ಬೆಂಗಳೂರು: ಡ್ರಗ್ಸ್ ಖರೀದಿಸಲು ವರದಕ್ಷಿಣೆ ತರಲಿಲ್ಲ ಎಂಬ ಕಾರಣಕ್ಕಾಗಿ ಏಕಾಂತದಲ್ಲಿದ್ದಾಗ ಸೆರೆಹಿಡಿದ ಅಶ್ಲೀಲ ವಿಡಿಯೋ, ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕುವುದಾಗಿ ಪತ್ನಿಗೆ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ಪತಿಯ ವಿರುದ್ಧ ವೈಯ್ಯಲಿಕಾವಲ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಮಲ್ಲೇಶ್ವರದ ನಿವಾಸಿಯಾಗಿರುವ 24 ವರ್ಷದ ಮಹಿಳೆ ಕೊಟ್ಟ ದೂರಿನ ಆಧಾರದ ಮೇಲೆ ಆಕೆಯ ಪತಿ 27 ವರ್ಷದ ಚಿಕ್ಕಮಗಳೂರಿನ ನಿವಾಸಿಯ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಓದಿ: ದಂಡಿನಶಿವರ ಠಾಣೆಗೆ ಎಸ್ಪಿ ಕಾರು ಕಳುಹಿಕೊಟ್ಟ ವಿಚಾರ ; ಕೊನೆಗೂ ಆರೋಪಿಯನ್ನ ಬಂಧಿಸಿದ ಪೊಲೀಸರು
ಪ್ರಕರಣದ ಹಿನ್ನೆಲೆ
2021 ರಲ್ಲಿ ಆರೋಪಿ ದೂರುದಾರ ಮಹಿಳೆಯನ್ನು ವಿವಾಹವಾಗಿದ್ದ. ಇದಾದ ಕೆಲ ದಿನಗಳಲ್ಲೇ ಪತಿ ಕುಡಿದು ಬಂದು ತನ್ನ ಪತ್ನಿಗೆ ಕಿರುಕುಳ ಕೊಡಲಾರಂಭಿಸಿದ್ದ. ಕುಡಿಯುವುದರ ಜತೆಗೆ ಡ್ರಗ್ಸ್ ಸೇವನೆ ಹಾಗೂ ಬೇರೆ ಮಹಿಳೆಯರ ಜತೆಗೆ ವಿವಾಹೇತರ ಸಂಬಂಧ ಹೊಂದಿರುವುದರ ಸಂಗತಿ ಪತ್ನಿಯ ಗಮನಕ್ಕೆ ಬಂದಿತ್ತು. ಈ ಬಗ್ಗೆ ಪ್ರಶ್ನಿಸಿದಾಗ, ಪತ್ನಿಗೂ ಡ್ರಗ್ಸ್ ಸೇವಿಸುವಂತೆ ಒತ್ತಾಯ ಮಾಡುತ್ತಿದ್ದ ಎಂದು ಮಹಿಳೆ ಆರೋಪಿಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಈ ನಡುವೆ ಡ್ರಗ್ಸ್ ಖರೀದಿಸಲು ಹಣದ ಕೊರತೆ ಎದುರಾದಾಗ ವರದಕ್ಷಿಣೆ ತರುವಂತೆ ಪತ್ನಿಗೆ ಹಲ್ಲೆ ನಡೆಸಿ ಬೆದರಿಸಿದ್ದ. ಏಕಾಂತದಲ್ಲಿರುವ ಸಮಯದಲ್ಲಿ ಪತ್ನಿಯ ಗಮನಕ್ಕೆ ಬಾರದಂತೆ ಇಬ್ಬರ ನಡುವಿನ ಅಶ್ಲೀಲ ವಿಡಿಯೋ, ಫೋಟೋಗಳನ್ನು ಆರೋಪಿ ಮೊಬೈಲ್‌ನಲ್ಲಿ ಸೆರೆಹಿಡಿಯುತ್ತಿದ್ದ. ಇದು ಪತ್ನಿ ಗಮನಕ್ಕೆ ಬಂದಿತ್ತು. ಪತಿಯ ಮೊಬೈಲ್ ಕಸಿದುಕೊಂಡು ಪರಿಶೀಲಿಸಿದಾಗ ಅದರಲ್ಲಿ ದೂರುದಾರ ಮಹಿಳೆಯ ಹಲವು ಅಶ್ಲೀಲ ವಿಡಿಯೋಗಳು ಇರುವುದು ಕಂಡು ಬಂದಿತ್ತು.
ಈ ಬಗ್ಗೆ ಮಹಿಳೆ ತನ್ನ ಪತಿಯನ್ನು ಪ್ರಶ್ನಿಸಿದಾಗ ಆತ ಮತ್ತೆ ವರದಕ್ಷಿಣೆ ತರುವಂತೆ ಕಿರುಕುಳ ಕೊಡಲು ಆರಂಭಿಸಿದ್ದ. ನೊಂದ ಪತ್ನಿ ಈ ಮೊದಲು ಠಾಣೆ ಮೆಟ್ಟಿಲೇರಿದಾಗ ನಾವು ಮಧ್ಯ ಪ್ರವೇಶಿಸಿ ಇಬ್ಬರ ನಡುವೆ ರಾಜಿ ಸಂದಾನ ಮಾಡಿದ್ದೆವು ಎಂದು ಪೊಲೀಸರು ತಿಳಿಸಿದ್ದಾರೆ.
ಇದಾದ ಕೆಲ ದಿನಗಳ ಬಳಿಕ ವರದಕ್ಷಿಣೆ ತರದಿದ್ದರೆ ನಿನ್ನ ಅಶ್ಲೀಲ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡುವುದಾಗಿ ಪತಿ ಬೆದರಿಸಿ ಮನೆಯಿಂದ ಹೊರ ಹಾಕಿದ್ದಾನೆ ಎಂದು ದೂರಿನಲ್ಲಿ ಮಹಿಳೆ ಆರೋಪಿಸಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.