ಬೆಂಗಳೂರು: ಎಲ್ಲದಕ್ಕೂ ಕಾಲವಿದೆ. ಜನರೇ ಎಲ್ಲವನ್ನೂ ತೀರ್ಮಾನ ಮಾಡಲಿದ್ದಾರೆ. ಇಂತಹ ಮಾತುಗಳನ್ನು ಆಡುವುದು ದೊಡ್ಡ ಸಾಧನೆ ಏನಲ್ಲ. ಹಾಗಾಗಿ ಅದರ ಬಗ್ಗೆ ಕಡಿಮೆ ಮಾತನಾಡುತ್ತೇನೆ. ಇದಕ್ಕೆಲ್ಲ ಉತ್ತರ ಕೊಡಲು ಸಾಧ್ಯವಿಲ್ಲ ಸರ್ಕಾರದ ಕೆಲಸಗಳು ಅಭಿವೃದ್ಧಿ ಕಾರ್ಯಗಳು ಸಮಸ್ಯೆಗಳ ಬಗ್ಗೆ ಉತ್ತರ ಕೊಡಬಹುದು. ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪಕ್ಷದ ನಾಯಕರು ಮತ್ತು ಸಚಿವರ ವಿರುದ್ಧ ಬಳಸುತ್ತಿರುವ ಪದಗಳ ಬಗ್ಗೆ ಹೈಕಮಾಂಡ್ಗೆ ಮಾಹಿತಿ ಇದ್ದು, ಸೂಕ್ತ ಸಮಯದಲ್ಲಿ ಸೂಕ್ತ ಕ್ರಮ ಕೈಗೊಳ್ಳಲಿದೆ ಎಂದು ಸಚಿವ ಡಾ. ಸಿ.ಎನ್ ಅಶ್ವತ್ಥನಾರಾಯಣ ಸ್ಪಷ್ಟಪಡಿಸಿದ್ದಾರೆ.
ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸಚಿವ ಮುರುಗೇಶ್ ನಿರಾಣಿ ವಿರುದ್ಧ ಯತ್ನಾಳ್ ಹೇಳಿಕೆ ನೀಡುತ್ತಿದ್ದರೂ ಪಕ್ಷ ಕ್ರಮ ಕೈಗೊಳ್ಳದಿರುವ ಕುರಿತ ಪ್ರಶ್ನೆಗೆ ಉತ್ತರಿಸಿದರು. ನಮ್ಮ ಪಕ್ಷದಲ್ಲಿ ಪಕ್ಷವೇ ಮುಖ್ಯ. ಪಕ್ಷಕ್ಕಿಂತ ಮೇಲೆ ಯಾರೂ ಇಲ್ಲ. ಸಾರ್ವಜನಿಕ ಜೀವನದಲ್ಲಿ ಎಲ್ಲರ ಬಗ್ಗೆ ಎಲ್ಲವೂ ಜನತೆಯ ಅಡಿಯಲ್ಲಿಯೇ ಪರಾಮರ್ಶೆಗೊಳ್ಳಲಿದೆ. ಅವರವರ ಅಭಿಪ್ರಾಯಗಳನ್ನು ಅವರವರು ವ್ಯಕ್ತಪಡಿಸುತ್ತಾರೆ. ಒಬ್ಬೊಬ್ಬೊರದ್ದು ಒಂದೊಂದು ರೀತಿಯ ಕಾರ್ಯ ಶೈಲಿ ಇರಲಿದೆ. ಪ್ರತಿಯೊಬ್ಬರಿಗೂ ಅವರದ್ದೇ ಆದ ವ್ಯಕ್ತಿತ್ವ ಇರಲಿದೆ. ಎಲ್ಲರಿಗೂ ಒಂದೇ ವ್ಯಕ್ತಿತ್ವ ಇರಲು ಸಾಧ್ಯವಿಲ್ಲ. ಎಲ್ಲವೂ ಪ್ರಶ್ನಾತೀತವಾಗಿರಲ್ಲ, ಯಾರು ಬೇಕಾದರೂ ಪ್ರಶ್ನೆ ಕೇಳಬಹುದು ಎಂದರು.
