ಬೆಂಗಳೂರು : ಎತ್ತಿನಹೊಳೆ ಯೋಜನೆಗೆ ಸಂಬಂಧಿಸಿದಂತೆ ಸಣ್ಣ ನೀರಾವರಿ ಸಚಿವ ಜೆ ಸಿ ಮಾಧುಸ್ವಾಮಿ ಹಾಗೂ ಮಾಜಿ ಸಚಿವ ಡಾ. ಜಿ ಪರಮೇಶ್ವರ್ ನಡುವೆ ಮಾತಿನ ಚಕಮಕಿ ನಡೆದಿರುವ ಘಟನೆ ಇಂದು ವಿಧಾನಸಭೆಯಲ್ಲಿ ನಡೆಯಿತು. ಇಬ್ಬರೂ ನಾಯಕರು ಏರು ಧ್ವನಿಯಲ್ಲಿ ಮಾತನಾಡಿದರು. ಯೋಜನೆಯನ್ನೇ ರಿಜೆಕ್ಟ್ ಮಾಡ್ತೇವೆ ಅಂದರೆ ಹೇಗೆ? ಎಂದು ಪರಮೇಶ್ವರ್ ಪ್ರಶ್ನಿಸಿದರು.
12,900 ಕೋಟಿ ರೂ.ಗಳಲ್ಲಿ ಯೋಜನೆ ಮುಗಿಸಬಹುದು. ಆದರೆ, ಈ ಯೋಜನೆಗೆ 23 ಸಾವಿರ ಕೋಟಿ ರೂ. ಹೆಚ್ಚುವರಿ ಏಕೆ?. ನಿಮಗೆ ಇಚ್ಛಾಶಕ್ತಿಯಿದ್ದರೆ ಯೋಜನೆ ಮಾಡಬಹುದು ಎಂದು ಸಚಿವ ಮಾಧುಸ್ವಾಮಿ ವಿರುದ್ಧ ಗರಂ ಆದರು.
ಯೋಜನೆಗೆ ನಾವು ಅವಕಾಶ ಕೊಟ್ಟಿದ್ದೇವೆ. ಹಣವಿಲ್ಲದಿದ್ದರೂ ರೈತರನ್ನು ನಾವು ಒಪ್ಪಿಸಿದ್ದೇವೆ. ಯೋಜನೆ ಕಾಮಗಾರಿಗೆ ಅನುವು ಮಾಡಿದ್ದೇವೆ. ಆದರೆ, ಕೊರಟಗೆರೆಯಲ್ಲಿ ಸಮಸ್ಯೆ ಶುರುವಾಗಿದೆ. ಹಾಗಾಗಿ, ಯೋಜನೆಗೆ ತೊಡಕಾಗುತ್ತಿದೆ ಎಂದು ಪರಮೇಶ್ವರ್ ಹೇಳಿಕೆಗೆ ಮಾಧುಸ್ವಾಮಿ ತಿರುಗೇಟು ನೀಡಿದರು. ಆಗ ಇಬ್ಬರ ನಡುವೆ ಮಾತಿನ ಚಕಮಕಿ ಉಂಟಾಯಿತು.
ಆಗ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಧ್ಯಪ್ರವೇಶಿಸಿ, ಖಂಡಿತವಾಗಿ ಸೀವೇಜ್ ನೀರು ಕೊಡಬಹುದು. ಯೋಜನೆಯ ಬಗ್ಗೆ ಮಾಹಿತಿ ಪಡೆಯುತ್ತೇನೆ. ಕೋಲಾರ, ಚಿಕ್ಕಬಳ್ಳಾಪುರ ಜನರಿಗೆ ನೀರು ಕೊಡುತ್ತೇವೆ. ನಾನೂರು ಎಂಎಲ್ಡಿ ನೀರು ಸಿಗುವಂತೆ ಮಾಡುತ್ತೇವೆ ಎಂದು ಭರವಸೆ ನೀಡಿದರು.
ಇದಕ್ಕೂ ಮುನ್ನ ಮಾಜಿ ಸಚಿವ ಡಾ. ಜಿ.ಪರಮೇಶ್ವರ್ ಅವರು ಎತ್ತಿನಹೊಳೆ ಯೋಜನೆ ವಿಚಾರ ಪ್ರಸ್ತಾಪ ಮಾಡಿದರು. ಕಳೆದ 9 ವರ್ಷಗಳಿಂದ ಯೋಜನೆ ಕಾರ್ಯಗತವಾಗಿಲ್ಲ. ಜಮೀನು ಭೂ ಸ್ವಾಧೀನ ಸಾಧ್ಯವಾಗ್ತಿಲ್ಲವೆಂಬ ಉತ್ತರವನ್ನ ಸರ್ಕಾರ ಕೊಟ್ಟಿದೆ.
