ಬೆಂಗಳೂರು: ವಿಜ್ಞಾನಿ ಡಾ. ಸುಧೀಂದ್ರ ಹಾಲ್ದೊಡ್ಡೇರಿ ಅವರ ಆಶಯದಂತೆ ಕುಟುಂಬಸ್ಥರು ದೇಹವನ್ನು ಬೆಂಗಳೂರು ಮೆಡಿಕಲ್ ಕಾಲೇಜಿಗೆ ದಾನ ಮಾಡಲು ಮುಂದಾಗಿದ್ದಾರೆ.
ಬೆಳೆದು ಬಂದ ಹಾದಿ..
ಹೆಚ್ಎಎಲ್ ಸಂಸ್ಥೆಯ ಹಿರಿಯ ನಿವೃತ್ತ ಇಂಜಿನಿಯರ್ ಸುಧೀಂದ್ರ ಹಾಲ್ದೊಡ್ಡೇರಿ ಡಿಸೆಂಬರ್ 3, 1960ರಂದು ಜನಿಸಿದರು. ವಿಜ್ಞಾನ ವಿಷಯದ ಕುರಿತು ಸುಲಲಿತವಾಗಿ ಜನಸಾಮಾನ್ಯರಿಗೆ ಅರ್ಥವಾಗುವ ರೀತಿಯಲ್ಲಿ ಹೇಳಬಲ್ಲ ಚತುರತೆ ಅವರಲ್ಲಿತ್ತು. ಡಿಆರ್ಡಿಒನಲ್ಲಿ ವಿಜ್ಞಾನಿಯಾಗಿ ಕೆಲಸ ನಿರ್ವಹಿಸಿದ್ದ ಹಾಲ್ದೊಡ್ಡೇರಿ, ಹನ್ನೆರಡು ದಿನಗಳ ಅವಿರತ ಜೀವನ್ಮರಣದ ಹೋರಾಟದಲ್ಲಿ ಗೆಲುವು ಸಾಧಿಸಲಾಗಲಿಲ್ಲ. 61 ವರ್ಷ ವಯಸ್ಸಿನ ಸುಧೀಂದ್ರ ಅವರು ತಾಯಿ, ಇಬ್ಬರು ಹೆಣ್ಣು ಮಕ್ಕಳು, ಓರ್ವ ಅಳಿಯನನ್ನು ಅಗಲಿದ್ದಾರೆ.
ಹಾಲ್ದೊಡ್ಡೇರಿ ಅಂಕಣಕಾರರೂ ಆಗಿದ್ದು ಬರವಣಿಗೆಯ ಮೂಲಕವೇ ಎಲ್ಲರನ್ನೂ ವಿಜ್ಞಾನದ ಕೌತುಕದತ್ತ ಸೆಳೆದು ಬಿಡುತ್ತಿದ್ದರು. ಅವರ ಚಿಕ್ಕಮಗಳಿಗೂ ಬರವಣಿಗೆ ಪ್ರೀತಿ ಹೆಚ್ಚಿಸಿದ್ದು, ಜಯನಗರದ ಹುಡುಗಿ ಎಂಬ ಅಂಕಿತ ನಾಮದ ಮೇಘನ ಸುಧೀಂದ್ರ ಎಂಬ ಪುಸ್ತಕವನ್ನು ಬರೆದಿದ್ದಾರೆ. ಸಂಯುಕ್ತ ಕರ್ನಾಟಕ ದಿನ ಪತ್ರಿಕೆಯಲ್ಲಿ 20 ವರ್ಷಗಳ ಕಾಲ ಕೆಲಸ ನಿರ್ವಹಿಸಿದರು. ಇತರೆ ಪತ್ರಿಕೆಗಳಲ್ಲಿ ಅಂಕಣಗಳನ್ನು ಬರೆಯುವ ಮೂಲಕ ವಿಜ್ಞಾನದ ಅಚ್ಚುಮೆಚ್ಚಿನ ಮೇಷ್ಟ್ರು ಕೂಡಾ ಆಗಿದ್ದರು.
ಇದನ್ನೂ ಓದಿ: ಪ್ರಶಸ್ತಿ ಘೋಷಿಸಿದ ದಿನವೇ ಹಾಲ್ದೊಡ್ಡೇರಿ ನಿಧನ: ಅಭಿನಂದನೆ ಬದಲು ಸಂತಾಪ ಸೂಚಿಸಿದ ಬಿಜೆಪಿ ನಾಯಕರು
ಹೊಲ್ದೊಡ್ಡೇರಿ ಅವರು ಜೈನ್ ಏರೋಸ್ಪೇಸ್ ಎಂಜಿನಿಯರಿಂಗ್ ವಿಭಾಗ ಮತ್ತು ಅಲೈಯನ್ಸ್ ವಿಶ್ವವಿದ್ಯಾಲಯದಲ್ಲಿ ಪ್ರೊಫೆಸರ್ ಆಗಿಯೂ ನಂತರ ವಿಭಾಗದ ಮುಖ್ಯಸ್ಥರಾಗಿಯೂ ಕೆಲಸ ನಿರ್ವಹಿಸಿದ್ದರು. ಡಿಆರ್ಡಿಒದಲ್ಲಿ ಹಲವು ಜವಾಬ್ದಾರಿಗಳನ್ನು ನಿರ್ವಹಿಸಿ, ಹೆಚ್‌ಎಎಲ್‌ನ ಯೂನಿಟ್ನಲ್ಲಿ 22 ವರ್ಷಗಳ ಅವಧಿವರೆಗೆ ಸೇವೆ ಸಲ್ಲಿಸಿದ್ದಾರೆ. ಸುಮಾರು 13 ವರ್ಷಗಳ ಕಾಲ ಹೆಚ್ಎಲ್ ಎಂಜಿನ್ ವಿಭಾಗದಲ್ಲಿ ಜಾಗ್ವಾರ್, ಕಿರಣ್ ವಿಮಾನ ಮತ್ತು ಚೀತಾ ಹೆಲಿಕಾಪ್ಟರ್ಗಳಲ್ಲಿ ಇಂಧನ ವ್ಯವಸ್ಥೆ ಮತ್ತು ಎಂಜಿನ್ ಸಂಯೋಜನೆಯಲ್ಲಿ ಕೆಲಸ ಮಾಡಿದರು. ವಾಯುಪಡೆಯಿಂದ ರಚಿಸಲಾದ ತಜ್ಞರ ಸಮಿತಿಯಲ್ಲೂ ಸದಸ್ಯರಾಗಿದ್ದರು. ಈ ಎಲ್ಲಾ ಸೇವೆಯನ್ನು ಪರಿಗಣಿಸಿ, ಕರ್ನಾಟಕ ಸರ್ಕಾರದ ವಿಷನ್ ಗ್ರೂಪ್ ಆನ್ ಸೈನ್ಸ್ & ಟೆಕ್ನಾಲಜಿ (ವಿಜಿಎಸ್ಟಿ) ಯಿಂದ ಅತ್ಯುತ್ತಮ ವಿಜ್ಞಾನ ಸಂವಹನಕಾರ ಪ್ರಶಸ್ತಿಯೂ ಲಭಿಸಿತ್ತು.