ಬೆಂಗಳೂರು : ಹೆಬ್ಬಾಳ ಕ್ಷೇತ್ರದಲ್ಲಿ ಪತ್ತೆಯಾಗಿರುವ ನಕಲಿ ವೋಟರ್ ಐಡಿ ಪತ್ತೆ ಪ್ರಕರಣದ ತನಿಖೆಯನ್ನು ಸಿಸಿಬಿ ಬದಲಾಗಿ ಸಿಬಿಐ ಅಥವಾ ಎನ್ಐಎ ತನಿಖೆಗೆ ಒಪ್ಪಿಸಬೇಕು. ರಾಷ್ಟ್ರೀಯ ಭದ್ರತೆಗೆ ವಿರುದ್ಧವಾಗಿರುವ ಕೆಲಸ ಮಾಡಲಾಗಿದೆ. ಸಚಿವ ಬೈರತಿ ಸುರೇಶ್ ತನ್ನ ಚುನಾವಣಾ ಗೆಲುವಿಗೋಸ್ಕರ ಇದನ್ನು ಮಾಡಿಸಿದ್ದಾರೆ. ಹಾಗಾಗಿ ಪ್ರಕರಣದಲ್ಲಿ ಬೈರತಿ ಸುರೇಶ್ ಅವರನ್ನೂ ಕೂಡಾ ವಿಚಾರಣೆಗೆ ಒಳಪಡಿಸಬೇಕು. ಆರೋಪ ಕೇಳಿ ಬಂದಿರುವ ಎಂಎಸ್ಎಲ್ ಟೆಕ್ನೋ ಸಂಸ್ಥೆ ಮುದ್ರಿಸಿರುವ ಆಧಾರ್ ಕಾರ್ಡ್‌ಗಳನ್ನು ಅಮಾನತು ಮಾಡಬೇಕು ಎಂದು ಮಾಜಿ ಸಚಿವ ಸುರೇಶ್ ಕುಮಾರ್ ಆಗ್ರಹಿಸಿದ್ದಾರೆ.
ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಹೆಬ್ಬಾಳದ ಎಂಎಸ್ಎಲ್ ಟೆಕ್ನೋ ಸೆಂಟರ್ ಮೇಲೆ ದಾಳಿ ಮಾಡಲಾಗಿದೆ. ಗುರುತಿನ ಚೀಟಿಯಾದ ಆಧಾರ್ ಕಾರ್ಡ್, ಡಿಎಲ್, ಪಾನ್ ಕಾರ್ಡ್‌ಗಳನ್ನು ನಕಲಿ ಸೃಷ್ಟಿ ಮಾಡಿ ತಮ್ಮ ಸ್ವಂತ ಉಪಯೋಗ ಹಾಗೂ ಕಾನೂನು ಬಾಹಿರ ಚಟುವಟಿಕೆಗೆ ಬಳಕೆ ಮಾಡಿಕೊಳ್ಳಲಾಗುತ್ತಿದೆ. ನೈಜ ದಾಖಲೆ ಎಂದು ಹಣ ಪಡೆಯಲಾಗುತ್ತಿದೆ. ಇದಕ್ಕೆ ಕಾರಣರಾದ ಮೌನೇಶ್ ಕುಮಾರ್ ಹಾಗೂ ಸಹಚರರಾದ ರಾಘವೇಂದ್ರ ಹಾಗೂ ಭಗತ್ ವಿರುದ್ಧ ಕ್ರಮಕ್ಕೆ ದೂರು ನೀಡಲಾಗಿದೆ ಎಂದರು.
