ಬೆಂಗಳೂರು: ನಟಿ ರಾಗಿಣಿ ದ್ವಿವೇದಿ ಹಾಗೂ ನಟಿ ಸಂಜನಾ ಗಲ್ರಾನಿ ಡ್ರಗ್ ಮಾಫಿಯಾದಲ್ಲಿ ಭಾಗಿಯಾಗಿರುವ ಆರೋಪದ ಹಿನ್ನೆಲೆ ಸದ್ಯ ಸಿಸಿಬಿ ಪೊಲೀಸರ ವಶದಲ್ಲಿದ್ದು, ತನಿಖೆ ಬಿರುಸಿನಿಂದ ಸಾಗಿದೆ.
ಆದ್ರೆ ಈ ಇಬ್ಬರಿಗೂ ಹಣದ ವ್ಯವಹಾರದಲ್ಲಿ ಬೇರೆ-ಬೇರೆ ರೀತಿಯ ನಂಟು ಇರುವ ಕಾರಣ ಇದೀಗ ಜಾರಿ ನಿರ್ದೇಶನಾಲಯ ಕೂಡ ಇವರ ಮೇಲೆ ಕಣ್ಣಿಟ್ಟಿದೆ. ಅಕ್ರಮ ಹಣದಿಂದ ಡ್ರಗ್ ವ್ಯವಹಾರ ನಡೆದಿರುವುದು ಈಗಾಗಲೇ ಇಡಿಗೆ ಗೊತ್ತಾಗಿದೆ. ಮತ್ತೊಂದೆಡೆ ಈ ಹಿಂದೆ ಕೇರಳದ ಸ್ಮಗ್ಲಿಂಗ್ ರಾಣಿ ಎಂದೇ ಕುಖ್ಯಾತಿಯಾಗಿರುವ ಸ್ವಫ್ನಾ ಸುರೇಶ್ ಹಾಗೂ ಬಂಧಿತರಾದ ಕೆಲ ಡ್ರಗ್ ಪೆಡ್ಲರ್ ಜೊತೆ ಸಂಬಂಧ ಇರುವ ವಿಚಾರ ಕೂಡ ತನಿಖಾ ಹಂತದಲ್ಲಿ ಬಯಲಾಗಿದೆ. ಇಡಿ ಕೂಡ ಇಸಿಐಆರ್ ದಾಖಲಿಸಿಕೊಂಡಿದ್ದು, ಸದ್ಯ ನಟಿ ಸಂಜನಾಗೆ ಕೋಟಿ ಕೋಟಿ ಆದಾಯ ಇರುವುದು ಪತ್ತೆಯಾಗಿದೆ.
ಅದೇ ರೀತಿ ರಾಗಿಣಿ ಹೆಸರಿನಲ್ಲಿ ಕೂಡ ಬಹುತೇಕ ಹಣದ ವಹಿವಾಟು ನಡೆದಿರುವ ಕಾರಣ ಬೆಂಗಳೂರು ವಿಭಾಗದ ಇಡಿ ಅಧಿಕಾರಿಗಳಿಗೆ ಸಿಸಿಬಿ ವಿವರ ನೀಡಿದರೆ ಇಡಿ ಕೂಡ ದಾಳಿ ಮಾಡುವ ಸಾಧ್ಯತೆ ಇದೆ. ಅಥವಾ ಇಡಿ ಸ್ವಯಂ ಪ್ರೇರಿತವಾಗಿ ದಾಳಿ ನಡೆಸಿ ಪರಿಶೀಲನೆ ಮಾಡಬಹುದು. ಸದ್ಯ ಇಬ್ಬರು ನಟಿಮಣಿಯರು ಸಿಸಿಬಿ ವಶದಲ್ಲಿದ್ದು, ನಿನ್ನೆ ಒಂದೂವರೆ ಗಂಟೆಗಳ ವಿಚಾರಣೆ ನಡೆಸಿದ ಬಳಿಕ ಇಂದು ಮತ್ತೆ ವಿಚಾರಣೆ ನಡೆಸಲು ಸಿದ್ಧತೆ ಮಾಡುತ್ತಿದ್ದಾರೆ.
ಆರೋಪಿಗಳು ಜಾಮೀನು ಕೋರಿ ಅರ್ಜಿ ಸಲ್ಲಿಕೆ ಮಾಡಿರುವ ಕಾರಣ, ಸಿಸಿಬಿ ಪೊಲೀಸರಿಗೆ ಸದ್ಯ ಪ್ರಮುಖವಾಗಿ ಬೇಕಾಗಿರುವುದು ಆರೋಪಿಗಳ ಮೇಲೆ ಇರುವ ಆರೋಪಕ್ಕೆ ಬೇಕಾದ ಸಾಕ್ಷಿಗಳು. ಈಗಾಗಲೇ ಸಿಕ್ಕಿರುವ ಸಾಕ್ಷಿಗಳನ್ನು ಮುಂದಿಟ್ಟುಕೊಂಡು ಪೊಲೀಸರು ಟಕ್ಕರ್ ಕೊಡಲು ಮುಂದಾಗಿದ್ದಾರೆ. ಇಂದು ಕೂಡ ತನಿಖೆ ಚುರುಕುಗೊಳಿಸಿ ಇಬ್ಬರ ಬಳಿಯಿಂದ ಮಾದಕ ವಸ್ತು ಜಾಲ ಸಂಬಂಧ ಬಹುತೇಕ ಮಾಹಿತಿಗಳನ್ನು ಕಲೆಹಾಕಲು ಮುಂದಾಗಿದ್ದಾರೆ.
ಆದರೆ ನಟಿಮಣಿಯರು ತಾವು ಪಾರ್ಟಿಗಳಲ್ಲಿ ಭಾಗಿಯಾಗ್ತಿದ್ದು ನಿಜ, ಆದ್ರೆ ಡ್ರಗ್ ಪೆಡ್ಲರ್ಸ್ ಅಲ್ಲವೆಂದು ಹೇಳುತ್ತಿದ್ದಾರೆ. ಆದರೆ ಇವರ ಆತ್ಮೀಯರಾದ ರವಿಶಂಕರ್, ರಾಹುಲ್, ವಿರೇನ್ ಖನ್ಮಾ ಇವರೆಲ್ಲರೂ ಸಹ ಡ್ರಗ್ ಪೆಡ್ಲರ್ಗಳೇ ಆಗಿದ್ದು, ಇವರೆಲ್ಲರೂ ಈ ಇಬ್ಬರು ನಟಿಮಣಿಯರತ್ತ ಕೈ ತೋರಿಸಿರುವ ಕಾರಣ ತನಿಖೆ ಮುಂದುವರೆಸಿ ಈ ದಂಧೆಯಲ್ಲಿ ಭಾಗಿಯಾಗಿರುವ ಮತ್ತಷ್ಟು ನಟಿಯರನ್ನು ಪತ್ತೆ ಹಚ್ಚಲು ಪೊಲೀಸರು ಮುಂದಾಗಿದ್ದಾರೆ.