ಬೆಂಗಳೂರು: ನಂಜನಗೂಡಿನ ಟಿಹೆಚ್ಒ ಡಾ. ನಾಗೇಂದ್ರ ಆತ್ಮಹತ್ಯೆ ಬಳಿಕ ಆಕ್ರೋಶಗೊಂಡು ಪ್ರತಿಭಟನೆ ನಡೆಸಿದ್ದ ವೈದ್ಯರು, ಸಿಎಂ ಯಡಿಯೂರಪ್ಪ ಅವರ ಮಾತಿಗೆ ಮಣಿದಿದ್ದಾರೆ.
ಆತ್ಮಹತ್ಯೆ ಪ್ರಕರಣದಿಂದ ಬೇಸತ್ತ ವೈದ್ಯರು ಕರ್ತವ್ಯಕ್ಕೆ ಹಾಜರಾಗದೆ ಪ್ರತಿಭಟನೆ ನಡೆಸಲು ಮುಂದಾಗಿದ್ದರು. ಎರಡು ದಿನ ಕಪ್ಪು ಪಟ್ಟಿ ಧರಿಸಿ ಪ್ರತಿಭಟಿಸಿದ್ದ ವೈದ್ಯರು, ನಿನ್ನೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರೊಂದಿಗೆ ಸಭೆ ನಡೆಸಿದರು.
ಸರ್ಕಾರಿ ವೈದ್ಯಾಧಿಕಾರಿಗಳ ಜೊತೆ ಸಭೆ ನಡೆಸಿದ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸಿಇಒ ವಿರುದ್ಧ ಶಿಸ್ತು ಕ್ರಮದ ಭರವಸೆ ನೀಡಿದ್ರು. ಸಿಇಒ ಅಮಿತ್ ಮಿಶ್ರಾ ವರ್ಗಾವಣೆ ಹಾಗೂ ಈಗಾಗಲೇ ವಿರುದ್ಧ ಎಫ್ಐಆರ್ ಕೂಡ ದಾಖಲಾಗಿದೆ. ಹೀಗಾಗಿ ಪ್ರತಿಭಟನೆ ಕೈಬಿಟ್ಟು ಕರ್ತವ್ಯಕ್ಕೆ ಹಾಜರಾಗುವಂತೆ ಸಿಎಂ ಸೂಚನೆ ನೀಡಿದರು.
ಈ ಬಗ್ಗೆ ಮಾಹಿತಿ ನೀಡಿರುವ ಐಎಂಎ ಕಾರ್ಯದರ್ಶಿ ಡಾ. ಶ್ರೀನಿವಾಸ್, ಎಲ್ಲಾ ಜಿಲ್ಲಾ ಡಿಹೆಚ್ಒ (DHO)ಗಳ ಜೊತೆ ಮಾತನಾಡುತ್ತೇವೆ. ಸಿಎಂ ಕೂಡ ಶಿಸ್ತುಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ. ಹೀಗಾಗಿ ನಮ್ಮ ಪ್ರತಿಭಟನೆ ಕೈಬಿಡುತ್ತೇವೆ ಎಂದು ಹೇಳಿದ್ದಾರೆ.