ಐಪಿಸಿ ಸೆಕ್ಷನ್‌ಗಳ ಅಡಿ ದೂರು ದಾಖಲಾಗಿದೆ. ಆಧಾರ್ ಕಾರ್ಡ್ ನಕಲಿ ಸೃಷ್ಟಿ ಮಾಡುವುದು ರಾಷ್ಟ್ರೀಯ ಭದ್ರತಾ ದೃಷ್ಟಿಯಿಂದ ಅಪರಾಧ. ಇವರೆಲ್ಲ ಅಪರಾಧಿಗಳು. ಹೆಬ್ಬಾಳ ಶಾಸಕ ಬೈರತಿ ಸುರೇಶ್ ಅವರ ಆಪ್ತರು. ನಗರಾಭಿವೃದ್ಧಿ ಸಚಿವರ ಆಪ್ತರು ಎನ್ನುವುದಕ್ಕೆ ನನ್ನ ಬಳಿ ದಾಖಲೆ ಇದೆ. ಮೌನೇಶ್ ಕುಮಾರ್ ಗಾಡಿ ಓಡಿಸುತ್ತಿದ್ದಾರೆ. ಅವರ ಹಿಂದೆ ಬೈರತಿ ಸುರೇಶ್ ಕುಳಿತಿದ್ದಾರೆ. ಅವರು ಅಂದುಕೊಂಡಿರಬಹುದು ಒಳ್ಳೆಯ ದಾರಿಯಲ್ಲಿ ಕರೆದುಕೊಂಡು ಹೋಗಬಹುದು ಅಂತ. ನಮ್ಮ ಸೋತ ಅಭ್ಯರ್ಥಿ ಜಗದೀಶ್ ಕುಮಾರ್ ಅವರು ಫೇಕ್ ಹಾಗೂ ಫೋರ್ಜರಿ ಐಡಿ ಕಾರ್ಡ್ ಸೃಷ್ಟಿ ಮಾಡುವುದನ್ನು ಮೊದಲಿಂದಲೂ ವಿರೋಧಿಸಿದ್ದರು. ಕಾಂಗ್ರೆಸ್‌ನ ಒಬ್ಬೇ ಒಬ್ಬ ನಾಯಕರು ರಾಷ್ಟ್ರೀಯ ಭದ್ರತೆ ವಿಚಾರದ ಬಗ್ಗೆ ಒಂದೇ ಒಂದು ಮಾತನಾಡಿಲ್ಲ ಎಂದು ದೂರಿದರು.
ಸಿಬಿಐ ಅಥವಾ ಎನ್ಐಎ ತನಿಖೆ ಮಾಡಬೇಕು : ಸಿಎಂಗೆ ಸುರೇಶ್ ಅತ್ಯಾಪ್ತರು. ರಾಷ್ಟ್ರೀಯ ಭದ್ರತಾ ದೃಷ್ಟಿಯಿಂದ ಇದೊಂದು ಗಂಭೀರ ಪ್ರಕರಣವಾಗಿರೋ ಹಿನ್ನೆಲೆಯಲ್ಲಿ ಇದನ್ನು ಸಿಸಿಬಿ ಕೈಯಲ್ಲಿ ತನಿಖೆ ಮಾಡಲು ಆಗಲ್ಲ. ಸಿಬಿಐ ಅಥವಾ ಎನ್ಐಎ ಮೂಲಕ ತನಿಖೆ ಮಾಡಿಸಬೇಕು. ಇವರ ಅಂಗಡಿ ಕೂಡಲೇ ಮುಚ್ಚಬೇಕು. ಅಪರಾಧಿಗಳು ತಪ್ಪಿಸಿಕೊಳ್ಳದ ರೀತಿ ಕ್ರಮ ತೆಗೆದುಕೊಳ್ಳಬೇಕು. ಇದು ಸಮಾಜದ ಅಳಿವು, ಉಳಿವಿನ ಪ್ರಶ್ನೆ. ಆ ಸಂಸ್ಥೆ ಮಾಡಿರೋ ದಾಖಲೆ ನಾಶಪಡಿಸಬೇಕು. ಸಚಿವ ಬೈರತಿ ಸುರೇಶ್ ಇವರಿಗೆಲ್ಲ ಸಹಕಾರ ಕೊಟ್ಟಿದ್ದಾರೆ. ಇವರು ಆಧಾರ್ ಕಾರ್ಡ್ ಮಾಡಿದ್ದಾರೆ ಅಂದರೆ ಇವರ ಅಟ್ಟಹಾಸ ಎಷ್ಟಿರಬಹುದು. ಬರ್ತ್ ಸರ್ಟಿಫಿಕೇಟ್ ಇಲ್ಲದೇ ಹೋದ್ರೂ, ಆಧಾರ್ ಕಾರ್ಡ್ ಮಾಡಲಾಗಿದೆ. ಇದನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು ಎಂದರು.
