ಬೆಂಗಳೂರು: ಮದ್ಯ ಮತ್ತು ಮಾದಕ ವ್ಯಸನ ಮುಕ್ತಿ ಕೇಂದ್ರ ನಡೆಸುತ್ತಾ, ಸ್ವತಃ ತಾನೇ ಮಾದಕ ವಸ್ತು ಮಾರಾಟ ಹಾಗೂ ವ್ಯಸನಕ್ಕೆ ದಾಸನಾಗಿದ್ದ ಆರೋಪಿಯನ್ನು ಗಿರಿನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ. ಸೂರಜ್ ಗೌಡ ಬಂಧಿತ ಆರೋಪಿ. ಈತ ಕೆಂಗೇರಿ ಬಳಿ ಪೂರ್ಣ ಪ್ರಜ್ಞಾ ಫೌಂಡೇಶನ್‌ನ ಹೆಸರಿನಲ್ಲಿ ಮದ್ಯ ಮತ್ತು ಮಾದಕ ವ್ಯಸನ ಮುಕ್ತಿ ಕೇಂದ್ರ ನಡೆಸುತ್ತಿದ್ದ ಎಂದು ತಿಳಿದು ಬಂದಿದೆ.
ಪಧವೀಧರನಾಗಿದ್ದ ಆರೋಪಿ ಸ್ವತಃ ತಾನೇ ಮಾದಕ ವ್ಯಸನಿಯಾಗಿದ್ದ. ಮಾತ್ರವಲ್ಲದೇ ಒಮ್ಮೆ ಆತ್ಮಹತ್ಯೆಗೂ ಯತ್ನಿಸಿದ್ದ. ಬಳಿಕ ಮಾದಕ ವ್ಯಸನದಿಂದ ಮುಕ್ತಿ ಹೊಂದಲು ತಾನೇ ಒಂದು ಮಧ್ಯ ಮತ್ತು ಮಾದಕ ವ್ಯಸನ ಮುಕ್ತಿ ಕೇಂದ್ರ ತೆರೆದಿದ್ದ. ಆದರೆ, ಮಾದಕ ವ್ಯಸನದಿಂದ ಹೊರಬರಲಾರದೇ ತಾನು ಮಾದಕ ಪದಾರ್ಥಗಳನ್ನ ಸೇವಿಸುವುದಲ್ಲದೇ, ವ್ಯಸನದಿಂದ ಮುಕ್ತರಾಗಲು ದಾಖಲಾಗಿದ್ದವರಿಗೂ ಸಹ ನೀಡುತ್ತಿದ್ದ ಎಂದು ತಿಳಿದು ಬಂದಿದೆ.
ನಗರದಲ್ಲಿ ಮಾದಕ ಪದಾರ್ಥಗಳಿಗೆ ಕಡಿವಾಣ ಹಾಲು ವಿಶೇಷ ಕಾರ್ಯಾಚರಣೆ ಆರಂಭಿಸಿದ್ದ ಪೊಲೀಸರು ಆರೋಪಿಯನ್ನ ಹೊಸಕೆರೆಹಳ್ಳಿ ಬಳಿ ಎಂಡಿಎಂಎ ಎಕ್ಸ್ಟಸಿ ಪಿಲ್ಸ್ ಮಾರಾಟ ಮಾಡುತ್ತಿದ್ದಾಗ ವಶಕ್ಕೆ ಪಡೆದಿದ್ದರು. ವಿಚಾರಣೆ ಸಂದರ್ಭದಲ್ಲಿ ಆರೋಪಿ ಅಸಲಿಯತ್ತು ಬಯಲಾಗಿದೆ. ಬಂಧಿತನಿಂದ 1.25 ಲಕ್ಷ ಮೌಲ್ಯದ ಎಂಡಿಎಂಎ ವಶಕ್ಕೆ ಪಡೆಯಲಾಗಿದೆ. ಈ ಸಂಬಂಧ ಗಿರಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ದಕ್ಷಿಣ ವಿಭಾಗದ ಡಿಸಿಪಿ ಪಿ.ಕೃಷ್ಣಕಾಂತ್ ತಿಳಿಸಿದ್ದಾರೆ.
