ಬೆಂಗಳೂರು: ಕೆಲಸ ಕೊಟ್ಟ ಮಾಲೀಕನಿಗೆ ವಂಚಿಸಿ 75 ಲಕ್ಷ ರೂ ಹಣ ದೋಚಿ ಪರಾರಿಯಾಗಿದ್ದ ಕಾರು ಚಾಲಕನನ್ನು ಬ್ಯಾಟರಾಯನಪುರ ಪೊಲೀಸರು ಬಂಧಿಸಿದ್ದಾರೆ. ಕೆಜಿಎಫ್ ಮೂಲದ ಹೊಸಕೋಟೆ ನಿವಾಸಿ ಸಂತೋಷ್ ಕುಮಾರ್ ಆರೋಪಿ.
ರಿಯಲ್ ಎಸ್ಟೇಟ್ ವ್ಯವಹಾರ ನಡೆಸುತ್ತಿದ್ದ ಹರೀಶ್ ನೀಡಿದ ದೂರಿನ ಮೇರೆಗೆ ಆರೋಪಿಯಿಂದ 72 ಲಕ್ಷ ರೂ ನಗದು ಜಪ್ತಿ ಮಾಡಿಕೊಂಡು, ಆತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಹೊಸಕೋಟೆ ನಿಂಬೆಕಾಯಿಪುರದ ನಿವಾಸಿ ಹರೀಶ್ ಬಳಿ ಕಳೆದ ಆರು ತಿಂಗಳಿನಿಂದ ಕಾರು ಚಾಲಕನಾಗಿ ಆರೋಪಿ ಕೆಲಸ ಮಾಡುತ್ತಿದ್ದ. ಅವರು ಚಾಲಕನಿಗೆ ತಿಂಗಳಿಗೆ 25 ಸಾವಿರ ರೂಪಾಯಿ ಸಂಬಳ ನೀಡುತ್ತಿದ್ದರಂತೆ.
ಹಣ ಸಮೇತ ಕಾರು ಚಾಲಕ ಪರಾರಿ: ಇತ್ತೀಚೆಗೆ ಹೈದರಾಬಾದ್ನಲ್ಲಿ ಫ್ಲ್ಯಾಟ್ ಮಾರಾಟದಿಂದ 75 ಲಕ್ಷ ರೂಪಾಯಿ ಹಣ ಬಂದಿತ್ತು. ಕಳೆದ ತಿಂಗಳು 19ರಂದು ಕುಂಬಳಗೋಡಿನ ಬಳಿಯ ರೆಸಾರ್ಟ್‌ನಲ್ಲಿ ಪಾರ್ಟಿ ಮುಗಿಸಿ ಬ್ಯಾಟರಾಯಪುರ ಬಳಿ ಕಾರಿನಲ್ಲಿ ಬರುತ್ತಿದ್ದರು. ಈ ವೇಳೆ ಕಾರು ನಿಲ್ಲಿಸಿ ಸಿಗರೇಟ್ ತರಲು ಹರೀಶ್ ಕಾರಿನಿಂದ ಇಳಿದಿದ್ದರು. ಅಂಗಡಿಗೆ ಹೋಗಿ ಬರುವಷ್ಟರಲ್ಲಿ ಚಾಲಕ ಸಂತೋಷ್ ಕಾರಿನಲ್ಲಿದ್ದ 75 ಲಕ್ಷ ರೂಪಾಯಿ ಹಣ ಸಮೇತ ಪರಾರಿಯಾಗಿದ್ದ.