ಈ ವಿಚಾರದಲ್ಲಿ ಶಿಸ್ತು ಮೀರುವಂತಿಲ್ಲ. ನಮ್ಮ ಪಕ್ಷ ಶಿಸ್ತಿನ ಪಕ್ಷ, ಇದರಲ್ಲಿ ಶಿಸ್ತು ಉಲ್ಲಂಘಿಸಿದರೆ ಕ್ರಮ ತೆಗೆದುಕೊಳ್ಳುವುದರಲ್ಲಿ ಎರಡನೇ ಮಾತಿಲ್ಲ. ನಮ್ಮ ಪಕ್ಷದಲ್ಲಿ ಶಿಸ್ತನ್ನು ಉಲ್ಲಂಘಿಸಿದವರಿಗೆ ಏನಾಗಲಿದೆ ಎಂದು ಇತಿಹಾಸ ನೋಡಿದರೆ ಗೊತ್ತಾಗುತ್ತದೆ. ಹಾಗಾಗಿ ಯಾರ ಪರವಾಗಿ ನಾನು ವಕಾಲತ್ತು ಹಾಕುವುದಿಲ್ಲ, ವಾದವನ್ನು ಮಾಡುವುದಿಲ್ಲ, ಪ್ರಕೃತಿ ನಿಯಮ ಎಲ್ಲರಿಗೂ ಅನ್ವಯವಾಗಲಿದೆ. ನಮಗೂ ಅನ್ವಯವಾಗಲಿದೆ ಇತರರಿಗೂ ಅನ್ವಯವಾಗಲಿದೆ. ಪ್ರಕೃತಿಯನ್ನು ಮೀರಿ ಯಾರು ಹೋಗಲು ಸಾಧ್ಯವಿಲ್ಲ ಎಂದು ಹೇಳಿದರು.
ಬಿಜೆಪಿಯಲ್ಲಿ ಪಕ್ಷವೇ ಎಲ್ಲಾ, ಪಕ್ಷಕ್ಕಿಂತ ಮೇಲೆ ಯಾರು ಹೋಗಲು ಸಾಧ್ಯವಿಲ್ಲ. ಪಕ್ಷದ ಶಿಸ್ತನ್ನು ಮೀರಿದವರು ಅದರದ್ದೇ ಆದ ಪರಿಸ್ಥಿತಿಯನ್ನು ಎದುರಿಸಲಿದ್ದಾರೆ. ಈಗಾಗಲೇ ಪಕ್ಷ ಅಂಥವರಿಗೆ ಜಾಗವನ್ನು ತೋರಿಸಿದೆ. ಯತ್ನಾಳ್ ಕೂಡ ಈ ವಿಚಾರದಲ್ಲಿ ಪರಿಣಾಮ ಎದುರಿಸಲಿದ್ದಾರೆ. ನಮ್ಮ ಪಕ್ಷದಲ್ಲಿ ಪಕ್ಷದ ವಿಚಾರ ಮೀರಿ ಯಾರು ಹೋಗಲಿದ್ದಾರೋ ಅವರು ಕ್ರಮ ಎದುರಿಸಲು ಸಿದ್ಧವಾಗಬೇಕು. ನಮ್ಮಲ್ಲಿ ಪಕ್ಷದ ಚೌಕಟ್ಟಿನಲ್ಲಿ ಮಾತ್ರ ನಡೆಯಬೇಕು. ಮನಸ್ಸಿಗೆ ಬಂದಂತೆ ನಡೆಯಲು ಸಾಧ್ಯವಿಲ್ಲ. ಟಿಕೆಟ್ ನೀಡುವಾಗ ಎಲ್ಲವನ್ನೂ ಪರಿಗಣಿಸಲಾಗುತ್ತದೆ ಎಂದು ಹೇಳಿದರು.
ನಾ ನಾಯಕಿ ಕಾರ್ಯಕ್ರಮದ ಬಗ್ಗೆ ಟೀಕೆ: ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಬೆಂಗಳೂರಿನಲ್ಲಿ ನಡೆಸುತ್ತಿರುವುದು ನಾ ನಾಯಕಿ ಕಾರ್ಯಕ್ರಮ ಅಲ್ಲ. ಇಡೀ ದೇಶದಲ್ಲಿ ಕಾಂಗ್ರೆಸ್ ಅಪ್ರಸ್ತುತ ಪಕ್ಷ. ಅವರು ಏನೇ ಮಾಡಿದರೂ ಉತ್ತರ ಪ್ರದೇಶ ರೀತಿಯ ಫಲಿತಾಂಶವೇ ಅವರಿಗೆ ಸಿಗಲಿದೆ. ಉತ್ತರ ಪ್ರದೇಶದ ಚುನಾವಣೆ ವೇಳೆ ಪ್ರಿಯಾಂಕಾ ಗಾಂಧಿ ರಾಜ್ಯ ಪ್ರವಾಸ ನಡೆಸಿ ಅವಿರತ ಪ್ರಯತ್ನ ಮಾಡಿದರೂ ಏನು ಪ್ರತಿಫಲ ತಂದುಕೊಂಡಿದ್ದಾರೆ ಎಂದು ಎಲ್ಲರಿಗೂ ಗೊತ್ತಿದೆ ಎಂದು ಅಶ್ವತ್ಥನಾರಾಯಣ್ ಟೀಕಿಸಿದ್ದಾರೆ.
