ಬೆಂಗಳೂರು: ಡಾ.ರಾಜ್ ಕುಮಾರ್ ಅವರು ಒಂದು ದಂತಕಥೆ. ಕರ್ನಾಟಕದ ಕಣಕಣದಲ್ಲಿ ಅವರು ಜೀವಂತವಾಗಿದ್ದಾರೆ. ಅವರ ಜೀವನಮಾನದಲ್ಲಿ ನಾವೂ ಕೂಡ ಇದ್ದೆವು ಅನ್ನೋದೇ ನಮಗೆ ಹೆಮ್ಮೆಯ ವಿಚಾರ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಶನಿವಾರ ಡಾ. ರಾಜ್ ಕುಮಾರ್ ಸಿವಿಲ್ ಸರ್ವಿಸ್ ಅಕಾಡೆಮಿ ವತಿಯಿಂದ ಜ್ಞಾನಜ್ಯೋತಿ ಸಭಾಂಗಣದಲ್ಲಿ ಆಯೋಜಿಸಿದ್ದ ಕೆಪಿಎಸ್ಸಿ 2017-18 ನೇ ಸಾಲಿನ ಗೆಜೆಟೆಡ್ ಪ್ರೊಬೆಷನರಿ ಪರೀಕ್ಷೆಯಲ್ಲಿ ಯಶಸ್ವಿಯಾದ ಅಭ್ಯರ್ಥಿಗಳಿಗೆ ಅಭಿನಂದಿಸಿ ಮಾತನಾಡಿದ ಸಿಎಂ, ರಾಜ್ ಕುಮಾರ್ ಕುಟುಂಬದ ಸದಸ್ಯರು ಅತ್ಯಂತ ಪ್ರಾಮಾಣಿಕವಾಗಿ ಅವರ ಹೆಸರಿಗೆ ಹಿರಿಮೆ ತರುವ ರೀತಿಯಲ್ಲಿ ಈ ಅಕಾಡೆಮಿ ನಡೆಸುತ್ತಿದ್ದಾರೆ. ಈ ಎಲ್ಲ ಕೆಲಸಕ್ಕೆ ರಾಘವೇಂದ್ರ ರಾಜ್ ಕುಮಾರ್ ಅವರ ಅಂತಃಸತ್ವ ಮತ್ತು ಎಂದೂ ಮರೆಯಲಾಗದ ನಮ್ಮ ಅಪ್ಪು ಪ್ರಮುಖ ಕಾರಣ ಎಂದರು.
ಸಾಧನೆಯ ಹಿಂದೆ ಬಹಳ ದೊಡ್ಡ ಶ್ರಮ ಇದೆ. ಸ್ಪರ್ಧೆಯ ಬಗ್ಗೆ ಚಿಂತೆ ಮಾಡಬಾರದು. ಅಂಥವರು ಒಂದು ಹೆಜ್ಜೆ ಹಿಂದೆ ಹೋಗುತ್ತಾರೆ. ಗುರಿ ಹಾಗೂ ದಾರಿಯ ಬಗ್ಗೆ ಲಕ್ಷ್ಯ ಕೊಟ್ಟರೆ ನಿಮ್ಮ ಗುರಿ ನೀವು ಮುಟ್ಟುತ್ತೀರಿ. ಇದಕ್ಕೆ ನಿಮಗೆ ಉತ್ತಮ ಉದಾಹರಣೆ ಎಂದರೆ ಡಾ.ರಾಜ್ ಕುಮಾರ್. ಅವರ ಜೀವನದಲ್ಲಿ ಅಡ್ಡ ದಾರಿ ಇರಲಿಲ್ಲ. ಕಠಿಣ ಪರಿಶ್ರಮ ಪಟ್ಟು ಅವರು ಮೇರು ನಟರಾದರು. ಸಾಧನೆ ಮಾಡಿರುವ ನಿಮ್ಮ ಕಣ್ಣುಗಳಲ್ಲಿ ಭರವಸೆಯ ಮಿಂಚಿದೆ ಹಾಗೂ ಕಷ್ಟ ಪಟ್ಟು ಸಾಧನೆ ಮಾಡಿದ ನೆಮ್ಮದಿ ಕಾಣಿಸುತ್ತಿದೆ ಎಂದರು.
ಉತ್ತಮ ಆಡಳಿತಗಾರರು ಮುಖ್ಯ: ಯಶಸ್ಸು ಬಂದಾಗ ನಮ್ರತೆ ಹಾಗೂ ವಿನಯತೆಯಿಂದ ನಡೆದುಕೊಂಡರೆ ಅದು ಮುಂದಿನ ದಾರಿ ತೋರಿಸುತ್ತದೆ. ಅಹಂ ಅಥವಾ ಗರ್ವ ಬಂದರೆ ಅದು ಯಶಸ್ಸಿನ ಅಂತ್ಯ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಅಧಿಕಾರ ಎಂದರೆ ಸುಲಭವಲ್ಲ. ಅಧಿಕಾರ ನಡೆಸುವಾಗ ಸ್ಥಿತಪ್ರಜ್ಞೆ ಮತ್ತು ಸಮಯ ಪ್ರಜ್ಞೆಯನ್ನು ಎಂದಿಗೂ ಮರೆಯಬಾರದು. ಜತೆಗೆ ಈ ಸ್ಥಾನಕ್ಕೆ ಬರಲು ಸಹಾಯ ಮಾಡಿದ ಯಾರನ್ನೂ ಮರೆಯಬಾರದು ಎಂದು ಸಲಹೆ ನೀಡಿದರು.
