ಬೆಂಗಳೂರು : ಪಾಂಡ್ಸ್ ಪೌಡರ್ ಡಬ್ಬಿಯಲ್ಲಿ ಹೆರಾಯಿನ್ ಸಾಗಿಸುತ್ತಿದ್ದ ಅಂತಾರಾಜ್ಯ ಡ್ರಗ್ ಪೆಡ್ಲರ್ ಅನ್ನು ನಗರದ ಪೂರ್ವ ವಿಭಾಗದ ಕೆಜಿಹಳ್ಳಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಡ್ರಗ್ ಪೆಡ್ಲರ್ಗಳ ಹೆಡೆಮುರಿ ಕಟ್ಟಲು ಪಣ ತೊಟ್ಟಿರುವ ರಾಜಧಾನಿಯ ಪೊಲೀಸ್ ಅಧಿಕಾರಿಗಳು, ಮಾದಕ ವಸ್ತು ಸಾಗಾಟ-ಮಾರಾಟ ಮಾಡುವವರ ಮೇಲೆ ಹದ್ದಿನ ಕಣ್ಣಿಟ್ಟಿದ್ದಾರೆ. ಡ್ರಗ್ಸ್ ಮಾರಾಟ ಮಾಡುವ ವೇಳೆ ಸೋರಾಯ್ ಸ್ಯಾಮ್ ಬೋರಿಸ್ ಸಿಂಗ್ ಎಂಬ ಆರೋಪಿಯನ್ನು ಅರೆಸ್ಟ್ ಮಾಡಲಾಗಿದೆ. ಈತ ಎಚ್‍ಬಿಆರ್ ಲೇಔಟ್‍ನ ಅಮ್ಮಾಸ್ ಬೇಕರಿ ಹಿಂಭಾಗದ ರಸ್ತೆಯೊಂದರಲ್ಲಿ ಕಪ್ಪು ಬ್ಯಾಗ್ ಹಿಡಿದುಕೊಂಡು ಅನುಮಾನಾಸ್ಪದವಾಗಿ ಓಡಾಡುತ್ತಿದ್ದು, ಇದನ್ನು ಗಮನಿಸಿದ ಸ್ಥಳೀಯರು ಪೊಲೀಸರು ಮಾಹಿತಿ ನೀಡಿದ್ದರು. ಕೂಡಲೇ ಸ್ಥಳಕ್ಕೇ ದೌಡಾಯಿಸಿದ ಪೊಲೀಸರು ಆರೋಪಿಯನ್ನು ಸುತ್ತುವರಿದು ಬಂಧಿಸಿದ್ದರು.
ಪಾಂಡ್ಸ್ ಪೌಡರ್ ಡಬ್ಬಿಯ ಒಳಗೆ ಹೆರಾಯಿನ್ : ಬಂಧಿತ ಆರೋಪಿಯು ಹೆರಾಯಿನ್ ಮಾದಕ ವಸ್ತುವನ್ನು ಪಾಂಡ್ಸ್ ಪೌಡರ್ ಡಬ್ಬಿಯ ಒಳಗೆ ತುಂಬಿ ಸಪ್ಲೈ ಮಾಡುತ್ತಿದ್ದ. ಬೇರೆ ರಾಜ್ಯಗಳಿಂದ ಕಡಿಮೆ ಬೆಲೆಗೆ ತಂದು ನಗರದಾದ್ಯಂತ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಆರೋಪಿಯ ವಿರುದ್ಧ ಕೆಜಿಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಿದ್ದಾರೆ.
ತಮಿಳು 'ಐಯಾನ್' ಚಿತ್ರವನ್ನು ಹತ್ತಾರು ಬಾರಿ ವೀಕ್ಷಿಸಿದ್ದ ಸ್ಮಗ್ಲರ್:
ತಮಿಳು ಐಯಾನ್ ಚಿತ್ರವನ್ನು ಹತ್ತಾರು ಬಾರಿ ವೀಕ್ಷಿಸಿದ ಆರೋಪಿ ಸಿನಿಮಾದಲ್ಲಿ ನಾಯಕ ಸೂರ್ಯ ಮಾದಕ ವಸ್ತು ಸಾಗಿಸುವ ರೀತಿಯಲ್ಲೇ ತಾನು ಸಾಗಿಸಬೇಕೆಂದುಕೊಂಡು ಪಾಂಡ್ಸ್ ಪೌಡರ್ ಖಾಲಿ ಡಬ್ಬಿಯಲ್ಲಿ ಹೆರಾಯಿನ್ ತುಂಬಿಕೊಂಡು ಸಾಗಿಸುತ್ತಿದ್ದ. ನೋಡಿದವರಿಗೂ ಇದು ಪಾಂಡ್ಸ್ ಪೌಡರ್ ಡಬ್ಬಿ ಎಂದು ಗೋಚರವಾಗುವಂತಿತ್ತು.
ಹೀಗೆ ಹಲವಾರು ಬಾರಿ ಮಣಿಪುರದಿಂದ ಬೆಂಗಳೂರಿಗೆ ಕಸ್ಟಮ್ಸ್ ಅಧಿಕಾರಿಗಳ ಕಣ್ತಪ್ಪಿಸಿ ವಿಮಾನದ ಮೂಲಕವೇ ಬಂದು, ಇಲ್ಲಿನ ಟೆಕ್ಕಿಗಳು, ಉದ್ಯಮಿಗಳು, ಪ್ರತಿಷ್ಠಿತ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಮಾದಕ ವ್ಯಸನಿಗಳಿಗೆ ಮಾರಾಟ ಮಾಡಿ ತಮ್ಮೂರಿಗೆ ತೆರಳುತ್ತಿದ್ದ. ಇದರಿಂದ ಲಕ್ಷಾಂತರ ರೂ. ಗಳಿಸುತ್ತಿರುವುದಾಗಿ ವಿಚಾರಣೆ ವೇಳೆ ಬಾಯಿ ಬಿಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಂಧಿತನಿಂದ 2 ಲಕ್ಷ ರೂ. ಮೌಲ್ಯದ 10 ಗ್ರಾಂ ಹೆರಾಯಿನ್ ಅನ್ನು ವಶಕ್ಕೆ ಪಡೆಯಲಾಗಿದೆ. ನಗದು ಹಣ, ಡ್ರಗ್ ಸಪ್ಲೈ ಮಾಡಲು ಬಳಸಿದ್ದ ಪ್ಲಾಸ್ಟಿಕ್ ಡಬ್ಬಿಗಳು, 3 ಏರ್ ಇಂಡಿಯಾ ಫ್ಲೈಟ್ನ ಬೋರ್ಡಿಂಗ್ ಪಾಸ್ ಮತ್ತು ಕಪ್ಪು ಬಣ್ಣದ ಬ್ಯಾಗ್ ವಶಕ್ಕೆ ತೆಗೆದುಕೊಂಡಿದ್ದೇವೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ:ಮೈಸೂರು ದರೋಡೆ ಕೇಸ್.. ಏಳು ಜನರ ಹೆಡೆಮುರಿ ಕಟ್ಟಿದ ಖಾಕಿ ಪಡೆ