ಮಂಗಳೂರು/ಬೆಂಗಳೂರು: ಧರ್ಮಸ್ಥಳ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಅವರನ್ನು ರಾಜ್ಯಸಭೆಗೆ ನಾಮ ನಿರ್ದೇಶನ ಮಾಡಲಾಗಿದೆ. ಈ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಟ್ವೀಟ್ ಮಾಡಿ ಅಭಿನಂದನೆ ಸಲ್ಲಿಸಿದ್ದಾರೆ. ಈ ಟಿವಿ ಭಾರತ ಜೊತೆಗೆ ದೂರವಾಣಿಯಲ್ಲಿ ಪ್ರತಿಕ್ರಿಯಿಸಿದ ಡಾ. ವೀರೇಂದ್ರ ಹೆಗ್ಗಡೆ ಅವರು ನಮ್ಮ ಸಮಾಜ ಸೇವೆಗೆ ಕೊಟ್ಟ ಗೌರವ ಇದು. ನಾನು ಇದನ್ನು ಸ್ವೀಕರಿಸುತ್ತೇನೆ ಮತ್ತು ನಮ್ಮಿಂದ ಏನೆಲ್ಲಾ ಆಗುತ್ತೋ ಅದೆಲ್ಲ ಸೇವೆಯನ್ನು ಮಾಡಲು ಪ್ರಯತ್ನಿಸುತ್ತೇನೆ ಎಂದು ಹೇಳಿದ್ದಾರೆ.
ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದ ನಾಲ್ವರನ್ನು ರಾಜ್ಯಸಭೆಗೆ ನಾಮ ನಿರ್ದೇಶನ ಮಾಡಲಾಗಿದೆ. ಕ್ರೀಡಾ ಕ್ಷೇತ್ರದಲ್ಲಿನ ಸಾಧನೆ ಪರಿಗಣಿಸಿ ಪಿ.ಟಿ ಉಷಾ, ಸಂಗೀತ ಕ್ಷೇತ್ರದಲ್ಲಿನ ಸೇವೆ ಪರಿಗಣಿಸಿ ಸಂಗೀತ ಸಂಯೋಜಕ ಇಳಿಯರಾಜ, ಸಿನಿಮಾ ರಂಗದಲ್ಲಿನ ಸೇವೆ ಪರಿಗಣಿಸಿ ನಿರ್ದೇಶಕ ಕೆ ವಿ ವಿಜಯೇಂದ್ರ ಪ್ರಸಾದ್ ಜೊತೆ ರಾಜ್ಯದಿಂದ ವೀರೇಂದ್ರ ಹಗ್ಗಡೆ ಅವರನ್ನು ನಾಮ ನಿರ್ದೇಶನ ಮಾಡಲಾಗಿದೆ.
ಧರ್ಮಸ್ಥಳದ ಧರ್ಮಾಧಿಕಾರಿಯಾಗಿ ಐದು ದಶಕಗಳ ಕಾಲ ಮಾಡಿರುವ ಧಾರ್ಮಿಕ ಸೇವೆ, ಗ್ರಾಮೀಣಾಭಿವೃದ್ಧಿಗೆ ನೀಡಿರುವ ಕೊಡುಗೆ, ಸ್ವಯಂ ಉದ್ಯೋಗ ಸೃಷ್ಟಿಗೆ ರುಡ್ ಸೆಟ್ ಮೂಲಕ ಸೇವೆ, ಸ್ವಸಹಾಯ ಗುಂಪು ರಚಿಸಿ ಮಹಿಳಾ ಸಬಲೀಕರಣದಂತಹ ಕಾರ್ಯವನ್ನು ಪರಿಗಣಿಸಿ ವೀರೇಂದ್ರ ಹೆಗ್ಗಡೆ ಅವರನ್ನು ರಾಜ್ಯಸಭೆಗೆ ನಾಮ ನಿರ್ದೇಶನ ಮಾಡಲಾಗಿದೆ.
