ಬೆಂಗಳೂರು: ಡ್ರಗ್ಸ್ ಪೆಡ್ಲರ್ಗೆ ಸಹಾಯ ಮಾಡಿದ ಆರೋಪ ಹಿನ್ನೆಲೆ ಕೇರಳದ ಮಾಜಿ ಸಚಿವ ಕೊಡಿಯೇರಿ ಬಾಲಕೃಷ್ಣನ್ ಪುತ್ರ ಬಿನೀಶ್ ಕೊಡಿಯೇರಿ ಸದ್ಯ ಇಡಿ ವಶದಲ್ಲಿದ್ದು, ಇಂದು ಕಸ್ಟಡಿ ಅಂತ್ಯವಾಗಲಿದೆ. ವಿಚಾರಣೆ ವೇಳೆ ಬೆನ್ನು ನೋವು ಇದೆ ಎಂದು ಚಿಕಿತ್ಸೆಗಾಗಿ ನಿನ್ನೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಎರಡೂವರೆ ತಾಸುಗಳ ಕಾಲ ಐಸಿಯುನಲ್ಲಿರಿಸಿ ಪರೀಕ್ಷೆ ಮಾಡಿದ್ದು, ಈ ವೇಳೆ ವೈದ್ಯರು ಯಾವುದೇ ಸಮಸ್ಯೆಯಿಲ್ಲ ಎಂದು ಹೇಳಿದ್ದಾರೆ ಎನ್ನಲಾಗ್ತಿದೆ.
ಆಸ್ಪತ್ರೆಯಿಂದ ಮತ್ತೆ ತನಿಖಾಧಿಕಾರಿಗಳು ಆತನನ್ನು ಇಡಿ ಕಚೇರಿಗೆ ಕರೆತಂದು, ರಾತ್ರಿ ವಿಚಾರಣೆ ಮುಗಿದ ಬಳಿಕ ವಿಲ್ಸನ್‌ಗಾರ್ಡನ್ ಪೊಲೀಸ್ ಠಾಣೆಯಲ್ಲಿ ಇರಿಸಿದ್ದರು. ಇಂದು ಮತ್ತೆ ಶಾಂತಿನಗರದಲ್ಲಿರುವ ಇಡಿ ಕಚೇರಿಗೆ ವಿಚಾರಣೆಗಾಗಿ ಕರೆ ತರಲಾಗುತ್ತದೆ. ನಿನ್ನೆ ಇಡೀ ದಿನ ಬೆನ್ನು ನೋವು ಕಾಣಿಸಿಕೊಂಡಿದೆ ಎಂದಿದ್ದರಿಂದ ವಿಚಾರಣೆ ನಡೆಸಲು ಸಾಧ್ಯವಾಗಿರಲಿಲ್ಲ. ಹಾಗಾಗಿ ಇಂದು ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ಕರೆದೊಯ್ದು ಮತ್ತೆ ಇಡಿ ಅಧಿಕಾರಿಗಳು ಬಿನೀಶ್‌ಅನ್ನು ವಶಕ್ಕೆ ಪಡೆಯುವ ಸಾಧ್ಯತೆಯಿದೆ.
ಆದರೆ ರಾತ್ರಿ ಕೂಡ ಬಿನೀಶ್ ಸರಿಯಾಗಿ ಆಹಾರ ಸೇವಿಸುತ್ತಿರಲಿಲ್ಲ. ಅವರಿಗೆ ಬಿಪಿ ಹಾಗೂ ಇನ್ನಿತರೆ ಸಣ್ಣ-ಪುಟ್ಟ ಆರೋಗ್ಯದ ಸಮಸ್ಯೆಗಳಿದ್ದವು. ಆರೋಗ್ಯದಲ್ಲಿ ವ್ಯತ್ಯಾಸ ಕಂಡು ಬರಬಾರದೆಂದು ಮುನ್ನೆಚ್ಚರಿಕೆಯಿಂದ ಇಡಿ ಅಧಿಕಾರಿಗಳು ನಡೆದುಕೊಳ್ಳುತ್ತಿದ್ದಾರೆ. ಆರೋಗ್ಯ ವಿಚಾರ ತಿಳಿದು ಬಿನೀಶ್ ಸಹೋದರ ಬಿನೋಯ್ ವಕೀಲರನ್ನು ಭೇಟಿ ಮಾಡಿದ್ದರು. ಆದರೆ ಇಡಿ ಅಧಿಕಾರಿಗಳು ಭೇಟಿಗೆ ಅವಕಾಶ ನೀಡಲಿಲ್ಲ. ಇತ್ತ ವಿಚಾರಣೆಗೆ ಬಿನೀಶ್ ಕೂಡ ಸಹಕರಿಸಿಲ್ಲ ಎಂದು ತಿಳಿದು ಬಂದಿದೆ.
