ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ಸೋಂಕಿತರಿಗೆ ತುರ್ತು ಸಂದರ್ಭದಲ್ಲಿ ಒದಗಿಸಲು ಇದೀಗ 15,000 ಆಮ್ಲಜನಕ ಸಾಂದ್ರಕಗಳನ್ನು ಖರೀದಿ ಮಾಡಲಾಗುತ್ತಿದೆ ಎಂದು ರಾಜ್ಯ ಕೋವಿಡ್ ಕಾರ್ಯಪಡೆ ಅಧ್ಯಕ್ಷ ಹಾಗೂ ಉಪ ಮುಖ್ಯಮಂತ್ರಿ ಡಾ. ಸಿ.ಎನ್.ಅಶ್ವತ್ಥ ನಾರಾಯಣ ಹೇಳಿದ್ದಾರೆ.
ನಗರದ ಮಲ್ಲೇಶ್ವರ ವಿಧಾನಸಭೆ ಕ್ಷೇತ್ರದಲ್ಲಿ ಆಮ್ಲಜನಕ ಕೊರತೆ ಎದುರಿಸುತ್ತಿರುವ ಕೋವಿಡ್ ಸೋಂಕಿತರಿಗೆ ಮನೆ ಬಾಗಿಲಿಗೆ ಆಮ್ಲಜನಕ ಸಾಂದ್ರಕಗಳನ್ನು ಒದಗಿಸುವ ಕಾರ್ಯಕ್ರಮಕ್ಕೆ ಯದುಗಿರಿ ಯತಿರಾಜ ಮಠದ ಶ್ರೀ ನಾರಾಯಣ ರಾಮಾನುಜ ಜಿಯರ್ ಸ್ವಾಮೀಜಿ ಅವರ ಸಾನ್ನಿಧ್ಯದಲ್ಲಿ ಇಂದು ಚಾಲನೆ ನೀಡಲಾಯಿತು.
ಇದೀಗ ಸ್ಟಾಕ್ ಇರುವವರ ಬಳಿ ಸುಮಾರು 5,000 ಸಾಂದ್ರಕಗಳನ್ನು ಖರೀದಿಸುತ್ತೇವೆ. ನಂತರ ಉಳಿದ 10,000 ಸಾಂದ್ರಕಗಳ ಖರೀದಿಗೆ ತಕ್ಷಣವೇ ಟೆಂಡರ್ ಕರೆಯುವಂತೆ ಅಧಿಕಾರಿಗಳಿಗೆ ಡಿಸಿಎಂ ಸೂಚನೆ ನೀಡಿದ್ರು.
ಮಲ್ಲೇಶ್ವರದಲ್ಲಿ ಇಂದು ನಡೆದ ಈ ಕಾರ್ಯಕ್ರಮದಲ್ಲಿ ಶ್ರೀ ನಾರಾಯಣ ರಾಮಾನುಜ ಜಿಯರ್ ಸ್ವಾಮೀಜಿ ಅವರು 70 ಆಮ್ಲಜನಕ ಸಾಂದ್ರಕಗಳನ್ನು ಕ್ಷೇತ್ರದ ಜನರ ಸೇವೆಗೆ ನೀಡಿದರು. ನಂತರ ಡಿಸಿಎಂ ಅಶ್ವತ್ಥ ನಾರಾಯಣ, ಕೋಲಾರ ಸಂಸದ ಮುನಿಸ್ವಾಮಿ ಅವರಿಗೆ 20 ಸಾಂದ್ರಕಗಳನ್ನು ಹಸ್ತಾಂತರಿಸಿದ್ರು.
ಈ ಸಂದರ್ಭದಲ್ಲಿ ಮಾತನಾಡಿದ ಸ್ವಾಮೀಜಿ, "ಕೋವಿಡ್ ಕಾರ್ಮೋಡ ಕವಿದ ಈ ಹೊತ್ತಿಗೆ ಆಮ್ಲಜನಕ ಸಾಂದ್ರಕಗಳನ್ನು ಕೊಡುತ್ತಿರುವುದು ಬೆಳ್ಳಿ ಗೆರೆ ಮೂಡಿದಂತೆ ಆಗಿದೆ. ಎಲ್ಲರೂ ಧೈರ್ಯವಾಗಿ ಸೋಂಕಿನ ವಿರುದ್ಧ ಹೋರಾಟ ನಡೆಸಬೇಕೆ ವಿನಾ ಎದೆಗುಂದಬಾರದು" ಎಂದರು.
