ಬೆಂಗಳೂರು : ರಾಜ್ಯದಲ್ಲಿ ಅನೇಕ ಗ್ರಾಮಗಳಿಗೆ ಶುದ್ಧ ಕುಡಿಯುವ ನೀರಿನ ಭಾಗ್ಯವಿಲ್ಲ. ಸರ್ಕಾರಿ ಶಾಲೆಗಳಲ್ಲಂತೂ ಇದು ದೂರದ ಮಾತು. ಕೊರೊನಾ ಭೀತಿಯಿಂದ ಶಾಲೆಗಳನ್ನು ತೆರೆಯಲು ಸರ್ಕಾರ ಹಿಂದೇಟು ಹಾಕುತ್ತಿದೆ. ಆದರೆ, ಶಾಲೆಗೆ ಹೋಗಲು ತುದಿಗಾಲಲ್ಲಿ ನಿಂತಿರುವ ಮಕ್ಕಳಿಗೆ, ಕುಡಿಯಲು ಶುದ್ಧ ನೀರಿನ ವ್ಯವಸ್ಥೆಯೇ ಇಲ್ಲದಂತಾಗಿದೆ.
ಸರ್ಕಾರಿ ಶಾಲೆಗಳಲ್ಲಿ ಮೂಲಸೌಲಭ್ಯದ ಕೊರತೆಯಿಂದ, ಪೋಷಕರು ಮಕ್ಕಳನ್ನು ಶಾಲೆಗೆ ಕಳುಹಿಸಲು ಹಿಂಜರಿಯುತ್ತಿದ್ದಾರೆ. ಕೇವಲ ಶಾಲೆಯಲ್ಲಿ ಬಿಸಿಯೂಟ ಕೊಟ್ಟರೆ ಸಾಲದು. ಅದರ ಜತೆ ಕುಡಿಯಲು ನೀರಿನ ವ್ಯವಸ್ಥೆ ಮಾಡಬೇಕು ಎನ್ನುವ ಬೇಡಿಕೆ ಸಹಜವಾಗಿದೆ.
ಕೋಟೆನಾಡು ಚಿತ್ರದುರ್ಗ ಜಿಲ್ಲೆಯಲ್ಲಿ ಒಟ್ಟು 2,512 ಸರ್ಕಾರಿ ಶಾಲೆಗಳಿವೆ. ಕೆಲ ಶಾಲೆಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯನ್ನು ಶಿಕ್ಷಣ ಇಲಾಖೆ ನೀಗಿಸಿದೆ. ಆದರೆ, ಶೇ. 50 ರಷ್ಟು ಶಾಲೆಗಳಲ್ಲಿ ಸಮಸ್ಯೆ ಇದ್ದು, ಮಕ್ಕಳು ನೀರಿಗಾಗಿ ಮನೆ ಮನೆಗೆ ಅಲೆಯುವ ಪರಿಸ್ಥಿತಿ ಇದೆ.
ಶಾಲೆಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯನ್ನು ಹೋಗಲಾಡಿಸಲು ಜಿಲ್ಲಾಡಳಿತ ಸಾಕಷ್ಟು ಪ್ರಯತ್ನ ಮಾಡುತ್ತಿದೆ. ಆದರೆ, ಯಾವುದೇ ಪ್ರಯೋಜನ ಆಗುತ್ತಿಲ್ಲ. ಕೆಲ ಶಾಲೆಗಳಲ್ಲಿ ಫಿಲ್ಟರ್ ಹಾಗೂ ಡ್ರಮ್ ವ್ಯವಸ್ಥೆಯಿದ್ದು, ಅನೇಕ ಶಾಲೆಗಳಲ್ಲಿ ಹೊರಗಡೆಯಿಂದ ನೀರು ತಂದು ಶಾಲೆಯ ಮಕ್ಕಳು ಕುಡಿಯುವ ಪರಿಸ್ಥಿತಿ ನಿರ್ಮಾಣ ಆಗಿದೆ.