ಕಾರು ಹಾಗೂ ಲಕ್ಷಾಂತರ ರೂಪಾಯಿ ಹಣ ದೋಚಿ ವಾರ ಕಳೆದರೂ ಚಾಲಕ ಮರಳಿ ಬರದಿರುವುದನ್ನು ಕಂಡು ಹರೀಶ್ ದೂರನ್ನು ನೀಡಿದ್ದರು. ದೂರು ಸ್ವೀಕರಿಸಿ ಪ್ರಕರಣ ದಾಖಲಿಸಿಕೊಂಡ ಬ್ಯಾಟರಾಯನಪುರ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಶಂಕರ್ ನಾಯಕ್, ಆರೋಪಿ ಮೊಬೈಲ್ ಐಎಂಇಐ ಆಧಾರದ ಮೇರೆಗೆ ಆತನನ್ನು ಪತ್ತೆ ಹಚ್ಚಿ ಬಂಧಿಸಿದ್ದಾರೆ. 75 ಲಕ್ಷ ರೂಪಾಯಿ ಹಣ ದೋಚಿ ಪರಾರಿಯಾಗಿದ್ದ ಕಾರು ಚಾಲಕ ಸಂತೋಷ್, ಕಾರನ್ನ ತನ್ನ ಸಂಬಂಧಿಗೆ ನೀಡಿ ಧರ್ಮಸ್ಥಳ, ಹೊರನಾಡು, ತಿರುಪತಿ ಸೇರಿ ವಿವಿಧೆಡೆಗಳಲ್ಲಿ ತಲೆಮರೆಸಿಕೊಂಡಿದ್ದ.
ಇದನ್ನೂ ಓದಿ: ದಂಡ ಕಟ್ಟುವ ವಿಚಾರಕ್ಕೆ ಟ್ರಾಫಿಕ್ ASIಗೆ ಆವಾಜ್ ಹಾಕಿದ ಇನ್‌ಸ್ಪೆಕ್ಟರ್: ಆಡಿಯೋ ವೈರಲ್
ಕಳ್ಳತನ ಮಾಡಿದ್ದ 75 ಲಕ್ಷ ಹಣದಲ್ಲಿ ಸೋದರಮಾವನಿಗೆ 10 ಲಕ್ಷ ರೂಪಾಯಿಗೆ ಚಿನ್ನ ಮಾಡಿಸಿಕೊಟ್ಟಿದ್ದ. ಲಕ್ಷ-ಲಕ್ಷ ಹಣವಿದ್ದರೂ ಕಡಿಮೆ ಬೆಲೆಯ ರೂಮ್ ಹಾಗೂ ಲಾಡ್ಜ್‌ಗಳಲ್ಲಿ ತಂಗುತ್ತಿದ್ದ. ಎಲ್ಲೇ ಹೋದರೂ ಹಣವಿರುವ ಬ್ಯಾಗ್ ಇಟ್ಟುಕೊಂಡು ಓಡಾಡುತ್ತಿದ್ದ. ನಿರಂತರ ಕಾರ್ಯಾಚರಣೆ ಬಳಿಕ ಹೊಸಕೋಟೆಯಲ್ಲಿ ಅವಿತುಕೊಂಡಿದ್ದ ಆರೋಪಿಯು ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ.
ಬ್ಲಾಕ್ ಮನಿ ಎಂದು ಹಣ ದೋಚಿದ್ದ ಚಾಲಕ: ಮಾಲೀಕನ ಬಳಿಯಿರುವ 75 ಲಕ್ಷ ಹಣ ಬ್ಲಾಕ್ ಮನಿ ಎಂದು ಭಾವಿಸಿಕೊಂಡಿದ್ದ ಚಾಲಕ, ಹಣ ಲಪಾಟಿಸಿದರೆ ಪೊಲೀಸರಿಗೆ ದೂರು ನೀಡುವುದಿಲ್ಲ ಎಂದು ಅರಿತು ಕಳ್ಳತನ ಮಾಡಿದ್ದ. ಕೃತ್ಯವೆಸಗಿ ಒಂದು ವಾರವಾದರೂ ಪೊಲೀಸರಿಗೆ ಮಾಲೀಕ ದೂರು ನೀಡಿರಲಿಲ್ಲ. ಕದ್ದ ಹಣವು ಕಪ್ಪು ಹಣ ಎಂದು ಖಚಿತಪಡಿಸಿಕೊಂಡಿದ್ದ. ಮತ್ತೊಂದೆಡೆ ತಡವಾಗಿ ದೂರು ನೀಡಿದ ಮಾಲೀಕನ ಹಣ ಮೂಲ ಪತ್ತೆ ಹಚ್ಚಲು ಬ್ಯಾಟರಾಯನಪುರ ಪೊಲೀಸರು ಐಟಿ ಇಲಾಖೆಗೆ ಪತ್ರ ಬರೆದಿದ್ದಾರೆ.