ಬೆಂಗಳೂರು: ಸ್ಯಾಂಡಲ್ವುಡ್ ಡ್ರಗ್ಸ್ ಪ್ರಕರಣ ಕೇವಲ ಪೆಡ್ಲರ್ಗಳ ವಿಚಾರಣೆ ನಡೆಸಿ ಸಿಸಿಬಿ ಅಧಿಕಾರಿಗಳು ತಾರ್ಕಿಕ ಅಂತ್ಯ ನೀಡ್ತಾರಾ ಅನ್ನೋ ಪ್ರಶ್ನೆ ಸದ್ಯ ಎದ್ದಿದೆ. ಯಾಕಂದ್ರೆ ಪ್ರಕರಣದಲ್ಲಿ ರಾಗಿಣಿ ಆಪ್ತ ರವಿಶಂಕರನನ್ನು ಬಾಡಿ ವಾರೆಂಟ್ ಮೂಲಕ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಮತ್ತೊಂದೆಡೆ, ಎ9 ಆರೋಪಿ ಅಶ್ವಿನ್ ಬೂಗಿಯನ್ನು ಕೂಡ ಬಂಧಿಸಿದ್ದು ಸದ್ಯ ಇಬ್ಬರನ್ನು ಚಾಮರಾಜಪೇಟೆ ಸಿಸಿಬಿ ಕಚೇರಿಯಲ್ಲಿ ವಿಚಾರಣೆಗೆ ಒಳಪಡಿಸಿದ್ದಾರೆ.
ಇಬ್ಬರು ಕೂಡ ಕಾಲೇಜಿನಿಂದ ಆತ್ಮೀಯ ಸ್ನೇಹಿತರಾಗಿದ್ದಾರೆ. ಹಾಗೆಯೇ ಪಾರ್ಟಿಗಳಿಗೆ ಡ್ರಗ್ ಸಪ್ಲೈ ಮಾಡುವ ಕೆಲಸವನ್ನು ಈ ಇಬ್ಬರು ನೋಡಿಕೊಳ್ಳುತ್ತಿದ್ದರು ಎನ್ನಲಾಗಿದೆ. ಇವರಿಬ್ಬರು ಪ್ರಕರಣದಲ್ಲಿ ಡ್ರಗ್ಸ್ ಪೆಡ್ಲರ್ಗಳಾಗಿ ಪಾತ್ರವಹಿಸಿದ್ದಾರೆ. ಹೀಗಾಗಿ ಇವರಿಬ್ಬರಿಂದ ನಟಿ ರಾಗಿಣಿ ಹಾಗೂ ನಟಿ ಸಂಜನಾ ಬಗ್ಗೆ ಹೆಚ್ಚಿನ ಮಾಹಿತಿ ಪಡೆದು ಇನ್ನೇನು ಕೆಲವೇ ದಿನಗಳಲ್ಲಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಕೆ ಮಾಡಲು ಸಿದ್ಧತೆ ನಡೆಸುತ್ತಿದ್ದಾರೆ.
ಈಗಾಗಲೇ ಡ್ರಗ್ಸ್ ಪ್ರಕರಣ ಸಂಬಂಧಿಸಿದಂತೆ ಕಾಟನ್ ಪೇಟೆಯಲ್ಲಿ ಎಫ್ಐಆರ್ ದಾಖಲಾಗಿದ್ದು, ಅದರಲ್ಲಿ ಇಬ್ಬರು ನಟಿಯರು, ಉಳಿದ ಪೆಡ್ಲರ್ಗಳ ಬಂಧಿಸಿದ್ದು, ತಲೆಮರೆಸಿಕೊಂಡಿರುವವರಿಗಾಗಿ ಶೋಧ ಮುಂದುವರೆಸಿದ್ದಾರೆ. ಆದರೆ ಕೆಲ ಪ್ರತಿಷ್ಠಿತ ರಾಜಕಾರಣಿಗಳ ಮಕ್ಕಳು ಹಾಗೂ ನಟ, ನಟಿಯರ ಹೆಸರುಗಳನ್ನು ಪೆಡ್ಲರ್ಗಳು ಬಾಯಿಬಿಟ್ಟರೂ ಕೂಡ ಸಿಸಿಬಿ ಸಾಕ್ಷ್ಯಗಳ ಪತ್ತೆ ಮಾಡುವುದಕ್ಕೆ ಮುಂದಾಗಿದೆ.
ಇನ್ನು ಅಧಿಕಾರಿಗಳ ಬಳಿ ಮಾಹಿತಿ ಕೇಳಿದರೆ, ಸದ್ಯ ಸಿಸಿಬಿ ಕಚೇರಿಯಲ್ಲಿ ಕೂಡ ಸೋಂಕು ಪತ್ತೆಯಾಗ್ತಿದೆ. ಸಿಬ್ಬಂದಿ ಕೊರತೆ ಇದೆ. ಹಾಗೆ ಬಂಧನವಾದ ಆರೋಪಿಗಳ ಪೇಪರ್ ವರ್ಕ್ ಮಾಡೋದು ಅನಿವಾರ್ಯವಾಗಿದೆ. ತನಿಖೆ ಪ್ರಗತಿಯಲ್ಲಿದೆ ಎನ್ನುತ್ತಾರೆ.