ಕೇರಳ, ತಮಿಳುನಾಡು,ಆಂಧ್ರಪ್ರದೇಶ ಮತ್ತು ಕರ್ನಾಟಕ ರಾಜ್ಯದಿಂದ ತಲಾ ಒಬ್ಬೊಬ್ಬರನ್ನು ರಾಜ್ಯಸಭೆಗೆ ನಾಮನಿರ್ದೇಶನ ಮಾಡಲಾಗಿದೆ. ದಕ್ಷಿಣ ಭಾರತದ ರಾಜ್ಯಗಳ ಮೇಲೆ ಕಣ್ಣಿಟ್ಟಿರುವ ಬಿಜೆಪಿ ಇದೀಗ ರಾಜ್ಯಸಭೆಗೆ ನಾಮ ನಿರ್ದೇಶನ ಮಾಡುವ ವೇಳೆ ದಕ್ಷಿಣ ಭಾರತ ರಾಜ್ಯಗಳಿಗೆ ಆದ್ಯತೆ ನೀಡಿದೆ.
ಅನುಭವ ಸಂಸತ್ತಿನ ಕಲಾಪಗಳ ಸತ್ವ ಹೆಚ್ಚಿಸಲಿದೆ: ರಾಜ್ಯಸಭೆಗೆ ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ನಾಮ ನಿರ್ದೇಶನಗೊಂಡಿರುವುದಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹರ್ಷ ವ್ಯಕ್ತ ಪಡಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿರುವ ಸಿಎಂ ಬಸವರಾಜ ಬೊಮ್ಮಾಯಿ, ಡಾ. ಹೆಗ್ಗಡೆಯವರನ್ನು ಅಭಿನಂದಿಸಿ, ಆರೋಗ್ಯ, ಶಿಕ್ಷಣ, ಸ್ತ್ರೀಶಕ್ತಿ, ಗ್ರಾಮೀಣಾಭಿವೃದ್ಧಿ ಹೀಗೆ ವಿವಿಧ ಕ್ಷೇತ್ರಗಳ ಹಾಗೂ ಆಯಾಮಗಳಲ್ಲಿ ಜನಜೀವನದಲ್ಲಿ ಸಕಾರಾತ್ಮಕ ಬೆಳವಣಿಗೆಗೆ ಶ್ರಮಿಸುತ್ತಿರುವ ಶ್ರೀ ಹೆಗ್ಗಡೆಯವರ ಅನುಭವ ಸಂಸತ್ತಿನ ಕಲಾಪಗಳ ಸತ್ವ ಹೆಚ್ಚಿಸಲಿದೆ ಎಂದಿದ್ದಾರೆ.
ಹೆಗ್ಗಡೆಯವರ ಜೊತೆ ರಾಜ್ಯಸಭೆಗೆ ನಾಮ ನಿರ್ದೇಶನಗೊಂಡ ಒಲಿಂಪಿಯನ್ ಅಥ್ಲೀಟ್ ಆಗಿದ್ದ ಪಿ. ಟಿ. ಉಷಾ, ಖ್ಯಾತ ಸಂಗೀತ ನಿರ್ದೇಶಕ ಇಳಯರಾಜ ಹಾಗೂ ಖ್ಯಾತ ಚಿತ್ರ ನಿರ್ದೇಶಕ, ಚಿತ್ರ ಸಾಹಿತಿ ಕೆ.ವಿ. ವಿಜಯೇಂದ್ರ ಪ್ರಸಾದ್ ಅವರನ್ನೂ ಮುಖ್ಯಮಂತ್ರಿಗಳು ಅಭಿನಂದಿಸಿದ್ದಾರೆ.
ಹೆಗ್ಗಡೆ ನಾಮ ನಿರ್ದೇಶನ ರಾಜ್ಯಕ್ಕೆ ಸಂದ ಗೌರವ: ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಅವರು ರಾಜ್ಯಸಭೆಗೆ ನಾಮ ನಿರ್ದೇಶನಗೊಂಡಿರುವುದು ರಾಜ್ಯಕ್ಕೆ ಸಂದ ಅತಿದೊಡ್ಡ ಗೌರವ ಎಂದು ಕನ್ನಡ - ಸಂಸ್ಕ್ರತಿ ಮತ್ತು ಇಂಧನ ಸಚಿವ ವಿ.ಸುನೀಲ್ ಕುಮಾರ್ ಅಭಿಪ್ರಾಯಪಟ್ಟಿದ್ದಾರೆ.
