ಬೆಂಗಳೂರು: ದೇಶಾದ್ಯಂತ ಆರ್ಟಿಒ ಕಚೇರಿಗೆ ಏಕರೂಪ ಆನ್ಲೈನ್ ಯೋಜನೆಯನ್ನು ಜಾರಿಗೆ ತರಲಾಗಿದೆ. ಈ ಮೂಲಕ ಪ್ರಾದೇಶಿಕ ಸಾರಿಗೆ ಕಚೇರಿಗಳಲ್ಲಿ ಆನ್ಲೈನ್ ಮೂಲಕ ಚಾಲನೆ ಪರವಾನಗಿ ಪಡೆದುಕೊಳ್ಳಲು ವ್ಯವಸ್ಥೆ ಮಾಡಲಾಗಿದೆ. ಇದರಿಂದಾಗಿ ರಾಜ್ಯಾದ್ಯಂತ ಎಲ್ಎಲ್ಆರ್ ಅಥವಾ ಡಿಎಲ್ ಹಂಚಿಕೆ ಸಲೀಸಾಗಿ ನಡೆಯುತ್ತಿದ್ದು, ಅಂಚೆಯ ಮೂಲಕ ಚಾಲಕನಿಗೆ ಕಳಿಸಿಕೊಡಲಾಗುತ್ತಿದೆ.
ಇನ್ನು ಗಣಿಜಿಲ್ಲೆ ಬಳ್ಳಾರಿಯ ಆರ್ಟಿಒ ಕಚೇರಿ ಆವರಣದಲ್ಲಿ, ಸದಾ ಜನಜಂಗುಳಿ ಇರುತ್ತಿತ್ತು. ಇದೀಗ ಎಲ್ಲವೂ ಖಾಲಿ ಖಾಲಿಯಾಗಿದ್ದು, ಕಟ್ಟುನಿಟ್ಟಾಗಿ ಸಾಮಾಜಿಕ ಅಂತರ ಮತ್ತು ಮಾಸ್ಕ್ ಕಡ್ಡಾಯ ಇರೋದ್ರಿಂದ ಜನದಟ್ಟಣೆ ಕಡಿಮೆಯಾಗಿದೆ. ಹಾಗೂ ವಾಹನ ಖರೀದಿಯ ಸಂಖ್ಯೆ ಕಡಿಮೆಯಾಗಿದ್ದರಿಂದ, ಡ್ರೈವಿಂಗ್ ಲೈಸೆನ್ಸ್ ಡಿಮ್ಯಾಂಡ್ ಕೂಡ ಕಮ್ಮಿಯಾಗಿದೆ. ಕೊರೊನಾಗಿಂತ ಮುನ್ನ ದಿನಾಲೂ ನೂರಾರು ಲೈಸೆನ್ಸ್ ಅರ್ಜಿಗಳು ಬರುತ್ತಿದ್ದವು. ಆದರೆ ಇದೀಗ ಕೇವಲ ಹತ್ತಾರು ಅರ್ಜಿಗಳು ಮಾತ್ರ ಸ್ವೀಕೃತವಾಗುತ್ತಿವೆ.
ಮುಖ್ಯವಾಗಿ ಆನ್ಲೈನ್ ಅರ್ಜಿಗಳ ಸ್ವೀಕೃತಿಯಿಂದ ಮಧ್ಯವರ್ತಿಗಳ ಹಾವಳಿಗೆ ಕಡಿವಾಣ ಹಾಕಿದಂತಾಗಿದೆ. ಅರ್ಜಿ ಸಲ್ಲಿಸಿ ನೇರವಾಗಿ ಕಚೇರಿಗೆ ಬಂದರೆ ಸಾಕು, ಅತ್ಯಂತ ಸರಾಗವಾಗಿ ಚಾಲನಾ ಪರವಾನಗಿ ಪಡೆಯಬಹುದಾಗಿದೆ. ಕಳೆದ ಡಿಸೆಂಬರ್ ತಿಂಗಳಿನಿಂದ ಸೆಪ್ಟೆಂಬರ್ 30ರವರೆಗೆ ಸುಮಾರು 14,000 ಕ್ಕೂ ಅಧಿಕ ಚಾಲನಾ ಪರವಾನಗಿ ಪತ್ರಗಳನ್ನು ವಿತರಿಸಲಾಗಿದ್ದು, ಶೇಕಡ 80 ರಷ್ಟು ಚಾಲನಾ ಪರವಾನಗಿ ಪತ್ರಗಳನ್ನ ಅಂಚೆ ಮೂಲಕ ಕಳಿಸಿಕೊಡ ಲಾಗಿದೆ. ಶೇಕಡ 2ರಷ್ಟು ಅಂಚೆ ಪತ್ರಗಳು ವಾಪಾಸ್ ಬಂದಿದ್ದು, ಬೇರೇನೂ ಸಮಸ್ಯೆ ಎದುರಾಗಿಲ್ಲ.
ಇನ್ನು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರತಿದಿನ 200 ಕ್ಕೂ ಅಧಿಕ ಡ್ರೈವಿಂಗ್ ಲೈಸೆನ್ಸ್ ಸ್ಮಾರ್ಟ್ ಕಾರ್ಡ್ಗಳನ್ನು ರೆಡಿಯಾಗುತ್ತವೆ. ಇದರಲ್ಲಿ ಸುಮಾರು 150 ರಷ್ಟು ಹೊಸ ಚಾಲನ ಪರವಾನಿಗೆ ಮತ್ತು 50 ರಷ್ಟು ನವೀಕರಣ ಪರವಾನಿಗೆ ಇರುತ್ತವೆ. ಡ್ರೈವಿಂಗ್ ಲೈಸೆನ್ಸ್ ವಿತರಣೆಯಲ್ಲಿ ಯಾವುದೇ ಲೋಪವಿಲ್ಲದಂತೆ ವಿತರಿಸಲಾಗುತ್ತಿದೆ. ರಿಜಿಸ್ಟರ್ ಪೋಸ್ಟ್ಗಳ ಮೂಲಕ ಚಾಲಕರಿಗೆ ಲೈಸೆನ್ಸ್ನ್ನು ತಲುಪಿಸಲಾಗುತ್ತಿದ್ದು, ಒಂದು ವೇಳೆ ವಾಪಸ್ ಕಚೇರಿಗೆ ಬಂದ ಸ್ಮಾರ್ಟ್ ಕಾರ್ಡನ್ನು ವಿಳಾಸ ದೃಢೀಕರಣ ಮಾಡಿ ನೀಡಲಾಗುತ್ತದೆ.
ಈ ಹಿಂದೆ ಎಲ್ಎಲ್ಆರ್ ಅಥವಾ ಡಿಎಲ್ ಪಡೆಯಬೇಕಾಗಿದ್ದರೆ ಎಲ್ಲಿಲ್ಲದ ಹರಸಾಹಸ ಪಡಬೇಕಾಗಿತ್ತು. ಇದರ ಮಧ್ಯೆ ದಲ್ಲಾಳಿಗಳ ಹಾವಳಿ ಬೇರೆ. ಮುಖ್ಯವಾಗಿ ಸಾರಿಗೆ ಇಲಾಖೆಯಲ್ಲಿ ಭ್ರಷ್ಟಾಚಾರವು ತಾಂಡವವಾಡುತ್ತಿದ್ದು, ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಹಾಗೂ ಸಾರ್ವಜನಿಕರಿಗೆ ಉಪಯೋಗವಾಗುವ ದೃಷ್ಟಿಯಿಂದ ಈ ಸೇವೆಯನ್ನು ಸರ್ಕಾರ ರೂಪಿಸಿದೆ.