ಬೆಂಗಳೂರು: ದೇಶದ ಆರ್ಥಿಕತೆ 5 ಟ್ರಿಲಿಯನ್ ಯುಎಸ್ ಡಾಲರ್ ನಷ್ಟಾಗಬೇಕು. ಜಗತ್ತಿನ ಟಾಪ್ 5 ರಾಷ್ಟ್ರಗಳ ಸಾಲಿನಲ್ಲಿ ಭಾರತ ಇರಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಆಶಯವಾಗಿದ್ದು, ಈ ನಿಟ್ಟಿನಲ್ಲಿ ದಿಟ್ಟ ಹೆಜ್ಜೆ ಇಟ್ಟಿದ್ದಾರೆ ಎಂದು ಕೇಂದ್ರ ಸಚಿವ ಡಿ.ವಿ ಸದಾನಂದಗೌಡ ಹೇಳಿದ್ದಾರೆ.
ಪ್ರೆಸ್ ಕ್ಲಬ್ ನಲ್ಲಿ ಕೇಂದ್ರ ಸರ್ಕಾರದ 100 ದಿನದ ಸಾಧನೆಯ ಕಿರುಹೊತ್ತಿಗೆಯನ್ನು ಕೇಂದ್ರ ಸಚಿವ ಡಿ.ವಿ ಸದಾನಂದಗೌಡ ಬಿಡುಗಡೆಗೊಳಿಸಿದರು. ನಂತರ ಮಾತನಾಡಿದ ಅವರು, ಪ್ರತಿ ವರ್ಷ ಸಾಧನೆ, ಭರವಸೆ ಈಡೇರಿಕೆ ಪ್ರಕಟಿಸುವ ನಡೆಯಿಂದ ನಮ್ಮ ಆಡಳಿತದ ವೇಗ ಹೆಚ್ಚಾಗಿದೆ. ಒಂದು ದೇಶ ಒಂದು ಕಾನೂನು ಎನ್ನುವಂತೆ ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ರದ್ದು ಮಾಡುವ ಮೂಲಕ ಆ ರಾಜ್ಯದ ಅಭಿವೃದ್ಧಿಗೆ ಮುನ್ನುಡಿ ಬರೆಯಲಾಗಿದೆ ಎಂದರು.
ಸಾರ್ವಜನಿಕ ಬ್ಯಾಂಕ್ ವಿಲೀನ ಒಂದು ದಿಟ್ಟ ಹೆಜ್ಜೆ. ಇದರಿಂದ ಆರ್ಥಿಕತೆಗೆ ಚೈತನ್ಯ ಬರಲಿದೆ ಎನ್ನುವ ಮೂಲಕ ಬ್ಯಾಂಕ್ ವಿಲೀನವನ್ನು ಸದಾನಂದಗೌಡ ಸಮರ್ಥಿಸಿಕೊಂಡರು. ಆಟೋ ಮೊಬೈಲ್ ಕ್ಷೇತ್ರ ಆರ್ಥಿಕ ಸಂಕಷ್ಟ ಸಿಲುಕಿದ್ದು ಇದರ ಉತ್ತೇಜನಕ್ಕೆ ಕೇಂದ್ರ ಮುಂದಾಗಿದೆ. ಹೊಸ ವಾಹನ ಖರೀದಿಗೆ ಇದ್ದ ನಿರ್ಬಂಧ ತೆರವು, ಬಿಎಸ್ 4 ವಾಹನ ನೋಂದಣಿ ವಿಸ್ತರಣೆ, ವಿದ್ಯುತ್ ವಾಹನಕ್ಕೆ ತೆರಿಗೆ ವಿನಾಯಿತಿ ನೀಡಲಾಗಿದೆ ಎಂದರು. ದೇಶದ ರೈಲ್ವೆ ಬೆಳವಣಿಗೆಯ ಚಾಲನ ಶಕ್ತಿ ಮಾಡಲು ಮಾರ್ಗಸೂಚಿ ರೂಪಿಸಿದ್ದು, ರೈಲ್ವೆಗೆ 2030 ರವರೆಗೆ 50 ಲಕ್ಷ ಕೋಟಿ ಹೂಡಿಕೆ ಮಾಡಲಾಗುತ್ತದೆ ಎಂದರು.
ನೆರೆ ಪರಿಹಾರದ ಹಣ ಇನ್ನೂ ಯಾವುದೇ ರಾಜ್ಯಕ್ಕೂ ಬಿಡುಗಡೆಯಾಗಿಲ್ಲ ಸದ್ಯದಲ್ಲೇ ಇತರ ರಾಜ್ಯಗಳ ಜೊತೆ ನಮ್ಮ ರಾಜ್ಯಕ್ಕೂ ಪರಿಹಾರದ ಹಣ ಬರಲಿದೆ. ತುರ್ತು ಪರಿಸ್ಥಿತಿ ನಿಯಂತ್ರಣಕ್ಕೆ ಈಗ ಹಣಕಾಸಿನ ಕೊರತೆ ಇಲ್ಲ ಎಂದು ಕೇಂದ್ರ ಸಚಿವ ಡಿ.ವಿ ಸದಾನಂದಗೌಡ ಸ್ಪಷ್ಟಪಡಿಸಿದ್ದಾರೆ.
ಒಕ್ಕಲಿಗೆ ಸಮುದಾಯದ ಮೇಲೆ ಬಿಜೆಪಿ ಸರ್ಕಾರ ಸೇಡಿನ ರಾಜಕಾರಣ ಮಾಡುತ್ತಿದೆ ಎನ್ನುವುದು ನಿರಾಧಾರ ಆರೋಪ. ಜಾತಿ, ಹಣದ ರಾಜಕಾರಣ ಎಲ್ಲರೂ ಮಾಡುತ್ತಾರೆ. ನಿನ್ನೆ ನಡೆದ ಹೋರಾಟವನ್ನು ನೋಡುವುದಾದರೆ ರಾಮಲಿಂಗಾರೆಡ್ಡಿ, ಸೌಮ್ಯರೆಡ್ಡಿ, ದಿನೇಶ್ ಗುಂಡೂರಾವ್, ಉಗ್ರಪ್ಪ ಒಕ್ಕಲಿಗರಲ್ಲ, ಇದನ್ನು ಒಕ್ಕಲಿಗರ ಹೋರಾಟ ಎಂದು ಟ್ಯಾಗ್ ಮಾಡಬೇಕಿಲ್ಲ, ಯಾರು ನೇತೃತ್ವ ವಹಿಸಿದ್ದು ಎಂದು ಎಲ್ಲಾ ಜನ ನೋಡುತ್ತಿದ್ದಾರೆ. ಇಷ್ಟು ವರ್ಷ ಒಕ್ಕಲಿಗರ ನಾಯಕರು ಎನ್ನುವ ಬೇರೆ ಟೀಂ ಇತ್ತು ಆ ಟೀಂ ನಿನ್ನೆ ಇರಲಿಲ್ಲವಲ್ಲ ಎಂದು ಪರೋಕ್ಷವಾಗಿ ದೇವೇಗೌಡರ ಕುಟುಂಬದ ಕಡೆ ಬೆಟ್ಟು ಮಾಡಿದರು.