ನೆಲಮಂಗಲ: ಎರಡೂವರೆ ತಿಂಗಳ ಗರ್ಭಿಣಿಗೆ ಗರ್ಭಪಾತ ಮಾಡಿಸಿಕೊಳ್ಳುವಂತೆ ಪೀಡಿಸಿದ ಹಿನ್ನೆಲೆಯಲ್ಲಿ ಮನನೊಂದು ಆಕೆ ನೇಣಿಗೆ ಶರಣಾಗಿರುವ ಘಟನೆ ನಗರದಲ್ಲಿ ನಡೆದಿದೆ.
ಬೆಂಗಳೂರಿನ ಜಿಂದಾಲ್ ನಗರದ ನಿವಾಸಿ ರಮ್ಯ (23) ಆತ್ಮಹತ್ಯೆಗೆ ಶರಣಾದ ಗರ್ಭಿಣಿ. ಕಳೆದ ನಾಲ್ಕು ವರ್ಷಗಳ ಹಿಂದೆ ಬೆಂಗಳೂರಿನ ಚಿಕ್ಕಬಿದುರಕಲ್ಲು ನಿವಾಸಿ ಅರುಣ್‌ಗೆ ರಮ್ಯಾಳನ್ನು ವಿವಾಹ ಮಾಡಿಕೊಡಲಾಗಿತ್ತು. ಆದರೆ ದಿನಕಳೆದಂತೆ ವರದಕ್ಷಿಣೆ ತರುವಂತೆ ಪತಿ ಅರುಣ್ ರಮ್ಯಾಳನ್ನು ಪೀಡಿಸಲು ಆರಂಭಿಸಿದ್ದಾನೆ. ಮದುವೆಗೂ ಮುಂಚಿತವಾಗಿ ಜಿಂದಾಲ್‌ನಲ್ಲಿ ಸೈಟ್ ಕೊಡುವುದಾಗಿ ರಮ್ಯ ಪೋಷಕರು ಹೇಳಿದ್ದರಂತೆ. ಆದರೆ ಈಗ ರಮ್ಯ ತಂಗಿಯ ಮದುವೆ ನಿಶ್ಚಯವಾಗಿದ್ದು, ಮದುವೆಗಾಗಿ ಆ ಸೈಟ್ನ್ನು ಮಾರಾಟ ಮಾಡಲು ಪೋಷಕರು ಮುಂದಾಗಿದ್ದರು. ಈ ವಿಚಾರ ತಿಳಿದ ಅರುಣ್ ವರದಕ್ಷಿಣೆ ಮತ್ತು ಸೈಟ್ ಕೊಡಿಸುವಂತೆ ಕಿರುಕುಳ ನೀಡುತ್ತಿದ್ದರಂತೆ.
ಈ ವಿಚಾರವನ್ನು ರಮ್ಯ ಆಕೆಯ ಪೋಷಕರ ಬಳಿಯೂ ತಿಳಿಸಿದ್ದಳು. ಬಳಿಕ ಅರುಣ್ ಬಳಿ ರಮ್ಯ ಪೋಷಕರು ಮನವಿ ಮಾಡಿದ್ದು, ಚಿಕ್ಕ ಮಗಳ ಮದುವೆ ಮುಗಿದ ಬಳಿಕ ಸೈಟ್ ಕೊಡಿಸುವುದಾಗಿ ತಿಳಿಸಿದ್ದರಂತೆ. ಆದರೆ ಅದಕ್ಕೊಪ್ಪದ ಅರುಣ್ ಕಿರುಕುಳ ನೀಡಲು ಮುಂದಾಗಿದ್ದಾನೆ. ಈ ವೇಳೆಗಾಗಲೇ ರಮ್ಯ ಗರ್ಭಿಣಿ ಎಂಬ ವಿಚಾರ ತಿಳಿದಿದ್ದು, ಮಗು ಬೇಕಾದರೆ ಸೈಟ್ ಕೊಡಬೇಕು. ಸೈಟ್ ಬಂದ ಮೇಲೆ ಮಕ್ಕಳು. ನನಗೆ ಸಾಕಲು ಕಷ್ಟವಾಗುತ್ತದೆ. ಗರ್ಭಪಾತ ಮಾಡಿಸಿಕೊ ಎಂದು ಅರುಣ್ ಹಾಗೂ ಆತನ ಸಹೋದರಿ ಹಿಂಸೆ ಕೊಟ್ಟಿದ್ದಾರೆ ಎನ್ನಲಾಗ್ತಿದೆ.
ಇದರಿಂದ ಮನನೊಂದು ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಆದರೆ ಆಕೆಯ ಪೋಷಕರು ರಮ್ಯಳನ್ನು ಕೊಲೆ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ. ಸದ್ಯ ಪ್ರಾಥಮಿಕ ತನಿಖೆಯ ಪ್ರಕಾರ ರಮ್ಯ ಕೌಟುಂಬಿಕ ಕಲಹಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದುಬಂದಿದೆ. ಘಟನೆಗೆ ಸಂಬಂಧಿಸಿದಂತೆ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ರಮ್ಯಳ ಪತಿ ಅರುಣ್ ಹಾಗೂ ಮಾವನನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.