ಬೆಂಗಳೂರು: ಕೃಷಿ ಸಂಜೀವಿನಿ ಸಂಚಾರಿ ಸಸ್ಯ ಚಿಕಿತ್ಸಾ ವಾಹನವನ್ನು ಸಿಎಂ ಯಡಿಯೂರಪ್ಪ ಅವರು ವಿಧಾನಸೌಧದಲ್ಲಿ ಲೋಕಾರ್ಪಣೆಗೊಳಿಸಿದರು.
40 ಕೃಷಿ ಸಂಜೀವಿನಿ ವಾಹನಗಳಿಗೆ ಚಾಲನೆ ನೀಡಲಾಯಿತು. ಚಿಕ್ಕ ಜಿಲ್ಲೆಗಳಿಗೆ ಒಂದು, ದೊಡ್ಡ ಜಿಲ್ಲೆಗಳಿಗೆ ಎರಡರಂತೆ ರಾಜ್ಯಾದ್ಯಂತ ಒಟ್ಟು 40 ಕೃಷಿ ಸಂಜೀವಿನಿ ವಾಹನಗಳನ್ನು ರೈತರಿಗೆ ಲೋಕಾರ್ಪಣೆಗೊಳಿಸಲಾಯಿತು.
ಕೃಷಿ ಉತ್ಪಾದನೆ ಮತ್ತು ಉತ್ಪಾದಕತೆಯು ನೈಸರ್ಗಿಕ ವಿಕೋಪಗಳಾದ ಅನಾವೃಷ್ಟಿ, ಅತಿವೃಷ್ಟಿ, ಚಂಡಮಾರುತ, ಬೆಳೆಗಳಿಗೆ ಕಾಡುವ ಕೀಟ ಮತ್ತು ರೋಗ ಬಾಧೆ ಹಾಗೂ ಮಣ್ಣಿನ ಫಲವತ್ತತೆ ಮತ್ತು ಇತರ ಅಂಶಗಳ ಮೇಲೆ ಅವಲಂಬಿತವಾಗಿರುತ್ತದೆ. ಕೀಟ, ರೋಗ ಮತ್ತು ಕಳೆಗಳ ಬಾಧೆ ಹಾಗೂ ಮಣ್ಣಿನ ಪೋಷಕಾಂಶ ಕೊರತೆ ಹಾಗೂ ಸಮರ್ಪಕ ನಿರ್ವಹಣೆ ಕುರಿತಂತೆ ರೈತರಿಗೆ ತಾಕುಗಳಲ್ಲಿಯೇ ಹತೋಟಿ ಕ್ರಮಗಳ ಕುರಿತು ಮಾರ್ಗೋಪಾಯಗಳನ್ನು ಒದಗಿಸಲು ಸಂಚಾರಿ ಸಸ್ಯ ಆರೋಗ್ಯ ಚಿಕಿತ್ಸಾಲಯ (ಕೃಷಿ ಸಂಜೀವಿನಿ) ಯೋಜನೆಯನ್ನು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ.
ಇದೇ ವೇಳೆ ಮಾತನಾಡಿದ ಸಿಎಂ, ಆಯಾ ಹೊಲಗಳಿಗೆ ಹೋಗಿ ಮಣ್ಣು, ನೀರು, ರೋಗ ಪರೀಕ್ಷೆ ಮಾಡುವ ವಾಹನವಿದು. ನಲವತ್ತು ವಾಹನಗಳನ್ನು ಈಗ ಲೋಕಾರ್ಪಣೆ ಮಾಡಿದ್ದೇನೆ. ಇವು ಹೇಗೆ ಕಾರ್ಯನಿರ್ವಹಿಸುತ್ತವೆ ಎಂಬುದರ ವರದಿಯ ಆಧಾರದ ಮೇಲೆ ಮುಂದಿನ ದಿನಗಳಲ್ಲಿ ಇದನ್ನು ಹೆಚ್ಚಿಸುವ ಚಿಂತನೆ ಇದೆ ಎಂದರು.