ಕೊಪ್ಪಳ ಜಿಲ್ಲೆಯಲ್ಲಿ ಶೇ.90 ರಷ್ಟು ಸರ್ಕಾರಿ ಶಾಲೆಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳಿಲ್ಲ. ಶಾಲಾ ಆವರಣದಲ್ಲಿನ ಬೋರ್ವೆಲ್ ನೀರೇ ಮಕ್ಕಳಿಗೆ ಗತಿಯಾಗಿದೆ. ಜಿಲ್ಲೆಯ ಒಟ್ಟು 962 ಸರ್ಕಾರಿ ಪ್ರಾಥಮಿಕ ಶಾಲೆಗಳ ಪೈಕಿ, ಕೇವಲ 85 ಶಾಲೆಗಳಲ್ಲಿ ಮಾತ್ರ ಆರ್ಒ ಪ್ಲಾಂಟ್ ಅಳವಡಿಸಲಾಗಿದೆ. ಹಾಗೂ 162 ಸರ್ಕಾರಿ ಪ್ರೌಢ ಶಾಲೆಗಳ ಪೈಕಿ, ಕೇವಲ ಏಳು ಶಾಲೆಗಳಲ್ಲಿ ಮಾತ್ರ ಆರ್ಒ ಫಿಲ್ಟರ್ ಇದೆ.
ಶಾಲೆಗೆ ಬರುವ ಮಕ್ಕಳು ಹೆಚ್ಚಾಗಿ ಬೋರ್ವೆಲ್ ಅಥವಾ ಮನೆಯಿಂದ ಬಾಟಲಿಯಲ್ಲಿ ತಂದ ನೀರನ್ನು ಕುಡಿಯುತ್ತಾರೆ. ಮಧ್ಯಾಹ್ನದ ಬಿಸಿಯೂಟದ ಮಕ್ಕಳಿಗೆ ನೀರಿನ ಸಮಸ್ಯೆ ಜಾಸ್ತಿ ಕಾಡುತ್ತದೆ. ಇನ್ನು ವಿಜಯಪುರ ಜಿಲ್ಲೆಯಲ್ಲಿ ಒಟ್ಟು 3,399 ಸರ್ಕಾರಿ ಪ್ರಾಥಮಿಕ ಶಾಲೆಗಳಿವೆ. ಜಿಲ್ಲೆಯ ಬಹುತೇಕ ಸರ್ಕಾರಿ ಶಾಲೆಗಳಲ್ಲಿ, ಕುಡಿಯುವ ನೀರಿನ ಸಮಸ್ಯೆಗಳಿಲ್ಲ. ಬೊರ್‌ವೆಲ್, ಬಾವಿಯಿಂದ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ. ಆದರೆ ನಗರದ ಶಾಲೆಗಳನ್ನು ಹೊರತು ಪಡಿಸಿದರೆ, ಬಹುತೇಕ ಸರ್ಕಾರಿ ಶಾಲೆಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳಿಲ್ಲ.
ಮಕ್ಕಳ ಆರೋಗ್ಯ ಕಾಪಾಡುವುದು ಕೇವಲ ಪೋಷಕರ ಜವಾಬ್ದಾರಿಯಲ್ಲ. ಶಿಕ್ಷಕರು ಶಿಕ್ಷಣದ ಜೊತೆಗೆ ಮಕ್ಕಳ ಆರೋಗ್ಯ ಕಾಪಾಡುವ ವಾತಾವರಣ ನಿರ್ಮಿಸಬೇಕು. ಸದ್ಯ ಶಾಲೆಗಳ ಆರಂಭಕ್ಕೆ ಚಿಂತನೆ ನಡೆದಿದ್ದು, ಮಕ್ಕಳ ಸುರಕ್ಷತೆಗಾಗಿ ಸ್ಯಾನಿಟೈಜರ್ ಮತ್ತು ಮಾಸ್ಕ್ ಇದ್ದರೇ ಸಾಲದು ಮಕ್ಕಳಿಗೆ ಶುದ್ದ ಕುಡಿಯುವ ನೀರಿನ ಸೌಲಭ್ಯ ನೀಡುವ ಕೆಲಸವಾಗಬೇಕಾಗಿದೆ. ಈ ಕುರಿತು ಸರ್ಕಾರ ಹೆಚ್ಚಿನ ನಿಗಾ ವಹಿಸಬೇಕಿದೆ.