ಭೂಸ್ವಾಧೀನದ ಹೆಸರು ಹೇಳಿ ಯೋಜನೆಯ ದಾರಿತಪ್ಪಿಸುವುದು ಸರಿಯಲ್ಲ. ಕೊರಟಗೆರೆ, ದೊಡ್ಡಬಳ್ಳಾಪುರದಲ್ಲಿ ಒಂದೊಂದು ಬೆಲೆ ಹೇಳುತ್ತಿರಾ?. ದೊಡ್ಡಬಳ್ಳಾಪುರದ ಭೂಮಿಗೆ ಬೇರೆ ವ್ಯಾಲ್ಯು ಮಾಡ್ತೀರಾ? ಕೊರಟಗೆರೆಯಲ್ಲಿ ಭೂಮಿಗೆ ಇನ್ನೊಂದು ಬೆಲೆ ಹೇಳುತ್ತಿರಾ? ಹೀಗಾಗಿ, ಯೋಜನೆ ಕಾರ್ಯಗತವಾಗದೆ ನಿಂತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ನಮ್ಮ ಅವಧಿಯಲ್ಲಿ ನಾನೇ ಈ ಯೋಜನೆಗೆ ಒತ್ತು ನೀಡಿದ್ದೆ. ಟೆಂಡರ್ ಆಗಿದೆ, ವರ್ಕ್ ಆರ್ಡರ್ ಆಗಿದೆ. ಹೀಗಿರುವಾಗ ಯೋಜನೆ ಬದಲಾವಣೆ ಏಕೆ? ಎಂದು ಆಕ್ರೋಶ ವ್ಯಕ್ತಪಡಿಸಿದರು. ಪರಮೇಶ್ವರ್ ಅವರ ಬೆಂಬಲಕ್ಕೆ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಬಂದರು. ಪೈಪ್ ಲೈನ್ ಆಗಿದೆ. ಯೋಜನೆ ನಡೆದಿದೆ.
ಹತ್ತಿರಕ್ಕೆ ಬಂದಾಗ ಯೋಜನೆ ನಿಂತಿದೆ. ಕೇವಲ 400 ಕೋಟಿ ನೀಡಲು ಸಬೂಬು ಯಾಕೆ?. ರೈತರ ಭೂಸ್ವಾಧೀನಕ್ಕೆ ಹಣ ನೀಡುವುದಕ್ಕೆ ತಡೆ ಮಾಡಿರುವುದು ಏಕೆ?. ಎಲ್ಲವೂ ಆಗಿದೆ. ಮೊದಲು ಅದನ್ನು ಸರಿಪಡಿಸಿ ಎಂದು ಹೇಳಿದರು.
ನಂತರ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಮಾತನಾಡಿದರು. ಮೊದಲಿಗೆ 12,900 ಕೋಟಿ ರೂ. ಯೋಜನೆ ಮೀಸಲಾಗಿತ್ತು. ಎರಡು ಕಡೆ ಬೆಲೆಯ ದರದಲ್ಲಿ ಗೊಂದಲವಿದೆ. ಕೊರಟಗೆರೆ, ದೊಡ್ಡಬಳ್ಳಾಪುರದಲ್ಲಿ ಬೇರೆ ಬೇರೆ ಇದೆ. ಕೊರಟಗೆರೆ ರೈತರು ಡಿಫರೆನ್ಸ್ ವ್ಯಾಲ್ಯು ಪ್ರಶ್ನಿಸುತ್ತಿದ್ದಾರೆ.
ಪರಮೇಶ್ವರ್ ಅವರು ಕೂಡ ಸಭೆಯನ್ನು ನಡೆಸಿದ್ದಾರೆ. ನಾವು ಪ್ರಾಮಾಣಿಕ ಪ್ರಯತ್ನ ಮಾಡ್ತಿದ್ದೇವೆ. ಲಿಫ್ಟ್, ಸ್ಟೋರೇಜ್ ಎಲ್ಲವೂ ನಡೆಯುತ್ತಿದೆ. 39 ಎಕರೆ ಜಮೀನು ಹೆಚ್ಚುವರಿ ಬೇಕಿದೆ. ಇದರ ಬಗ್ಗೆ ಡಿಸಿ, ಸ್ವಾಧೀನಾಧಿಕಾರಿಗೆ ಹೇಳಿ ಬಂದಿದ್ದೆವು. ಇವತ್ತು ಇದರ ಬಗ್ಗೆ ಮಧ್ಯಾಹ್ನ ಚರ್ಚೆ ಮಾಡ್ತೇವೆ. ಸಂಬಂಧಪಟ್ಟವರ ಜೊತೆ ಮಾತನಾಡುತ್ತೇವೆ ಎಂದು ಹೇಳಿದರು.
ಮೊದಲ ಹಂತದ ಕಾಮಗಾರಿ ಮುಗಿದಿದೆ. ಟ್ರಯಲ್ ರನ್ ಮಾಡುವುದಕ್ಕೆ ಪ್ರಯತ್ನ ನಡೆಸಿದ್ದೇವೆ. ಇದನ್ನು ಮುಗಿಸುವ ಕೆಲಸ ಮಾಡುತ್ತೇವೆ. 12,900 ಕೋಟಿ ರೂ.ನಿಂದ 23 ಸಾವಿರ ಕೋಟಿ ರೂ.ಗೆ ಯೋಜನೆ ಹೋಗಿದೆ. ಇದಕ್ಕೆ ನಾವು, ಹಿಂದಿದ್ದ ನೀವು ಕಾರಣ ಎಂದು ತಿಳಿಸಿದರು.
ಓದಿ: ಮೈಸೂರು ಲ್ಯಾಂಪ್ಸ್ ಜಾಗ ಟ್ರಸ್ಟ್ಗೆ ನೋಂದಣಿ: ಅರ್ಧ ಗಂಟೆ ಚರ್ಚೆಗೆ ರೂಲಿಂಗ್ ನೀಡಿದ ಸಭಾಪತಿ ಹೊರಟ್ಟಿ