ಬೆಂಗಳೂರು : ಹುಟುಹಬ್ಬದ ದಿನ ಕೇಕ್ ಕತ್ತಿಯಲ್ಲಿ ಕತ್ತರಿಸಿ ವಿವಾದ ಸೃಷ್ಟಿಸಿದ ದುನಿಯಾ ವಿಜಯ್ ದಕ್ಷಿಣ ವಿಭಾಗದ ಗಿರಿನಗರ ಪೊಲೀಸ್ ಠಾಣೆಗೆ ವಿಚಾರಣೆಗೆ ಹಾಜರಾಗಿದ್ದರು. ಪೊಲೀಸರು ಘಟನೆ ಕುರಿತು ಉತ್ತರ ನೀಡುವಂತೆ ನೋಟಿಸ್ ನೀಡಿದ ಹಿನ್ನೆಲೆ ಇಂದು ಗಿರಿನಗರ ಪೊಲೀಸ್ ಠಾಣೆಗೆ ಹಾಜರಾಗಿ ಘಟನೆಯ ಕುರಿತು ವಿವರಣೆ ನೀಡಿದ್ದಾರೆ.
ಇನ್ನು ಪೊಲೀಸರ ಎದುರು ಹುಟ್ಟುಹಬ್ಬದ ಆಚರಣೆ ವೇಳೆ ಯಾರೋ ಅಭಿಮಾನಿ ಕತ್ತಿ ಕೊಟ್ಟರು. ಕತ್ತಿಯಲ್ಲಿ ಕಟ್ ಮಾಡೋದು ತಪ್ಪು ಅಂತಾ ನನಗೆ ಗೊತ್ತಿರಲಿಲ್ಲ. ಅದು ಯಾರು ತಂದು ಕೊಟ್ರು ಅಂತ ಕೂಡ ಗೊತ್ತಾಗಲಿಲ್ಲ. ತುಂಬಾ ಜನ ಇದ್ದರು. ನಾನು ಕೇಕ್ ಕಟ್ ಮಾಡಿದ ಕತ್ತಿ ಎಲ್ಲಿದೆ ಅಂತಲೂ ಗೊತ್ತಿಲ್ಲ. ಎಲ್ಲಿದೆ ಅಂತ ಹುಡುಕಿ ತಂದು ಕೊಡ್ತೀನಿ. ಹಾಗೆ ಸ್ಥಳದ ಸಿಸಿಟಿವಿ ವಿಡಿಯೋಗಳನ್ನು ಕೊಡುವುದಾಗಿ ದುನಿಯಾ ವಿಜಯ್ ವಿವರಣೆ ನೀಡಿದ್ದಾರೆ.
ವಿಚಾರಣೆ ಬಳಿಕ ಮಾತನಾಡಿದ ದುನಿಯಾ ವಿಜಿ, ನನ್ನಿಂದ ತಪ್ಪಾಗಿದೆ. ಮತ್ತೆ ಈ ರೀತಿ ಆಗದಂತೆ ನೋಡಿಕೊಳ್ಳುತ್ತೇನೆ. ಮತ್ತೆ ವಿಚಾರಣೆಗೆ ಕರೆದರೆ ಬರುವೆ. ಇನ್ನು ಮುಂದೆ ಈ ರೀತಿ ಆಗದಂತೆ ನೋಡಿಕೊಳ್ಳುತ್ತೇನೆ ಎಂದು ತಿಳಿಸಿದರು.