ಬೆಂಗಳೂರು: ಒಮ್ಮೆ ಬಳಸಿದ ನೀರನ್ನು ಪುನರ್ ಬಳಕೆ ಮಾಡುವತ್ತ ಗಮನಹರಿಸಬೇಕಾದ ಹೊತ್ತಿದು. ಅದು ಕೂಡ ಎಲ್ಲ ನಗರಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ಲಭ್ಯವಾಗದ ದಿನಗಳು ದೂರವಿಲ್ಲ. ಯಾಕಂದ್ರೆ ರಾಜ್ಯದ ಬಹುತೇಕ ನಗರಗಳಲ್ಲಿ ನೀರಿನ ಅಭಾವವಿದ್ದು, ಬೇಸಿಗೆಯಲ್ಲಿ ಜನರು ಪರದಾಡುವ ಸ್ಥಿತಿ ನಿರ್ಮಾಣವಾಗುತ್ತದೆ.
ಬೆಂಗಳೂರಿನ ಅನೇಕ ಕಡೆಗಳಲ್ಲಿ ನೀರಿನ ಅಭಾವವಿದ್ದು, ಅದನ್ನು ನೀಗಿಸಲು ಜಲಮಂಡಳಿಯು ಹೊಸ ಹೊಸ ಯೋಜನೆಗಳನ್ನು ಕೈಗೆತ್ತಿಕೊಂಡಿದೆ. ಒಟ್ಟು 203 ಕೋಟಿ ರೂ. ವೆಚ್ಚದಲ್ಲಿ ನಗರದ ವಿವಿಧೆಡೆ ಹೊಸ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ. ಹಾಗೂ 4.63 ಕೋಟಿ ವೆಚ್ಚದಲ್ಲಿ ಬುಲ್ ಟೆಂಪಲ್ ರಸ್ತೆಯ ನೆಲಮಟ್ಟದ ಜಲಾಶಯ ಪುನಃ ನಿರ್ಮಾಣ ಮತ್ತು ಪುನಶ್ಚೇಚನ ಕಾಮಗಾರಿ ನಡೆಯುತ್ತಿದೆ. ಜೊತೆಗೆ 2.01 ಕೋಟಿ ವೆಚ್ಚದಲ್ಲಿ ಸುಮ್ಮನಹಳ್ಳಿ ಜಂಕ್ಷನ್ನಿಂದ ಒ.ಎಚ್.ಟಿ ವಿಜಯನಗರದವರೆಗೆ 600 ಮಿ.ಮೀ ವ್ಯಾಸದ ಮೃದು ಉಕ್ಕಿನ ಕೊಳವೆ ಬದಲಾಯಿಸುವ ಕಾಮಗಾರಿ ನಡೆಯುತ್ತಿದೆ.
ಹಾಗೂ ಒಎಮ್ಬಿಆರ್ ಜಲಾಗಾರದಿಂದ ಐಒಸಿಎಲ್ ಜಂಕ್ಷನ್ವರೆಗೆ 600 ಮಿ.ಮೀ ವ್ಯಾಸದ ಮೃದು ಉಕ್ಕಿನ ಕೊಳವೆ ಬದಲಾಯಿಸುವ ಕಾಮಗಾರಿ 2.99 ಕೋಟಿ ರೂ ವೆಚ್ಚದಲ್ಲಿ ನಡೆಯುತ್ತಿದೆ. ಮತ್ತು ಸಿಜೆಎಫ್ ಮಲ್ಲೇಶ್ವರಂನಲ್ಲಿ ಹೊಸದಾದ ಟೂ ಟೈರ್ ಆರ್.ಸಿಸಿ ಜಲಾಗಾರ ನಿರ್ಮಾಣ ಕಾರ್ಯ 26.5 ಕೋಟಿ ರೂ ವೆಚ್ಚದಲ್ಲಿ ನಿರ್ಮಾಣ ಮಾಡಲಾಗುತ್ತಿದೆ.
