ಬೆಂಗಳೂರು: ಸ್ಯಾಂಡಲ್‌ವುಡ್ ಕಲಾವಿದರ ಮೇಲೆ ಬಂದಿರುವ ಡ್ರಗ್ಸ್ ಆರೋಪದ ಕುರಿತಾಗಿ ಹಿರಿಯ ನಟಿ ತಾರ ಅನುರಾಧಾ ಪ್ರತಿಕ್ರಿಯಿಸಿದ್ದು, ಈ ಬಗ್ಗೆ ಸಿಎಂ ಯಡಿಯೂರಪ್ಪ ಅವರಿಗೂ ಪತ್ರ ಬರೆದಿದ್ದಾರೆ.
ಬಿಬಿಎಂಪಿಯ ಆವರಣದಲ್ಲಿರುವ ದೇವಸ್ಥಾನಕ್ಕೆ ಭೇಟಿ ನೀಡಿದ್ದ ಅವರು, ಕನ್ನಡ ಚಿತ್ರೋದ್ಯಮಕ್ಕೆ ಒಳ್ಳೆಯದಾಗಲಿ ಎಂದು ದೇವಿ ಬಳಿ ಕೇಳಿಕೊಂಡಿದ್ದಾರೆ. ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿ, ಕನ್ನಡ ಚಿತ್ರರಂಗ ಚಂದನವನವೇ ಆಗಿರಲಿ, ಯಾವುದೇ ದುರ್ನಾತ ಬಡಿಯದಿರಲಿ ಎಂದು ದೇವರಲ್ಲಿ ಕೇಳಿಕೊಂಡೆ. ವಿಧಾನಪರಿಷತ್ ಸದಸ್ಯೆಯಾಗಿದ್ದಾಗಲೂ ಡ್ರಗ್ಸ್ ಮಾಫಿಯಾದ ಬಗ್ಗೆ ಚರ್ಚೆ ಮಾಡಿದ್ದೆವು. ಪ್ರಸ್ತುತ ಮೂರ್ನಾಲ್ಕು ದಿನದ ಬೆಳವಣಿಗೆಯು ಆತಂಕಕಾರಿ ವಿಚಾರವಾಗಿದೆ. ಈವರೆಗೆ ನಾನು ಚಿತ್ರರಂಗದ ಸದಸ್ಯೆಯಾಗಿದ್ದರೂ ಇದು ನನ್ನ ಅನುಭವಕ್ಕೆ ಇದು ಬಂದಿರಲಿಲ್ಲ. ಮಾಧ್ಯಮಗಳಿಂದ ಓದಿ ತಿಳಿದು, ಅಪಘಾತ ಆದಾಗ ಡ್ರಗ್ಸ್ ತೆಗೆದುಕೊಂಡಿದ್ದರಂತೆ ಎಂದು ಕೇಳಿದ್ದೆ ಅಷ್ಟೇ ಎಂದರು. ಸಿನಿಮಾ ಅಥವಾ ರಾಜಕೀಯದಲ್ಲಿ ಜನರಿಗೆ ರೋಲ್ ಮಾಡೆಲ್ ಆಗಿರುವವರು, ಬಹಳ ಎಚ್ಚರಿಕೆಯಿಂದ ಇರಬೇಕಾಗುತ್ತದೆ. ಅವರನ್ನು ಅನುಸರಿಸುವ ಜನರಿಗೆ ತಪ್ಪು ಸಂದೇಶ ಹೋಗಬಾರದು ಎಂದು ತಿಳಿಸಿದರು.
ಸ್ಯಾಂಡಲ್‌ವುಡ್ ಡ್ರಗ್ಸ್ ಮಾಫಿಯಾ ಬಗ್ಗೆ ಪೂರಕ ಮಾಹಿತಿ ಸಿಕ್ಕಿದೆ- ಸಂದೀಪ್ ಪಾಟೀಲ್
ದೊಡ್ಡವರಷ್ಟೇ ಅಲ್ಲ, ಮಕ್ಕಳು ಕೂಡಾ ಡ್ರಗ್ಸ್ಗೆ ಬಲಿಯಾಗುತ್ತಿದ್ದಾರೆ. ಹೀಗಾಗಿ ಇದರ ವಿರುದ್ಧ ಹೋರಾಡಲು ನಾವು ಮುಂದೆ ಬಂದಿದ್ದೇವೆ ಎಂದರು. ಚೀನಾ, ಅರಬ್, ಶ್ರೀಲಂಕಾಗಳಲ್ಲಿ ಡ್ರಗ್ಸ್ ಸಂಪೂರ್ಣ ನಿಷೇಧಿಸಲಾಗಿದ್ದು, ಶ್ರೀಲಂಕಾದಲ್ಲಿ ಡ್ರಗ್ಸ್ ಮಾರುವವನಿಗೆ ಗಲ್ಲು ಶಿಕ್ಷೆ ನೀಡಲಾಗಿದೆ. ಇದೇ ರೀತಿ ಭಾರತದಲ್ಲೂ ಸಂಪೂರ್ಣವಾಗಿ ಡ್ರಗ್ಸ್ ನಿಷೇಧಿಸಬೇಕು. ಯಾವುದೇ ಸಂಘಗಳ ಪ್ರತಿಕ್ರಿಯೆಗೆ ಕಾಯದೆ ನಾನು ಡ್ರಗ್ಸ್ ವಿಚಾರವನ್ನು ಖಂಡಿಸಲು ಬಂದಿದ್ದೇನೆ ಎಂದರು.

ದಾಖಲೆ ಸಮೇತ ಸಿಸಿಬಿ ಕಚೇರಿಗೆ ಆಗಮಿಸಿದ ಇಂದ್ರಜಿತ್ ಲಂಕೇಶ್!
ಡ್ರಗ್ಸ್ ತೆಗೆದುಕೊಂಡಿದ್ದರೆ, ನಾಲ್ಕು ಗಂಟೆಯವರೆಗೆ ಬ್ಲಡ್ ರಿಪೋರ್ಟ್ನಲ್ಲಿ ಗೊತ್ತಾಗಲಿದೆ. ಕೂದಲು, ಸಲೈವದ ಮೂಲಕವೂ 72-80 ದಿನದೊಳಗಾಗಿ ಟೆಸ್ಟ್ ಮಾಡಬಹುದು. ಹೀಗಾಗಿ ಇಂದ್ರಜಿತ್ ಲಂಕೇಶ್ ಹೇಳಿರುವ 15 ಕಲಾವಿದರನ್ನು ಟೆಸ್ಟ್ ಮಾಡಿಸಲಿ ಎಂದು ಒತ್ತಾಯಿಸಿದರು. ಪ್ರತಿಷ್ಠಿತ ಶಾಲಾ- ಕಾಲೇಜುಗಳಲ್ಲಿ ಕೂಡಾ ಮೂರು ತಿಂಗಳಿಗೊಮ್ಮೆ ಆರೋಗ್ಯ ತಪಾಸಣೆ ನಡೆಸಬೇಕು. ತಪ್ಪು ಮಾಡಿದವರನ್ನು ಸರಿದಾರಿಗೆ ತರುವ ಕೆಲಸ ಆಗಬೇಕಿದೆ ಎಂದು ಹೇಳಿದರು.