ಬಿನೀಶ್ ಡ್ರಗ್ಸ್ ಪೆಡ್ಲರ್ ಅನೂಪ್ ಸೇರಿದಂತೆ ಇನ್ನೂ ಕೆಲ ವ್ಯಕ್ತಿಗಳಿಗೆ ಅಕ್ರಮವಾಗಿ ದೊಡ್ಡ ಮೊತ್ತದ ಹಣ ವರ್ಗಾವಣೆ ಮಾಡಿದ್ದು, ಈ ಬಗ್ಗೆ ಇಡಿ ಅಧಿಕಾರಿಗಳಿಗೆ ಸುಳಿವು ಸಿಕ್ಕಿದೆ. ಬಿನೀಶ್ ಇಡಿ ವಿಚಾರಣೆ ಮಾಡಿದಾಗ ಗೊಂದಲದ ಹೇಳಿಕೆ ನೀಡುತ್ತಿದ್ದಾನೆ. ಸದ್ಯ ಅಕ್ರಮ ಪತ್ತೆ ಹಚ್ಚುವುದು ಇಡಿ ಅಧಿಕಾರಿಗಳಿಗೆ ಸವಾಲಾಗಿ ಪರಿಣಮಿಸಿದ್ದು, ಇಂದು ನ್ಯಾಯಾಲಯಕ್ಕೆ ಹಾಜರುಪಡಿಸಿ ಹೆಚ್ಚಿನ ವಿಚಾರಣೆಗಾಗಿ ಮತ್ತೆ ವಶಕ್ಕೆ ಪಡೆಯುವ ಸಾಧ್ಯತೆ ಇದೆ.
ಮತ್ತೊಂದೆಡೆ ಬಿನೀಶ್ ನನ್ನು ವಶಕ್ಕೆ ಪಡೆಯಲು ಎನ್‌ಸಿಬಿ ಕೂಡ ಕಾದು ಕುಳಿತಿದೆ. ಎನ್‌ಸಿಬಿ ಅಧಿಕಾರಿಗಳು ಇಡಿಯಿಂದ ಬಿನೀಶ್ ಬಗ್ಗೆ ಸಾಕಷ್ಟು ಮಾಹಿತಿ ಕಲೆ ಹಾಕಿದ್ದಾರೆ. ಬಿನೇಶ್ ಡ್ರಗ್ಸ್ ಪೆಡ್ಲರ್ ಮೊಹಮದ್ ಅನೂಪ್ ಜತೆ ಒಡನಾಟ ಹೊಂದಿದ್ದ. ಈ ಹಿನ್ನೆಲೆಯಲ್ಲಿ ಸದ್ಯದಲ್ಲೇ ಈತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ವಶಕ್ಕೆ ಪಡೆದುಕೊಳ್ಳುವ ಸಾಧ್ಯತೆಗಳಿವೆ ಎನ್ನಲಾಗ್ತಿದೆ. ಹಾಗೆ ಡ್ರಗ್ಸ್ ಜಾಲದಲ್ಲಿ ತೊಡಗಿರುವುದಕ್ಕೆ ಸಂಬಂಧಿಸಿದ ದಾಖಲೆಗಾಗಿ ಎನ್‌ಸಿಬಿ ಶೋಧ ನಡೆಸುತ್ತಿದೆ.