ಪ್ರಜಾಪ್ರಭುತ್ವದಲ್ಲಿ ಚುನಾಯಿತ ಪ್ರತಿನಿಧಿಗಳು ಹಾಗೂ ಅಧಿಕಾರಿ ವರ್ಗ ಒಟ್ಟಿಗೆ ಕೆಲಸ ಮಾಡಬೇಕು. ಕೆಲವೊಮ್ಮೆ ಇದರಿಂದ ಸಂಘರ್ಷವೂ ಆಗುತ್ತದೆ. ಆದರೆ ಸ್ಪಷ್ಟತೆ ಇದ್ದರೆ ಸಮಸ್ಯೆ ಬೇಗ ಬಗೆಹರಿಯುತ್ತದೆ ಎಂದು ಆಯ್ಕೆಯಾದ ಪ್ರೊಬೆಷನರ್ ಅಧಿಕಾರಿಗಳಿಗೆ ಕಿವಿಮಾತು ಹೇಳಿದರು.
ಸೌಜನ್ಯ-ಸಂಯಮದಿಂದ ನಡೆದುಕೊಳ್ಳಿ: ಸರ್ಕಾರದ ನಿರ್ಧಾರಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಲು ಉತ್ತಮ ಆಡಳಿತಗಾರರು ಮುಖ್ಯ. ಅಧಿಕಾರಿಗಳು ಸರಿಯಾದ ಸಂದರ್ಭದಲ್ಲಿ ಜನಪರ ನಿರ್ಣಯಗಳನ್ನು ತೆಗೆದುಕೊಂಡಾಗ ಮಾತ್ರ ಒಳ್ಳೆಯ ಹೆಸರು ಬರುತ್ತದೆ. ಬಡವರಿಗೆ ಸಹಾಯ ಮಾಡಲು ಇದು ಒಳ್ಳೆಯ ಅವಕಾಶ. ಸಮಾಜದ ಕಟ್ಟಕಡೆಯ ಮನುಷ್ಯನ ಕಣ್ಣೀರನ್ನು ನೆನಪು ಮಾಡಿಕೊಂಡು ನಿರ್ಣಯ ಮಾಡಿ. ಆಗ ಈ ರಾಜ್ಯ ಬಹಳಷ್ಟು ಪ್ರಗತಿ ಹೊಂದಲು ಸಾಧ್ಯವಾಗುತ್ತದೆ. ಅಧಿಕಾರ ಇಲ್ಲದಿರುವ ಜನ ನಿಮ್ಮ ಕಚೇರಿ ಬಾಗಿಲಿಗೆ ಬಂದಾಗ ಸೌಜನ್ಯ-ಸಂಯಮದಿಂದ ನಡೆದುಕೊಳ್ಳಿ. ಸಮಸ್ಯೆಯಿಂದ ವಿಮುಖನಾಗದೇ ಅದನ್ನು ಎದುರಿಸಿ. ಅದು ಉತ್ತಮ ಆಡಳಿತಗಾರನ ಲಕ್ಷಣ ಎಂದರು.
ಸರ್ಕಾರದ ನಿರ್ಧಾರಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಲು ಉತ್ತಮ ಆಡಳಿತಗಾರರು ಬಹಳ ಮುಖ್ಯ. ಅಂತಹ ಉತ್ತಮ ಆಡಳಿತಗಾರರನ್ನು ಈ ಅಕಾಡೆಮಿ ಕೊಡುತ್ತಿದೆ. ಅವರಿಗೆ ನನ್ನ ಕೃತಜ್ಞತೆಗಳು ಎಂದರು. ಈ ಸಂದರ್ಭದಲ್ಲಿ ರಾಘವೇಂದ್ರ ರಾಜ್ ಕುಮಾರ್, ಅಶ್ವಿನಿ ಪುನೀತ್ ರಾಜ್ಕುಮಾರ್, ನಿವೃತ್ತ ಐಎಎಸ್ ಅಧಿಕಾರಿಗಳಾದ ಡಾ.ಶ್ರೀನಿವಾಸನ್, ಎಸ್.ವಿ ರಂಗನಾಥ್, ಐ.ಎಂ ವಿಠಲ್ ಮೂರ್ತಿ, ಪ್ರಸ್ತುತ ಐಎಎಸ್ ಅಧಿಕಾರಿ ಮಂಜುನಾಥ್ ಪ್ರಸಾದ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಇದನ್ನೂ ಓದಿ: ರಾಜ್ಕುಮಾರ್ ಸಿವಿಲ್ ಸರ್ವಿಸ್ ಅಕಾಡೆಮಿಯಲ್ಲಿ ಅಭ್ಯಸಿಸಿ UPSCಯಲ್ಲಿ ಪಾಸ್ : ಮೆಚ್ಚುಗೆ ವ್ಯಕ್ತಪಡಿಸಿದ ನಟ ರಾಘಣ್ಣ