜೊತೆ ಪರಿಸರ ಜ್ಞಾನ ನೀಡುವ ದೇಗುಲ
ಕಳೆದ 15 ವರ್ಷಗಳ ಇವರ ಪರಿಸರ ಪ್ರೇಮಕ್ಕೆ ಸಂಘ-ಸಂಸ್ಥೆಗಳು ಕೆಲವು ಸೌಲಭ್ಯಗಳನ್ನು ಕಲ್ಪಿಸಿವೆ. ಐಕ್ಯ ಫೌಂಡೇಶನ್, ಸುತ್ತಮುತ್ತಲಿನ ಸಮಾಜ ಸೇವಕರು ಕೈಜೋಡಿಸಿ ಸಸಿಗಳ ನೀರು ಪೂರೈಕೆಗಾಗಿ ಟ್ರ್ಯಾಲಿಯನ್ನು ನೀಡಿದ್ದಾರೆ. ಇದರ ಮೂಲಕ ಪ್ರತಿದಿನ ಮುಂಜಾನೆ 3 ಗಂಟೆಗಳ ಕಾಲ ನೀರಿನ ಪೂರೈಕೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುತ್ತಾರೆ.