ಉತ್ತರ ಪ್ರದೇಶದಲ್ಲಿ ಅವರು ಸಿಂಗಲ್ ಡಿಜಿಟ್ಗೂ ಬರಲಿಲ್ಲ. ಅವರು ಇಲ್ಲಿ ಬಂದು ಏನು ಮಾಡುತ್ತಾರೆ, ಅವರು ಕೂಡ ಇಲ್ಲಿರುವ ನಮ್ಮ ಸ್ನೇಹಿತರ ಜೊತೆ ಸೇರಿಕೊಳ್ಳಲಿದ್ದಾರೆ ಅಷ್ಟೆ. ಇಡೀ ದೇಶದಲ್ಲಿ ಎಲ್ಲಾ ಕಡೆ ಕಾಂಗ್ರೆಸ್ ಸೋಲುತ್ತಿದೆ. ಸಂಪೂರ್ಣವಾಗಿ ಕಾಂಗ್ರೆಸ್ ಅಪ್ರಸ್ತುತ ಪಕ್ಷವಾಗಿದೆ. ಜನ ಯಾವ ರೀತಿಯಿಂದಲೂ ಅವರನ್ನು ಎದುರು ನೋಡುತ್ತಿಲ್ಲ. ಅವರಿಗೆ ಸ್ಪಷ್ಟತೆ ಇಲ್ಲ, ದೇಶ ಮೊದಲು, ದೇಶದ ಶ್ರೇಯೋಭಿವೃದ್ಧಿ ಮೊದಲು ಎನ್ನುವುದು ಅವರಿಗೆ ಗೊತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು.
ಕೋವಿಡ್ ಲಸಿಕೆ ಕೊಟ್ಟರೆ, ಲಸಿಕೆ ತೆಗೆದುಕೊಳ್ಳಬೇಡಿ ಎಂದು ಅಭಿಯಾನ ಮಾಡಿದರು. ಕೋವಿಡ್ನಿಂದ ಜನ ಸಮಸ್ಯೆಗೆ ಸಿಲುಕಿದ್ದರೆ ಇವರು ಲಸಿಕೆ ಪಡೆಯಬೇಡಿ, ಲಸಿಕೆ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದು ಅಪ ಪ್ರಚಾರ ಮಾಡಿದ್ದರು. ಇವರಿಂದ ದೇಶದ ಜನತೆ ಏನು ನಿರೀಕ್ಷಿಸಬಹುದು ಎಂದು ಪ್ರಶ್ನಿಸಿದರು.
ಭಾರತ್ ತೋಡೋ ಜೊತೆಗೆ ಕೈಜೋಡಿಸಿಕೊಂಡು ಭಾರತ್ ಜೋಡೋ ಕಾರ್ಯಕ್ರಮ ಮಾಡಲು ಹೊರಟಿರುವ ಇವರದು ನಾ ನಾಯಕಿಯಲ್ಲ, ನಾನು ನಾಲಾಯಕರು ಕಾರ್ಯಕ್ರಮ ಇದು. ಹಾಗಾಗಿ ಇಂತಹ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ವಾದ್ರ ಭಾಗವಹಿಸುತ್ತಿದ್ದಾರೆ. ಇವರು ಏನು ಮಾಡಿದರೂ ಯಾವುದೇ ಪ್ರಯೋಜನ ಇಲ್ಲ. ಉತ್ತರ ಪ್ರದೇಶದಲ್ಲಿ ಇವರನ್ನು ಯಾವ ರೀತಿ ಜನ ಆಶೀರ್ವಾದ ಮಾಡಿದ್ದಾರೋ ಇಲ್ಲಿಯೂ ಅದೇ ರೀತಿ ಜನ ಕಾಂಗ್ರೆಸ್ ಅನ್ನು ತಿರಸ್ಕಾರ ಮಾಡಲಿದ್ದಾರೆ ಎಂದರು.
ಇದನ್ನೂ ಓದಿ: 'ನಾ ನಾಯಕಿ' ಸಮಾವೇಶ: ಬೆಂಗಳೂರಿಗೆ ಆಗಮಿಸಿದ ಪ್ರಿಯಾಂಕಾ ಗಾಂಧಿ