ಬೆಂಗಳೂರು: ಇಸ್ರೋ ಅಧ್ಯಕ್ಷ ಹಾಗೂ ಖ್ಯಾತ ಬಾಹ್ಯಾಕಾಶ ವಿಜ್ಞಾನಿ ಕೆ.ಶಿವನ್ ಅವರು ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಪ್ರತಿಷ್ಠಿತ ‘ಡಾಕ್ಟರ್ ಆಫ್ ಸೈನ್ಸ್ʼ ಗೌರವ ಪದವಿಗೆ ಪಾತ್ರರಾಗಿದ್ದಾರೆ. ಅತ್ಯುತ್ತಮ ವಿಜ್ಞಾನಿಗಳು ಹಾಗೂ ಕೈಗಾರಿಕೋದ್ಯಮಿಗಳನ್ನು ಗುರುತಿಸಿ ಈ ಪದವಿ ನೀಡಲಾಗುತ್ತದೆ.
ರಾಜಭವನದಲ್ಲಿ ಶನಿವಾರ ನಡೆದ ಸರಳ ಕಾರ್ಯಕ್ರಮದಲ್ಲಿ ರಾಜ್ಯಪಾಲ ವಜೂಭಾಯ್ ವಾಲ ಅವರು ಶಿವನ್ ಅವರಿಗೆ ಈ ಗೌರವ ಪದವಿಯನ್ನು ಪ್ರದಾನ ಮಾಡಿದರಲ್ಲದೆ, ಇಸ್ರೋ ಅಧ್ಯಕ್ಷರಾಗಿ ಭಾರತೀಯ ಬಾಹ್ಯಾಕಾಶ ಕ್ಷೇತ್ರಕ್ಕೆ ಅವರು ನೀಡಿದ ಕೊಡುಗೆಗಳನ್ನು ಶ್ಲಾಘಿಸಿದರು.
ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಉಪ ಮುಖ್ಯಮಂತ್ರಿ ಡಾ. ಸಿ.ಎನ್.ಅಶ್ವತ್ಥ ನಾರಾಯಣ, ಶಿವನ್ ಅವರನ್ನು ಅಭಿನಂದಿಸಿದರಲ್ಲದೆ, ಶಿವನ್ ನಾಯಕತ್ವದಲ್ಲಿ ಇಸ್ರೋ ಬಾಹ್ಯಾಕಾಶದಲ್ಲಿ ಅದ್ಭುತಗಳನ್ನೇ ಸೃಷ್ಟಿಸುತ್ತಿದೆ. ನಮ್ಮ ದೇಶ ಕೈಗೊಂಡ ಅನೇಕ ಬಾಹ್ಯಾಕಾಶ ಕಾರ್ಯಕ್ರಮಗಳಲ್ಲಿ ಅವರ ಪಾತ್ರವಿದೆ. ಅವರ ಮುಂದಿನ ಎಲ್ಲ ಯೋಜನೆಗಳು ಯಶಸ್ವಿಯಾಗಲಿ ಎಂದು ಹಾರೈಸಿದರು.
ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಕರಿಸಿದ್ದಪ್ಪ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.