2020-21ನೇ ಸಾಲಿನಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ 40 ಸಂಚಾರಿ ಸಸ್ಯ ಆರೋಗ್ಯ ಚಿಕಿತ್ಸಾಲಯಗಳನ್ನು ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ಸ್ಥಾಪಿಸಲು ಅನುದಾನವನ್ನು ಒದಗಿಸಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಇದೇ ರೀತಿ ಬಳ್ಳಾರಿ ಮತ್ತು ಕೊಪ್ಪಳ ಜಿಲ್ಲೆಗಳಲ್ಲಿ ಆಯಾ ಜಿಲ್ಲೆಗಳಲ್ಲಿ ಜಿಲ್ಲಾ ಖನಿಜ ಪ್ರತಿಷ್ಠಾನದ ಕ್ರಿಯಾ ಯೋಜನೆಯಡಿ ಲಭ್ಯವಿರುವ ಅನುದಾನದಡಿ ಸಂಚಾರಿ ಸಸ್ಯ ಆರೋಗ್ಯ ಚಿಕಿತ್ಸಾಲಯವನ್ನು (ಕೃಷಿ ಸಂಜೀವಿನಿ) ಲೋಕಾರ್ಪಣೆಗೊಳಿಸಲಾಗುತ್ತಿದೆ.
ಕೃಷಿ ಸಂಜೀವಿನಿಯ ಉದ್ದೇಶವೇನು?:
ಸಕಾಲದಲ್ಲಿ ಬೆಳೆಯ ಎಲ್ಲಾ ಹಂತಗಳಲ್ಲಿ ಸರ್ವೇಕ್ಷಣೆಯನ್ನು ಕೈಗೊಂಡು ಕಂಡು ಬಂದಿರುವ, ಕಂಡು ಬರಬಹುದಾದ ಕೀಟ, ರೋಗ, ಕಳೆಗಳ ನಿರ್ವಹಣಾ ಮಾರ್ಗೋಪಾಯಗಳನ್ನು ರೈತರಿಗೆ ತಿಳಿಸುವುದು ಇದರ ಉದ್ದೇಶವಾಗಿದೆ.
ಕೃಷಿ ಸಂಜೀವಿನಿ ಸ್ಥಾಪನೆಯಿಂದ ಪೀಡೆ ಸರ್ವೇಕ್ಷಣಾ ಮತ್ತು ಸಲಹಾ ಘಟಕಗಳು ಇನ್ನೂ ಹೆಚ್ಚಿಗೆ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ಅನುಕೂಲಕರವಾಗಲಿದೆ. ಸಂಚಾರಿ ವಾಹನದ ಸೌಲಭ್ಯದಿಂದ ಹೆಚ್ಚಿನ ಸಂಖ್ಯೆಯ ರೈತರ ತಾಕುಗಳಿಗೆ ತಾಂತ್ರಿಕ ತಂಡವು ಭೇಟಿ ನೀಡಲು ಸಹಕಾರಿಯಾಗುತ್ತದೆ. ಬೆಳೆಗಳಲ್ಲಿ ಕೀಟ ಮತ್ತು ರೋಗಗಳ ಬಾಧೆಯನ್ನು ನಿಖರವಾಗಿ ಹಾಗೂ ಸಮಯೋಚಿತವಾಗಿ ಗುರುತಿಸುವ ಸಲುವಾಗಿ ರಾಜ್ಯ ಸರ್ಕಾರದ ಅನುದಾನ ಮೂಲಕ ರಾಯಚೂರು ಕೃಷಿ ವಿಶ್ವವಿದ್ಯಾಲಯ ಅಭಿವೃದ್ಧಿಪಡಿಸಿರುವ ಕೀಟ, ರೋಗಗಳ ಸಮರ್ಪಕ ನಿರ್ವಹಣೆ ಹಾಗೂ ರೈತರಿಗೆ ಸಲಹೆ ನೀಡಲು ಇ - ತಂತ್ರಾಂಶ (ಇ - ಸ್ಯಾಪ್) ಬಳಕೆಯ ಮೂಲಕ ನಿಯಮಿತವಾಗಿ ರೈತರ ತಾಲೂಕುಗಳಿಗೆ ಭೇಟಿ ನೀಡಲಾಗುವುದು.
