ಬೆಂಗಳೂರು: ಕೋರಮಂಗಲದ ಪಬ್ವೊಂದರ ಎದುದು ಪಾನಮತ್ತ ಯುವತಿಯರಿಬ್ಬರು ಸಾರ್ವಜನಿಕರೊಂದಿಗೆ ಜಗಳಕ್ಕಿಳಿದು ಹೈಡ್ರಾಮ ಮಾಡಿರುವ ಆರೋಪ ಕೇಳಿ ಬಂದಿದ್ದು, ಪೊಲೀಸರು ಎಚ್ಚರಿಕೆ ಕೊಟ್ಟು ಕಳುಹಿಸಿದ್ದಾರೆ. ಗುರುವಾರ ತಡರಾತ್ರಿ ಕೋರಮಂಗಲದ ಪಬ್ವೊಂದರ ಬಳಿ ಇಬ್ಬರು ಯುವತಿಯರು ಹಾಗೂ ಯುವಕರು ಮದ್ಯದ ಅಮಲಿನಲ್ಲಿ ತೇಲುತ್ತಿದ್ದರು.
ರಸ್ತೆಯಲ್ಲಿ ಬರುತ್ತಿದ್ದ ಕಾರಿನ ಮೇಲೆ ಕುಳಿತುಕೊಂಡು ಜೋರಾಗಿ ಕಿರುಚಾಡಿ ಅಸಭ್ಯವಾಗಿ ವರ್ತನೆ ತೋರಿದ್ದರು. ನಶೆಯಲ್ಲಿ ತೇಲುತ್ತಾ ಇವರ ಪುಂಡಾಟ ನೋಡಲು ಹತ್ತಾರು ಮಂದಿ ರಸ್ತೆ ಮಧ್ಯೆ ನಿಂತುಕೊಂಡ ಪರಿಣಾಮ ಕೆಲಹೊತ್ತು ರಸ್ತೆಯಲ್ಲಿ ಸಂಚಾರ ದಟ್ಟಣೆಯೂ ಉಂಟಾಯಿತು. ಒಬ್ಬ ಯುವತಿ ಕಾರಿನ ಮೇಲೆ ಏರಿ ಕುಳಿತುಕೊಂಡು ಕೂಗಾಡಿದರೆ, ಮತ್ತೊಬ್ಬಳು ಮದ್ಯದ ಅಮಲಿನಲ್ಲಿ ಸರಿಯಾಗಿ ನಿಲ್ಲಲು ಸಾಧ್ಯವಾಗದೇ ರಸ್ತೆಯಲ್ಲೇ ಅಡ್ಡಾದಿಡ್ಡಿ ಹೊರಳಾಡಿದ್ದಾಳೆ. ಸಾರ್ವಜನಿಕರೊಂದಿಗೆ ಸುಖಾಸುಮ್ಮನೆ ಜಗಳ ಮಾಡಲು ಆರಂಭಿಸಿದ್ದರು. ಆ ವೇಳೆ ಸ್ಥಳೀಯರು ಕೋರಮಂಗಲ ಪೊಲೀಸರಿಗೆ ಈ ಕುರಿತು ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಪೊಲೀಸರು ಆಗಮಿಸಿ ಯುವತಿಯರಿಗೆ ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ.
ಇದನ್ನೂ ಓದಿ: ಚಾಕೊಲೆಟ್ ತರಲು ಹೋಗಿ ಬೈಕ್‌ನಿಂದ ಬಿದ್ದು ಗರ್ಭಿಣಿ ಸಾವು: ಶವದ ಬಳಿ ರಾತ್ರಿ ಕಳೆದ ಮಗ
ಇತ್ತೀಚೆಗೆ ಉತ್ತರ ಪ್ರದೇಶದಲ್ಲೂ ಇಂತಹದ್ದೇ ಘಟನೆ ನಡೆದಿತ್ತು. ಕುಡಿದ ಮತ್ತಿನಲ್ಲಿದ್ದ ಯುವಕ ಯುವತಿಯರು ಲಖನೌದ ವಿಭೂತಿ ಖಂಡದಲ್ಲಿರುವ ಶೃಂಗಸಭೆಯ ಕಟ್ಟಡದ ಹೊರಗಡೆ ಗಲಾಟೆ ಸೃಷ್ಟಿಸಿದ್ದರು. ಈ ಕುರಿತಾದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಕಾರಿನಲ್ಲಿ ಬರುತ್ತಿದ್ದ ಮೂವರು ಯುವತಿಯರು ಮೊದಲು ಯುವಕನ ಕಾರೊಂದಕ್ಕೆ ಡಿಕ್ಕಿ ಹೊಡೆದು ಇದನ್ನು ಪ್ರಶ್ನಿಸಿದ್ದಕ್ಕೆ ಆತನನ್ನು ಥಳಿಸಿದ್ದರು.