ಕಾರ್ಯಕ್ಕೆ ದಾನಿಗಳ ನೆರವು:
ಆಕ್ಷನ್ ಕೋವಿಡ್ ಟೀಂ ಹಾಗೂ ಝಿರೋದ ಸಂಸ್ಥೆಗಳು 70 ಆಮ್ಲಜನಕ ಸಾಂದ್ರಕಗಳನ್ನು ದಾನ ಮಾಡಿವೆ. 'ಸೇವಾ ಹೀ' ಸಂಘಟನೆ ಮೂಲಕ ಜನರ ಸೇವೆಗೆ ನೀಡಲಾಗುವುದು. ಆಮ್ಲಜನಕ ಕೊರತೆ, ಅದರಲ್ಲೂ 85% ಆಕ್ಸಿಜನ್ ಸ್ಯಾಚುರೇಷನ್ ಕಡಿಮೆ ಇರುವವರಿಗೆ ಇವುಗಳನ್ನು ಕೊಡುತ್ತೇವೆ ಎಂದು ಡಿಸಿಎಂ ಹೇಳಿದರು.
ಏನಿದು ಆಮ್ಲಜನಕ ಸಾಂದ್ರಕ? ಹಂಚಿಕೆ ಹೇಗೆ?
ಇದು ರೆಡಿಮೇಡ್ ಆಮ್ಲಜನಕ ಘಟಕದ ರೀತಿ ಕೆಲಸ ಮಾಡುತ್ತದೆ. ಸಾಗಾಣಿಕೆ ಕೂಡ ಸುಲಭ. ಮನೆಯಲ್ಲೇ ಸರಳವಾಗಿ ಬಳಸಬಹುದು. ಹೋಮ್ ಐಸೋಲೇಷನ್ ಆಗಿ ಚಿಕಿತ್ಸೆ ಪಡೆಯುತ್ತಿರುವ ಸೋಂಕಿತರಿಗೆ ಆಪದ್ಭಾಂದವನಂತೆ ಕೆಲಸ ಮಾಡುತ್ತದೆ. ಮಲ್ಲೇಶ್ವರ ವ್ಯಾಪ್ತಿಯಲ್ಲಿ ಯಾರಿಗಾದರೂ ಆಮ್ಲಜನಕದ ಕೊರತೆ ಉಂಟಾದ ತಕ್ಷಣ ಹೆಲ್ಪ್‌ಲೈನ್ ಸಂಖ್ಯೆಗೆ ಕರೆ ಮಾಡಿದರೆ ಸಾಕು, ಕೂಡಲೇ ಅವರ ಮನೆ ಬಾಗಿಲಿಗೆ ಆಮ್ಲಜನಕ ಸಾಂದ್ರಕವನ್ನು ಸ್ವಯಂ ಸೇವಕರು ತಲುಪಿಸುತ್ತಾರೆ. ಜೊತೆಗೆ, ಅದನ್ನು ಬಳಸುವ ಬಗ್ಗೆ ಮಾಹಿತಿಯನ್ನೂ ನೀಡತ್ತಾರೆ. ಆ ಸೋಂಕಿತರು ಸಾಂದ್ರಕದ ಉಪಯೋಗ ಪಡೆದು ಅಪಾಯದಿಂದ ಪಾರಾದ ಮೇಲೆ ಅಥವಾ ಅವರಲ್ಲಿ ಆಮ್ಲಜನಕದ ಸಮಸ್ಯೆ ನೀಗಿದ ನಂತರ ಅದನ್ನು ವಾಪಸ್ ಪಡೆದು, ಸ್ಯಾನಿಟೈಸ್ ಮಾಡಿ ಪುನಃ ಅಗತ್ಯ ಇರುವ ಮತ್ತೊಬ್ಬ ಸೋಂಕಿತರಿಗೆ ನೀಡಲಾಗುವುದು. ಗಂಭೀರ ಸ್ಥಿತಿಯಲ್ಲಿರುವ ಸೋಂಕಿತರಿಗೆ ಆದ್ಯತೆಯ ಮೇಲೆ ಇವುಗಳನ್ನು ನೀಡಲಾಗುವುದು.
ಇದನ್ನೂ ಓದಿ: ಇಲ್ಲಿ ಅಡ್ಮಿಟ್ ಆದರೆ ಹೆಣವಾಗಿಯೇ ಹೊರ ಬರುವ ಸ್ಥಿತಿ ಇದೆ.. ಜಿಮ್ಸ್ ಆಸ್ಪತ್ರೆ ವಿರುದ್ಧ ಸೋಂಕಿತ, ರೋಗಿಗಳ ಸಂಬಂಧಿಕರು ಕಿಡಿ..
ಅತ್ಯಾಧುನಿಕವಾದ ಆಮ್ಲಜನಕ ಸಾಂದ್ರಕಗಳನ್ನು ಆಮದು ಮಾಡಿಕೊಂಡಿದ್ದು, ಅತ್ಯಂತ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತವೆ ಎಂದು ಡಾ. ಅಶ್ವತ್ಥ ನಾರಾಯಣ ತಿಳಿಸಿದ್ದಾರೆ.