ಬೆಂಗಳೂರು: ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರಕ್ಕೆ ಹಿಂದಿನ ಸರ್ಕಾರ ಘೋಷಿಸಿದ್ದ ಅನುದಾನದಲ್ಲಿ ಯಾವುದೇ ಬದಲಾವಣೆ ಮಾಡಬಾರದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪಗೆ ಮಾಜಿ ಸಚಿವ ಕೃಷ್ಣ ಬೈರೇಗೌಡ ಮನವಿ ಮಾಡಿದ್ದಾರೆ.
ಸಿಎಂ ಗೃಹ ಕಚೇರಿ ಕೃಷ್ಣಾಗೆ ಮಾಜಿ ಸಚಿವ ಕೃಷ್ಣಬೈರೇಗೌಡ ಭೇಟಿ ನೀಡಿದರು. ಕ್ಷೇತ್ರದ ಅಭಿವೃದ್ಧಿ ಕಾರ್ಯ, ಅನುದಾನ ಕುರಿತು ಮಾತುಕತೆ ನಡೆಸಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಉತ್ಪತ್ತಿಯಾಗುವ ಬಹುತೇಕ ಕಸದಲ್ಲಿ ಮುಕ್ಕಾಲುಪಾಲು ನಮ್ಮ ಕ್ಷೇತ್ರದಲ್ಲಿ ವಿಲೇವಾರಿ ಮಾಡಲಾಗುತ್ತಿದೆ. ಈ ವಿಚಾರಕ್ಕೆ ಸ್ಥಳೀಯರಿಂದ ವಿರೋಧ ವ್ಯಕ್ತವಾಗಿದ್ದು, ಪ್ರತಿಭಟನೆಯನ್ನೂ ಮಾಡಿದ್ದಾರೆ. ಸಿಎಂ ಅವರೇ ಬೆಂಗಳೂರು ಅಭಿವೃದ್ಧಿ ನೋಡಿಕೊಳ್ಳುತ್ತಿರುವ ಕಾರಣ ಇದನ್ನು ಅವರ ಗಮನಕ್ಕೆ ತಂದಿದ್ದೇನೆ ಎಂದರು.
ಕಸ ವಿಲೇವಾರಿ ನಮ್ಮ ಕ್ಷೇತ್ರದಲ್ಲಿ ಆಗುತ್ತಿದ್ದ ಕಾರಣ ಹಿಂದಿನ ಸರ್ಕಾರ ಅಭಿವೃದ್ಧಿಗೆ ಅನುದಾನ ನೀಡುತ್ತಿತ್ತು. ಈಗ ಆ ಅನುದಾನದಲ್ಲಿ ಯಾವುದೇ ಬದಲಾವಣೆ ಮಾಡಬಾರದು. ಸ್ಥಳೀಯರ ಸಮಸ್ಯೆ ಪರಿಹರಿಸಬೇಕು ಎಂದು ಮನವಿ ಮಾಡಿದ್ದೇನೆ ಈ ಕುರಿತು ಪರಿಶೀಲನೆ ಮಾಡುವುದಾಗಿ ಸಿಎಂ ಕೂಡ ಭರವಸೆ ನೀಡಿದ್ದಾರೆ ಎಂದರು.