ಇದನ್ನೂ ಓದಿ: ಪ್ರತಿಷ್ಠಿತ ಕಾಲೇಜಿನ ಬಳಿ ಗಾಂಜಾ ಮಾರಾಟ: ಆನೇಕಲ್‌ನಲ್ಲಿ ಇಬ್ಬರ ಬಂಧನ
ಮಾದಕ ದಂಧೆ ವಿರುದ್ಧ ವಿಶೇಷ ಕಾರ್ಯಾಚರಣೆ: ಇತ್ತೀಚೆಗೆ ಶಾಲಾ ಕಾಲೇಜು, ಪಾರ್ಕ್ ಮತ್ತಿತರ ಸಾರ್ವಜನಿಕ ಸ್ಥಳಗಳಲ್ಲಿ ಮಾದಕ ದಂಧೆ ನಡೆಸುವವರ ವಿರುದ್ಧ ವಿಶೇಷ ಕಾರ್ಯಾಚರಣೆ ಕೈಗೊಂಡ ಬೆಂಗಳೂರು ಕೇಂದ್ರ ವಿಭಾಗದ ಪೊಲೀಸರು ತಡರಾತ್ರಿ 21 ಆರೋಪಿಗಳನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದರು. ಮಾದಕ ಸೇವನೆಯಲ್ಲಿ ತೊಡಗಿದ್ದ 18 ಆರೋಪಿಗಳು ಹಾಗೂ ಮಾರಾಟದಲ್ಲಿ ತೊಡಗಿದ್ದ ಮೂವರು ಸಹಿತ ಒಟ್ಟು 21 ಆರೋಪಿಗಳನ್ನು ಬಂಧಿಸಲಾಗಿತ್ತು. ಬಂಧಿತರಿಂದ 11 ಗ್ರಾಂ ಎಂಡಿಎಂಎ, 7 ಗ್ರಾಂ ಹೈಡ್ರಾ ಮಾಂಗೋ ಹಾಗೂ 2.5 ಕೆ.ಜಿ ಗಾಂಜಾವನ್ನು ವಶಕ್ಕೆ ಪಡೆಯಲಾಗಿತ್ತು.
ಇತ್ತೀಚಿಗಷ್ಟೇ ರಾಜ್ಯದ ನೂತನ ಪೊಲೀಸ್ ಮಹಾ ನಿರ್ದೇಶಕರಾಗಿ ನೇಮಕವಾದ ಅಲೋಕ್ ಮೋಹನ್ ನಗರದ ಎಲ್ಲ ಹಿರಿಯ ಪೊಲೀಸ್ ಅಧಿಕಾರಿಗಳ ಸಭೆಯಲ್ಲಿ ಬೆಂಗಳೂರು ನಗರವನ್ನು ಡ್ರಗ್ಸ್ ಮುಕ್ತ ನಗರವನ್ನಾಗಿ ಮಾಡಬೇಕಿದೆ ಎಂದಿದ್ದರು. ಡಿಜಿ ಹಾಗೂ ಐಜಿಪಿಯವರ ಖಡಕ್ ಸೂಚನೆಯ ಮೇರೆಗೆ ನಗರದ ಎಲ್ಲ ವಿಭಾಗಗಳ ಪೊಲೀಸರು ಅಲರ್ಟ್ ಆಗಿದ್ದು, ಶಾಲಾ ಕಾಲೇಜುಗಳ ಪುನಾರಂಭಕ್ಕೂ ಮುನ್ನ ಮಾದಕ ದಂಧೆಕೋರರ ವಿರುದ್ಧ ವಿಶೇಷ ಕಾರ್ಯಾಚರಣೆ ಆರಂಭಿಸಿದ್ದಾರೆ.
ಡ್ರಗ್ ಪೆಡ್ಲರ್ ಬಂಧನ: ಕಾಲೇಜು ವಿದ್ಯಾರ್ಥಿಗಳು, ಪಿಜಿಗಳಿಗೆ ಗಾಂಜಾ ಮಾರಾಟ ಮಾಡುತ್ತಿದ್ದ ಡ್ರಗ್ ಪೆಡ್ಲರ್‌ನನ್ನು ಇತ್ತೀಚೆಗೆ ತಲಘಟ್ಟಪುರ ಪೊಲೀಸರು ಬಂಧಿಸಿದ್ದರು. ಬನಶಂಕರಿ 2ನೇ ಹಂತದ ಕಾವೇರಿನಗರದ ನಿವಾಸಿ ಫಜಾಯ್ ಪಾಷಾ ಅಲಿಯಾಸ್ ಪಿಲ್ಲು ಬಂಧಿತ ಆರೋಪಿ. ಬಂಧಿತನಿಂದ 10.50 ಲಕ್ಷ ರೂ. ಮೌಲ್ಯದ 15 ಕೆಜಿ ಮಾದಕ ವಸ್ತುವಾದ ಗಾಂಜಾ, 2 ಸಾವಿರ ನಗದು, ಮೊಬೈಲ್, ಬೈಕ್ ವಶಕ್ಕೆ ಪಡೆಯಲಾಗಿತ್ತು.
ಇದನ್ನೂ ಓದಿ: ಡಿಜಿ, ಐಜಿಪಿ ಸೂಚನೆಯಿಂದ ಪೊಲೀಸರು ಅಲರ್ಟ್: ಮಾದಕ ದಂಧೆ ವಿರುದ್ಧ ವಿಶೇಷ ಕಾರ್ಯಾಚರಣೆ