ಸರ್ವೇಕ್ಷಣೆಯಲ್ಲಿ ಕೀಟ, ರೋಗ ಬಾಧೆ ಕಂಡು ಬಂದಲ್ಲಿ ತಕ್ಷಣವೇ ರೈತರಿಗೆ ಕೈಗೊಳ್ಳಬೇಕಾದ ಸಂಭವನೀಯ ನಿರ್ವಹಣಾ ಕ್ರಮಗಳ ಮಾಹಿತಿಯನ್ನು ರೈತರ ಮೊಬೈಲ್ಳಿಗೆ ಸಂದೇಶ ಅಥವಾ ಮುದ್ರಿತ ಚೀಟಿ ನೀಡುವ ಮೂಲಕ ಉತ್ಪಾದನಾ ವೆಚ್ಚ ಮತ್ತು ಬೆಳೆಹಾನಿಯನ್ನು ತಗ್ಗಿಸುವುದು ಯೋಜನೆಯ ಪ್ರಮುಖ ಉದ್ದೇಶವಾಗಿದೆ.
ರೈತರು ತಮ್ಮ ಮಟ್ಟದಲ್ಲಿ ರಸಗೊಬ್ಬರಗಳ ಕಲಬೆರಕೆಯನ್ನು ಕಡಿಮೆ ವೆಚ್ಚದಲ್ಲಿ ಕಂಡುಕೊಂಡು, ಗುಣಮಟ್ಟದ ರಸಗೊಬ್ಬರಗಳನ್ನು ಖರೀದಿಸಬಹುದಾಗಿದೆ. ಈ ದಿಸೆಯಲ್ಲಿ ರೈತರು ಸುಲಭ ಪರೀಕ್ಷೆಗಳಿಂದ ರಸಗೊಬ್ಬರಗಳು ಕಲಬೆರಕೆಯಾಗಿದೆಯೇ ಅಥವಾ ನಕಲಿ ಗೊಬ್ಬರವೇ ಎಂದು ತಿಳಿಯಲು ಸುಲಭ ಪರೀಕ್ಷೆಯ ಪ್ರಾತ್ಯಕ್ಷಿಕೆಗಳನ್ನು ರೈತರಿಗೆ ನೀಡಲಾಗುವುದು, ತದನಂತರ ರೈತರು ತಮ್ಮ ಹಂತದಲ್ಲಿಯೇ ರಸಗೊಬ್ಬರಗಳ ಗುಣಮಟ್ಟವನ್ನು ಪ್ರಾರಂಭಿಕವಾಗಿ ತಿಳಿದು ಖರೀದಿಸಬಹುದಾಗಿದೆ.
ಸಂಚಾರಿ ಕೃಷಿ ವಾಹನದ ಕಾರ್ಯನಿರ್ವಹಣೆ ಹೇಗೆ?:
155313 ಇದು ಕೃಷಿ ಸಂಜೀವಿನಿ ಟೋಲ್ ಫ್ರೀ ಸಹಾಯವಾಣಿಯಾಗಿದ್ದು, ಈ ಸಂಖ್ಯೆಗೆ ಯಾವುದಾದರೂ ಜಿಲ್ಲೆಯಿಂದ ಕರೆ ಮಾಡಿದಲ್ಲಿ ಟೋಲ್ ಫ್ರೀ ಸಂಖ್ಯೆಯಿಂದ ಕರೆ ಮಾಡಿದ ರೈತರಿರುವ ಜಿಲ್ಲೆಯ ಜಂಟಿ ಕೃಷಿ ನಿರ್ದೇಶಕರ ಕಚೇರಿಗೆ ಕರೆ ಹೋಗುತ್ತದೆ. ಆಗ ರೈತರು ತಮ್ಮ ಸಮಸ್ಯೆಯನ್ನು ತಿಳಿಸಿ ಪರಿಹಾರ ಪಡೆಯಬಹುದಾಗಿದೆ.