ರಾಜ್ಯವನ್ನು ಧಾರ್ಮಿಕ ಕ್ಷೇತ್ರದಲ್ಲಿ ಮುನ್ನಡೆಸುವುದರ ಜತೆಗೆ ಶೈಕ್ಷಣಿಕ ಹಾಗೂ ಸಾಮಾಜಿಕ ಕ್ಷೇತ್ರದಲ್ಲೂ ವೀರೇಂದ್ರ ಹೆಗ್ಗಡೆಯವರು ಅವಿರತ ಶ್ರಮಿಸಿದ್ದಾರೆ. ಅವರ ಕನಸಿನ ಫಲವಾಗಿ ರಾಜ್ಯಾದ್ಯಂತ ಬೆಳೆದಿರುವ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ ಗ್ರಾಮೀಣ ಭಾಗದ ಜನರ ನಂದಾ ದೀಪವಾಗಿದೆ. ಸುಮಾರು 50 ಲಕ್ಷದಷ್ಟು ಜನರು ಈ ಸಂಸ್ಥೆಯ ಸದಸ್ಯರಾಗಿರುವುದು ಸಣ್ಣ ಮಾತಲ್ಲ.
ಅದೇ ರೀತಿ ವಿದ್ಯಾಕ್ಷೇತ್ರದಲ್ಲೂ ಹೆಗ್ಗಡೆ ಯವರ ಸಾಧನೆ ಅನನ್ಯ. ಈ ಎಲ್ಲ ಕಾರಣಕ್ಕಾಗಿ ಕೇಂದ್ರ ಸರಕಾರ ಅವರನ್ನು ರಾಜ್ಯಸಭೆಗೆ ನಾಮ ನಿರ್ದೇಶನ ಮಾಡಿರುವುದು ಅತ್ಯಂತ ಅಭಿನಂದನೀಯ ಎಂದು ಅವರು ವ್ಯಾಖ್ಯಾನಿಸಿದ್ದಾರೆ.
ರಾಜ್ಯಸಭೆಗೆ ನಾಮ ನಿರ್ದೇಶನಗೊಂಡ ವೀರೇಂದ್ರ ಹೆಗ್ಗಡೆಯವರಿಗೆ ಹಾಗೂ ಅವರಂಥ ಶ್ರೇಷ್ಠ ವ್ಯಕ್ತಿತ್ವವನ್ನು ಪರಿಗಣಿಸಿದ ಪ್ರಧಾನಿ ನರೇಂದ್ರ ಮೋದಿಯವರಿಗೆ ಸಮಸ್ತ ಕನ್ನಡಿಗರ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ. ಸಾಮಾಜಿಕ ಹಾಗೂ ಧಾರ್ಮಿಕ ಕ್ಷೇತ್ರದಲ್ಲಿ ಶ್ರೀ ಹೆಗ್ಗಡೆಯವರ ಮಾರ್ಗದರ್ಶನ ಸದಾ ನಮಗಿರಲಿ ಎಂದು ಅವರು ಆಶಿಸಿದ್ದಾರೆ.
ಬಿಜೆಪಿ ನಾಯಕ ಅರವಿಂದ ಲಿಂಬಾವಳಿ ಟ್ವೀಟ್ ಮಾಡಿದ್ದು,ನಮ್ಮ ಧರ್ಮಸ್ಥಳದ ಧರ್ಮಾಧಿಕಾರಿಯಾದ ಶ್ರೀ ಡಿ ವೀರೇಂದ್ರ ಹೆಗ್ಗಡೆ ಅವರನ್ನು ರಾಜ್ಯಸಭೆಗೆ ನೇಮಿಸಿರುವುದು ಬಹಳ ಹೆಮ್ಮೆ ಮತ್ತು ಸಂತಸದ ಸಂಗತಿ ಎಂದು ತಿಳಿಸಿ ಹೆಗ್ಗಡೆ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.
ಇದನ್ನೂ ಓದಿ: ವೀರೇಂದ್ರ ಹೆಗ್ಗಡೆ,ಇಳಯರಾಜ, ಪಿಟಿ ಉಷಾ ಸೇರಿ ನಾಲ್ವರು ದಿಗ್ಗಜರು ರಾಜ್ಯಸಭೆಗೆ ನಾಮನಿರ್ದೇಶನ.. ಮೋದಿ ಅಭಿನಂದನೆ