ಬೈರತಿ ಸುರೇಶ್ 2023ರ ಚುನಾವಣೆಗೆ ಗೆಲ್ಲಲು ಈ ದಾಖಲೆ ಮಾಡಿಸಲಾಗಿದೆ. ಕಾಲಿಲ್ಲದ ಅಶ್ವ ಗೂನಾದರೇನು ಅಂತ ಅಂದುಕೊಂಡಿದ್ದಾರೆ. ಇದನ್ನ ಇಲ್ಲಿಗೆ ಬಿಡೋದಿಲ್ಲ.ಇದನ್ನ ಚುನಾವಣಾ ಆಯೋಗಕ್ಕೆ ತೆಗೆದುಕೊಂಡು ದೂರು ಕೊಡಲಿದ್ದೇವೆ. ಇನ್ನು ಎಲ್ಲೆಲ್ಲಿ ಈ ರೀತಿ ಅಕ್ರಮ ಆಗಿದೆಯೋ ಅದನ್ನ ಬಯಲಿಗೆಳೆಯಬೇಕು. ಇದರಲ್ಲಿ ಯಾರಿದ್ದರೂ ಬಿಡೋದಿಲ್ಲ ಅಂತ ಸಿಎಂ ಹೇಳ್ತಾರೆ. ಈ ವಿಚಾರದಲ್ಲಿ ನೆಂಟ, ಸಂಬಂಧಿ ಅನ್ನೋದು ಬಿಟ್ಟು ಸಿಬಿಐಗೆ ತನಿಖೆಗೆ ಕೊಡಬೇಕು. ಇವರ ಜೊತೆಗೆ ಸಚಿವ ಬೈರತಿ ಸುರೇಶ್ ಕೂಡ ತನಿಖೆ ಮಾಡಬೇಕು. ಸಿಕ್ಕಿರೋ ದಾಖಲೆಗಳನ್ನು ಸ್ಕ್ರಾಪ್ ಮಾಡಿ, ನಾಶಪಡಿಸಬೇಕು ಎಂದು ಆಗ್ರಹಿಸಿದರು.
ನಮಗೆ ಗೊತ್ತಿರೋ ಪ್ರಕಾರ ನಾಲ್ಕು ನಕಲಿ ಆಧಾರ್ ಕಾರ್ಡ್ ಸಿಕ್ಕಿದೆ. ಇದರ ಜಾಲ ತುಂಬಾ ದೊಡ್ಡದಿದೆ. ನೂರಕ್ಕೂ ಹೆಚ್ಚು ಆಧಾರ್ ಕಾರ್ಡ್ ಮಾಡಿರಬಹುದು. ಹಾಗಾಗಿ ಬಹಳ ದೊಡ್ಡ ಮಟ್ಟದ ತನಿಖೆ ಆಗಬೇಕು. ಬೈರತಿ ಸುರೇಶ್ ಅವರು ನನ್ನ ಜೊತೆ ಅನೇಕರು ಫೋಟೋ ತೆಗೆಸಿಕೊಂಡಿದ್ದಾರೆ ಅದಕ್ಕೆ ನಾನು ಹೊಣೆಯಾ ಅನ್ನೋ ವಿಚಾರ ಎತ್ತಿದ್ದಾರೆ. ಆದರೆ ನಾನೂ ಒಬ್ಬ ಜನಪ್ರತಿನಿಧಿ. ನನ್ನ ಜೊತೆಯಲ್ಲೂ ಅನೇಕರು ಫೋಟೋ ತೆಗೆಸಿಕೊಳ್ತಾರೆ. ಆದರೆ, ಸಚಿವರು ನಗುವಿನಲ್ಲಿ ಮೌನೇಶ್ ಜೊತೆ ಖುಷಿಯಲ್ಲಿ ಗಾಡಿ ಏರಿ ಕುಳಿತಿದ್ದಾರೆ. ಹಾಗಾಗಿ ಅವರು ಸಚಿವರಿಗೆ ಆಪ್ತರು ಪರಿಚಿತರೇ ಆಗಿರಲಿದ್ದಾರೆ ಎಂದರು.
