ಬೆಂಗಳೂರು: ಮದ್ಯ ಸೇವಿಸಿ ಕಾರು ಚಾಲನೆ ಮಾಡಿ ದ್ವಿಚಕ್ರ ವಾಹನ ಸವಾರನಿಗೆ ಗುದ್ದಿದ ಪರಿಣಾಮ ದ್ವಿಚಕ್ರ ವಾಹನ ಸವಾರ ಸಾವನ್ನಪ್ಪಿದ್ದಾನೆ. ಆರೋಪಿಯನ್ನು ಬಂಧಿಸಿ ಆರೋಪಿ ವಿರುದ್ಧ 304ರ ಅಡಿ ಪ್ರಕರಣ ದಾಖಲಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ರಾತ್ರಿ ರಿಚ್ಮಂಡ್ ವೃತ್ತದ ಸಮೀಪ ಸಿಗ್ನಲ್ ಬಳಿ ರೋಹಿತ್ ಕೇಡಿಯಾ ಎಂಬಾತ ಮದ್ಯ ಸೇವಿಸಿ ವಾಹನ ಚಲಾಯಿಸಿದ್ದು, ಸಿಗ್ನಲ್ ಬಳಿ ನಿಂತಿದ್ದ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದ್ದಾನೆ. ಪರಿಣಾಮ ಕಿರಣ್ (23) ಮೃತಪಟ್ಟಿದ್ದಾನೆ. ಕಿರಣ್ ಇನ್ಸೂರೆನ್ಸ್ ಕಂಪನಿಯಲ್ಲಿ ಸಹಾಯಕನಾಗಿ ಕೆಲಸ ಮಾಡುತ್ತಿದ್ದ ಎಂದು ತಿಳಿದು ಬಂದಿದೆ. ಹಾಗೆಯೇ ಈ ಸರಣಿ ಅಪಘಾತದಲ್ಲಿ ಮತ್ತೊಂದು ಕಾರಿನ ಚಾಲಕ ಶ್ರೀಕಾಂತ್ ಎಂಬಾತನಿಗೆ ಗಾಯವಾಗಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ವಿಲ್ಸನ್ ಗಾರ್ಡನ್ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಆರೋಪಿಯನ್ನು ಬಂಧಿಸಿ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೊಪ್ಪಿಸಲಾಗಿದೆ. ಹಾಗೆಯೇ ಅಪಘಾತದ ವೇಳೆ ಆರೋಪಿ ಮದ್ಯಪಾನ ಮಾಡಿರುವುದು ಬಯಲಾಗಿದೆ. ಅಷ್ಟು ಮಾತ್ರವಲ್ಲದೆ ಆರೋಪಿಯ ಡ್ರಗ್ಸ್ ಸೇವನೆ ಬಗ್ಗೆ ಗುಮಾನಿ ಇದ್ದು, ಆರೋಪಿಯ ರಕ್ತದ ಮಾದರಿ ಸಂಗ್ರಹಿಸಿ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ರವಾನೆ ಮಾಡಿದ್ದಾರೆ.