ಬೆಂಗಳೂರು: ಎಲೆಕ್ಟ್ರಿಕಲ್ ಬೈಕ್ ಟ್ಯಾಕ್ಸಿ ಯೋಜನೆಗೆ ಚಾಲನೆ ನೀಡಬಾರದೆಂದು ನಮ್ಮ ಚಾಲಕರ ಚಾಲಕರ ಟ್ರೇಡ್ ಯೂನಿಯನ್ ರಾಜ್ಯಾಧ್ಯಕ್ಷ ಸೋಮಶೇಖರ್ ಸರ್ಕಾರದ ಸಾರಿಗೆ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.
ಸರ್ಕಾರ ಹೊರಡಿಸಿರುವ ಆದೇಶದಂತೆ ಸಾರಿಗೆ ಇಲಾಖೆಯ ನಿಯಮಾನುಸಾರದ ವಿರುದ್ಧವಾದ ಆದೇಶವಾಗಿದೆ. ಈ ಬೈಕ್ ಟ್ಯಾಕ್ಸಿ ಸೇವೆ ಆರಂಭವಾದರೆ ಖಾಸಗಿ ವಾಣಿಜ್ಯ ವಾಹನಗಳನ್ನು (ಆಟೋ ಮತ್ತು ಕ್ಯಾಬ್) ತೆಗೆದುಕೊಂಡಿರುವ ಹಾಗೂ ಅದರಿಂದಲೇ ಜೀವನ ನಡೆಸಿಕೊಂಡು ಬದುಕನ್ನು ಕಟ್ಟಿಕೊಂಡಿರುವ ಲಕ್ಷಾಂತರ ಆಟೋ ಮತ್ತು ಟ್ಯಾಕ್ಸಿ ಚಾಲಕರ ಬದುಕಿಗೆ ಸರ್ಕಾರವೇ ವಿಷ ನೀಡಿದಂತೆ ಆಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಈಗಾಗಲೇ ಕೊರೊನಾ ಸೋಂಕಿನಿಂದ ಲಾಕ್‌ಡೌನ್‌ನಿಂದಾಗಿ ತೀವ್ರ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಈ ಸಮುದಾಯಕ್ಕೆ ವಂಚನೆಯಾಗುತ್ತದೆ. ಈಗಾಗಲೇ ಸ್ವಂತ ಬಳಕೆ ಬಳಸುವ (ವೈಟ್ ಬೋರ್ಡ್ ಬೈಕ್‌ಗಳನ್ನು) (ಸ್ಕೂಟರ್) ರಾಪಿಡೋ ಹಾಗೂ ಪೋರ್ಟರ್ ಎನ್ನುವ ಸಂಸ್ಥೆ ಕಾನೂನು ಬಾಹಿರವಾಗಿ ತಮ್ಮ ಚಟುವಟಿಕೆ ನಡೆಸಿಕೊಂಡು ಆ್ಯಪ್ ಮೂಲಕ ಆನ್‌ಲೈನ್ ನೋಂದಣಿ ಮಾಡಿಸಿಕೊಂಡು ತಮ್ಮ ಸೇವೆಯನ್ನು ಈಗಾಗಲೇ ನೀಡುತ್ತಿದ್ದಾರೆ. ರ್ಯಾ ಎನ್ನುವ ಸಂಸ್ಥೆಯು ದಿನಕ್ಕೆ 70,000 ಬುಕ್ಕಿಂಗ್‌ಗಳನ್ನು ಪಡೆದು ಕಾನೂನು ಬಾಹಿರವಾಗಿ ಸಾರ್ವಜನಿಕರಿಗೆ ಸೇವೆ ನೀಡುತ್ತಿದೆ. ಅದೇ ರೀತಿ ಪೋಟರ್ ಎನ್ನುವ ಸಂಸ್ಥೆಯು ಸರಕು ಸಾಮಾನು (ಗೂಡ್ಸ್ ಮೆಟಿರಿಯಲ್ಸ್)ಗಳ ವಿಲೇವಾರಿ ನಡೆಸುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.
ಆಟೋ ಮತ್ತು ಟ್ಯಾಕ್ಸಿ ಚಾಲಕರು ಸಾರ್ವಜನಿಕರ ಸೇವೆಗೆಂದೇ ಬಳಸುತ್ತಿರುವ ಆಟೋ ಮತ್ತು ಟ್ಯಾಕ್ಸಿಗಳಿಂದ ಆಗುವ ಸಂಪಾದನೆಯಿಂದಲೇ ಜೀವನ ನಿರ್ವಹಣೆ ನಡೆಯುತ್ತಿದೆ. ಈ ವಿದ್ಯುತ್ ಬೈಕ್ ಟ್ಯಾಕ್ಸಿ ಯೋಜನೆ ಜಾರಿಗೆ ಬರಬಾರದು ಬಂದಿದ್ದೇ ಆದರೆ ಲಕ್ಷಾಂತರ ಚಾಲಕರ ಬದುಕಿಗೆ ಸರ್ಕಾರವೇ ವಿಷ ಉಣಿಸಿದಂತೆ ಆಗುತ್ತದೆ.
ಈ ಬೈಕ್ ಟ್ಯಾಕ್ಸಿ ಸೇವೆ ವಿಚಾರಕ್ಕೆ ಬಂದರೆ ಇದರಿಂದ ತೊಂದರೆಯೇ ಹೊರತೂ ಇಲ್ಲಿ ಯಾರಿಗೂ ಅನುಕೂಲವಾಗುವುದಿಲ್ಲ, ದಯವಿಟ್ಟು ಈ ಮನವಿಗೆ ತಾವುಗಳು ಹಿಂಬರಹ ನೀಡಲೇಬೇಕು, ಯಾವುದೇ ಕಾರಣಕ್ಕೂ ಯಾವುದೇ ತರಹದ ಬೈಕ್ ಟ್ಯಾಕ್ಸಿ ಸೇವೆಗೆ (ರೆಂಟಲ್) ಅನುಮತಿಯೇ ನೀಡಬಾರದು ಅನುಮತಿ ನೀಡಿದ್ದೇ ಆದರೆ ಯೂನಿಯನ್ ವತಿಯಿಂದ ದೊಡ್ಡ ಮಟ್ಟದ ಹೋರಾಟ ಮಾಡಬೇಕಾಗುತ್ತದೆ. ಇದಲ್ಲದೇ ಕಾನೂನಿನ ಮೊರೆ ಹೋಗಬೇಕಾಗುತ್ತದೆ. ದಯವಿಟ್ಟು ಈ ಅವೈಜ್ಞಾನಿಕ ಸೇವೆಗೆ ಅನುಮತಿ ನೀಡಬಾರದೆಂದು ವಿನಂತಿಸಿದ್ದಾರೆ.