ಬೆಂಗಳೂರು: ಬ್ಯುಸಿನೆಸ್ ವೀಸಾದಲ್ಲಿ ಬಂದು ಡ್ರಗ್ ಮಾತ್ರೆಗಳನ್ನು ಮಾರಾಟ ಮಾಡುತ್ತಿದ್ದ ವಿದೇಶಿ ಪ್ರಜೆಯೊಬ್ಬನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಎಜಿಕೆ ಸೆಲೆಸ್ಟೈನ್ ಬಂಧಿತ ಆರೋಪಿ. ಈತ ನಗರದ ಹೆಣ್ಣೂರು ಪೊಲೀಸ್ ಠಾಣಾ ವ್ಯಾಪ್ತಿಯ ಮನೆಯೊಂದನ್ನು ಬಾಡಿಗೆಗೆ ಪಡೆದುಕೊಂಡು ಮನೆಯಲ್ಲಿ ನಿಷೇಧಿತ ಡ್ರಗ್ ಮಾತ್ರೆಗಳನ್ನು ಸಂಗ್ರಹಿಸಿದ್ದ. ಅಲ್ಲದೇ ನಗರದಲ್ಲಿ ತನ್ನದೇ ಜಾಲವೊಂದನ್ನು ಸೃಷ್ಟಿಸಿ ವಿದ್ಯಾರ್ಥಿಗಳು, ಉದ್ಯಮಿಗಳು, ಯುವಕ, ಯುವತಿಯರಿಗೆ ಮಾತ್ರೆಗಳನ್ನು ಮಾರಾಟ ಮಾಡುತ್ತಿದ್ದ. ಈ ಬಗ್ಗೆ ಮಾಹಿತಿ ಪಡೆದ ಸಿಸಿಬಿ ಪೊಲೀಸರು, ದಾಳಿ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.

ದಾಳಿ ವೇಳೆ ಆರೋಪಿಯ ಮನೆಯಲ್ಲಿ 20 ಲಕ್ಷ ಮೌಲ್ಯದ ಡ್ರಗ್ಸ್ ಮಾತ್ರೆಗಳು ಹಾಗೂ ನಗದು ಪತ್ತೆಯಾಗಿದೆ. ತನಿಖೆ ವೇಳೆ ಆರೋಪಿಯು ತಾಂಜೆನೀಯಾ ದೇಶದಿಂದ ಬ್ಯುಸಿನೆಸ್ ವೀಸಾದಲ್ಲಿ ಬಂದು ವೀಸಾ ನಿಯಮಗಳನ್ನು ಉಲ್ಲಂಘನೆ ಮಾಡಿ ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ಎಂದು ತಿಳಿದು ಬಂದಿದೆ. ಪ್ರಕರಣ ದಾಖಲಿಸಿಕೊಂಡಿರುವ ಹೆಣ್ಣೂರು ಠಾಣೆ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.