ಇನ್ನು ವಿಶ್ವಬ್ಯಾಂಕ್ ನೆರವಿನಿಂದ ಬೆಳಗಾವಿ ನಗರದಲ್ಲಿ ನಿರಂತರ ಕುಡಿಯುವ ನೀರು ಜಾರಿಗೆ ಬರುತ್ತಿದ್ದು, ಇದರ ಅನುಷ್ಠಾನದ ಬಳಿಕ ಕುಂದಾನಗರಿಗರ ದಾಹ ತಂಗಲಿದೆ. 804 ಕೋಟಿ ರೂ. ವೆಚ್ಚದಲ್ಲಿ ನಗರದಲ್ಲಿ ನಿರಂತರ ಕುಡಿಯುವ ನೀರು ಯೋಜನೆ ಜಾರಿಗೊಳಿಸಲಾಗುತ್ತಿದೆ. ಬೆಳಗಾವಿ ಮಹಾನಗರ ಪಾಲಿಕೆ ಹಾಗೂ ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ಸಂಸ್ಥೆ ಈ ಯೋಜನೆಯನ್ನು ಜಾರಿಗೊಳಿಸಲಿವೆ. ಹಿಡಕಲ್ ಜಲಾಶಯ ಹಾಗೂ ರಕ್ಕಸಕೊಪ್ಪ ಡ್ಯಾಂ ಮೂಲಕ ನಗರಕ್ಕೆ ನೀರು ಸರಬರಾಜು ಮಾಡಲಾಗುತ್ತದೆ. ಸದ್ಯ ಪ್ರಾಯೋಗಿಕವಾಗಿ ಜಾರಿಯಾಗಿರುವ ನಿರಂತರ ಕುಡಿಯುವ ನೀರು ಯೋಜನೆಗೂ ಈ ಎರಡೂ ಜಲಾಶಯಗಳ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ.
ಇನ್ನು ಹುಬ್ಬಳ್ಳಿ ಧಾರವಾಡ ಮಹಾನಗರದಲ್ಲಿ ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸಲು, ಮಹಾನಗರ ಪಾಲಿಕೆಯು ಎಲ್ಲಾ ವಾರ್ಡ್ಗಳಿಗೂ 24x7 ಕುಡಿಯುವ ನೀರಿನ ಸರಬರಾಜು ಮಾಡಲು ಮುಂದಾಗಿದೆ. ಈಗಾಗಲೇ 26 ವಾರ್ಡ್ಗಳಿಗೆ 24x7 ಕುಡಿಯುವ ನೀರಿನ ಸರಬರಾಜು ಮಾಡಿದ್ದು, ಇನ್ನೂ ಕೆಲವು ದಿನಗಳಲ್ಲಿ 41 ವಾರ್ಡ್ಗಳಿಗೆ ಕುಡಿಯುವ ನೀರಿನ ಸರಬರಾಜು ಮಾಡಲು ಮಹಾನಗರ ಪಾಲಿಕೆ ಮುಂದಾಗುತ್ತಿದೆ. 763 ಕೋಟಿ ಮೊತ್ತದ ಹೊಸ ಯೋಜನೆಯನ್ನು ಇದೀಗ ಕೈಗೆತ್ತಿಕೊಳ್ಳಲಾಗಿದ್ದು, 550 ಕೋಟಿಯನ್ನು ವಿಶ್ವಬ್ಯಾಂಕ್ ನೀಡುತ್ತಿದೆ. ಹಾಗೂ 213 ಕೋಟಿ ಹಣವನ್ನು ಮಹಾನಗರ ಪಾಲಿಕೆ ವ್ಯಯಿಸುವ ಮೂಲಕ, ಹುಬ್ಬಳ್ಳಿ-ಧಾರವಾಡ ಮಹಾನಗರದ ಜನರಿಗೆ ದಿನದ ಇಪ್ಪತ್ನಾಲ್ಕು ಗಂಟೆಗಳ ಕಾಲ ಶುದ್ಧ ಕುಡಿಯುವ ನೀರು ದೊರೆಯಲಿದೆ.
ಇನ್ನು ನಗರಗಳಲ್ಲಿ ಕುಡಿಯುವ ನೀರು ಪೋಲಾಗುವುದು ಹೆಚ್ಚಾಗಿ ಕಂಡು ಬರುತ್ತಿದೆ. ಇದನ್ನು ತಡೆಯಬೇಕಾದರೆ ನೀರು ಸರಬರಾಜು ವ್ಯವಸ್ಥೆಗೆ ದೊಡ್ಡ ಕಾಯಕಲ್ಪವನ್ನೇ ನೀಡಬೇಕು. ಎಲ್ಲಕ್ಕಿಂತ ಮಿಗಿಲಾಗಿ ನೀರಿನ ಮರುಬಳಕೆ ಕುರಿತು ನಾವಿನ್ನೂ ತಲೆ ಕೆಡಿಸಿಕೊಂಡಿಲ್ಲ. ಗಡ್ಡಕ್ಕೆ ಬೆಂಕಿ ಹೊತ್ತಿಕೊಂಡಾಗ ಬಾವಿ ತೋಡುವುದಕ್ಕಿಂತ ಮುಂಚಿತವಾಗಿಯೇ ನಾವು ಕಾರ್ಯೋನ್ಮುಖರಾಗಬೇಕು.