ಬೆಂಗಳೂರು : ಜಿಹೆಚ್ಎಂಸಿ ಚುನಾವಣಾ ಫಲಿತಾಂಶವು ಪ್ರಧಾನಿ ನರೇಂದ್ರ ಮೋದಿ ನಾಯಕತ್ವ ಹಾಗೂ ಅಭಿವೃದ್ಧಿ ರಾಜಕಾರಣವನ್ನು ಜನ ಮೆಚ್ಚಿದ್ದಾರೆಂಬುದನ್ನು ತೋರಿಸಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ ಕೆ ಸುಧಾಕರ್ ತಿಳಿಸಿದ್ದಾರೆ.
ಗ್ರೇಟರ್ ಹೈದರಾಬಾದ್ ಮುನ್ಸಿಪಲ್ ಕಾರ್ಪೊರೇಶನ್ ಚುನಾವಣೆಯಲ್ಲಿ ಬಿಜೆಪಿಯ ಸಹ ಉಸ್ತುವಾರಿಯಾಗಿದ್ದ ಕೆ. ಸುಧಾಕರ್, ಚುನಾವಣಾ ಫಲಿತಾಂಶದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಟಿಆರ್ಎಸ್ ಮತ್ತು ಎಂಐಎಂ ಪಕ್ಷಗಳ ತುಷ್ಟೀಕರಣದ ರಾಜಕಾರಣವನ್ನು ಜನರು ತಿರಸ್ಕರಿಸಿರುವುದನ್ನು ಫಲಿತಾಂಶ ಬಿಂಬಿಸಿದೆ. ಈ ಚುನಾವಣಾ ಫಲಿತಾಂಶದಲ್ಲಿ, ಟಿಆರ್ಎಸ್ ಪಕ್ಷದ ಅಧಿಕಾರದ ದಿನಗಳು ಕೊನೆಗೊಳ್ಳುವ ಹಂತಕ್ಕೆ ಬಂದಿದೆ ಎಂಬ ಜನರ ಭಾವನೆ ಸ್ಪಷ್ಟವಾಗಿ ವ್ಯಕ್ತವಾಗುತ್ತಿದೆ.
ಟಿಆರ್ಎಸ್ ಹಾಗೂ ಎಂಐಎಂ ಪಕ್ಷಗಳು ಬಿಜೆಪಿಯನ್ನು ತಡೆಯುವ ಪ್ರಯತ್ನ ಮಾಡಿದ್ದರೂ ಕೂಡ ಬಿಜೆಪಿ ಎತ್ತರಕ್ಕೆ ಏರಿದೆ. 2016ರಲ್ಲಿ ಕೇವಲ ಕೆಲ ಸೀಟುಗಳನ್ನು ಹೊಂದಿದ್ದ ಬಿಜೆಪಿ ಈಗ ಪ್ರಬಲ, ಪರ್ಯಾಯ ರಾಜಕೀಯ ಶಕ್ತಿಯಾಗಿ ಹೊರಹೊಮ್ಮಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಈ ಸುದ್ದಿಯನ್ನೂ ಓದಿ: ಹೈದರಾಬಾದ್ ಪಾಲಿಕೆ ಫಲಿತಾಂಶ: ಟಿಆರ್ಎಸ್ಗೆ ಹೆಚ್ಚು ಸ್ಥಾನ.. ಬಿಜೆಪಿ ಮಹತ್ಸಾಧನೆ
ಕೇಂದ್ರ ಗೃಹ ಸಚಿವ ಅಮಿತ್ ಶಾ, ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಭೂಪೇಂದ್ರ ಯಾದವ್ ಸೇರಿದಂತೆ ರಾಷ್ಟ್ರಮಟ್ಟದ ನಾಯಕರು ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡಿದ್ದರಿಂದ ಹೈದರಾಬಾದ್ನಲ್ಲಿ ರಾಜ್ಯ ಬಿಜೆಪಿ ಘಟಕ ಹಾಗೂ ಇಡೀ ತಂಡದ ಉತ್ಸಾಹ ಮುಗಿಲು ಮುಟ್ಟಿತ್ತು. ಬಿಜೆಪಿ ಈ ಹೋರಾಟವನ್ನು ಇನ್ನಷ್ಟು ಮುಂದಕ್ಕೆ ಕೊಂಡೊಯ್ಯಲಿದ್ದು, ಭ್ರಷ್ಟ ಟಿಆರ್ಎಸ್-ಎಂಐಎಂ ಆಡಳಿತ ಅಂತ್ಯವಾಗುವವರೆಗೂ ಹೋರಾಟ ನಡೆಯಲಿದೆ ಎಂದರು.
ಈ ಸುದ್ದಿಯನ್ನೂ ಓದಿ: ನಿಜಾಮ ಸಂಸ್ಕೃತಿ ಅಂತ್ಯಗೊಳಿಸುವುದಕ್ಕೆ ಹೈದರಾಬಾದ್ ಜನ ಬೆಂಬಲಿಸಿದ್ದಾರೆ: ಸಂಸದ ತೇಜಸ್ವಿ ಸೂರ್ಯ
ಜನಾಭಿಪ್ರಾಯ ತಮ್ಮ ವಿರುದ್ಧವಿದೆ ಎಂದು ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಹಾಗೂ ಅವರ ಪುತ್ರ ಕೆ ಟಿ ರಾಮರಾವ್ ಅವರಿಗೆ ಮೊದಲಿನಿಂದಲೂ ಗೊತ್ತಿತ್ತು. ಆತುರದ ಚುನಾವಣೆ, ಮಧ್ಯರಾತ್ರಿಯ ಆದೇಶಗಳು ಕೆಸಿಆರ್ ಪರಿವಾರದಲ್ಲಿ ಸೃಷ್ಟಿಯಾಗಿರುವ ಹತಾಶೆಯ ಲಕ್ಷಣಗಳು.
ತೆಲಂಗಾಣದ ಜನರು ಸಮರ್ಥವಾದ ಪರ್ಯಾಯ ನಾಯಕತ್ವವನ್ನು ಬಯಸುತ್ತಿದ್ದಾರೆ. ಈಗ ಟಿಐಎನ್ಎ (ದೆರ್ ಈಸ್ ನೋ ಆಲ್ಟರ್ ನೇಟಿವ್) ಬದಲು ಬಿಐಟಿಎ (ಬಿಜೆಪಿ ಈಸ್ ದಿ ಆಲ್ಟರ್‍ನೇಟಿವ್) ಆಗಿದೆ. ಟಿಆರ್ಎಸ್ ಹಾಗೂ ಎಂಐಎಂಗೆ ಅಧಿಕಾರ ಕಳೆದುಕೊಳ್ಳುವ ಕ್ಷಣಗಣನೆ ಆರಂಭವಾಗಿದೆ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.