ರಾಜ್ಯ ಕಾರ್ಯಕಾರಿಣಿ ಸದಸ್ಯ ಹಾಗು ವಕೀಲರ ಸಂಘದ ಅಧ್ಯಕ್ಷ ವಿವೇಕ್ ರೆಡ್ಡಿ ಮಾತನಾಡಿ, ಪೌರತ್ವ ಸಿಗುವುದೇ ಆಧಾರ್ ಕಾರ್ಡ್ ನಿಂದ. ನನ್ನ ಬಳಿ ಸಿಟಿಜನ್ ಶಿಪ್ ಇಲ್ಲ ಅಂದಾಗ ಆಧಾರ್ ಕಾರ್ಡ್ ಕೊಡಲಾಗುತ್ತದೆ. ಆದರೆ, ಬರ್ತ್ ಸರ್ಟಿಫಿಕೇಟ್ ಕೊಡುವ ಮೊದಲು ಅವರು ಹುಟ್ಟಿರೋ ಜಾಗ, ಊರಿನವರು ಸಾಕ್ಷಿ ಹೇಳಬೇಕು.
ತಮ್ಮ ತಂದೆ, ತಾಯಿ ಸತ್ತಿದ್ದರೆ ಅವರ ಸಮಾದಿ ಜಾಗದಿಂದ ಸಾಕ್ಷಿ ಕೊಡಬೇಕು. ಒಂದು ಬರ್ತ್ ಸರ್ಟಿಫಿಕೇಟ್ ಕೊಡಬೇಕಾದರೆ ಇಷ್ಟೆಲ್ಲಾ ಮಾಡಬೇಕು. ಆದರೆ, ಇವರು ಫೇಕ್ ಸರ್ಟಿಫಿಕೇಟ್ ಮಾಡಿದ್ದಾರೆ. ಇದರ ಮೂಲ, ಜಾಲವನ್ನ ಪತ್ತೆ ಹಚ್ಚಬೇಕು. ಪೊಲೀಸರು ಕರೆದು ವಿಚಾರಣೆ ಮಾಡಿ ಬಿಟ್ಟು ಕಳಿಸಿದ್ದಾರೆ. ಇದರಲ್ಲಿ ಪೊಲೀಸರೂ ಶಾಮೀಲಾಗಿದ್ದಾರಾ ಅನ್ನೋದು ಗೊತ್ತಾಗಬೇಕು.ಇದು ಗಂಭೀರವಾದ ವಿಚಾರ ಎಂದರು.
ಹೆಬ್ಬಾಳ ಬಿಜೆಪಿಯ ಪರಾಜಿತ ಅಭ್ಯರ್ಥಿ ಕಟ್ಟಾ ಜಗದೀಶ್ ಮಾತನಾಡಿ, ಚುನಾವಣೆ ವೇಳೆಯಲ್ಲೇ ಎಲೆಕ್ಷನ್ ಕಮೀಷನ್ ಗೆ ದೂರು ಕೊಟ್ಟೆವು. ಆದರೆ ಆಗ ಯಾವುದೇ ಕ್ರಮ ಕೈಗೊಂಡಿಲ್ಲ. ಚುನಾವಣೆ ಹೊತ್ತಿನಲ್ಲಿ ನಾನು ಕೇಂದ್ರ ಚುನಾವಣಾ ಆಯೋಗಕ್ಕೂ ಪತ್ರ ಬರೆದು ದಾಖಲೆ ಕೊಟ್ಟಿದ್ದೆ. ಎಲ್ಲಾ ವಿಚಾರ ಗಮನ ಸೆಳೆದಿದ್ದೆವು. ಆದರೆ ಆಗ ಯಾವುದೇ ಕ್ರಮ ಆಗಲಿಲ್ಲ. ಈಗ ಮತ್ತೆ ಈ ವಿಚಾರವನ್ನು ಮುಂದಿಟ್ಟು ಹೋರಾಟಕ್ಕೆ ಮುಂದಾಗಿದ್ದೇವೆ ಎಂದರು.
ಇದನ್ನೂ ಓದಿ : ಏಳು ಜನ್ಮ ಎತ್ತಿ ಬಂದರೂ ರಾಮನಗರ ಜಿಲ್ಲೆ ಛಿದ್ರ ಮಾಡಲು ಸಾಧ್ಯವಿಲ್ಲ, ಅದೇನು ಕಲ್ಲುಬಂಡೆಯೇ?: ಡಿಕೆಶಿಗೆ ಹೆಚ್ಡಿಕೆ ತಿರುಗೇಟು