ಬೆಂಗಳೂರು: ಕಳೆದ ವರ್ಷ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಹಾಸನದಲ್ಲಿ ಉಪನಿರ್ದೇಶಕರು ಸಾಮೂಹಿಕ ನಕಲು ಮಾಡಿಸಿದ್ದರಿಂದ ಪ್ರಥಮ ಸ್ಥಾನ ಗಳಿಸಿದೆ ಎಂದು ಶಿಕ್ಷಕರೊಬ್ಬರು ಶಿಕ್ಷಣ ಮಂಡಳಿಗೆ ಪತ್ರ ಬರೆದಿದ್ದು, ಈ ಸಂಬಂಧ ಪ್ರೌಢ ಶಿಕ್ಷಣ ಮಂಡಳಿ ಈ ಬಾರಿ ಪರೀಕ್ಷೆಯಲ್ಲಿ ಸೂಕ್ತ ಬಿಗಿ ಭದ್ರತೆ ಒದಗಿಸುವಂತೆ ಆದೇಶ ಹೊರಡಿಸಿದೆ.
ಚೆನ್ನರಾಯಪಟ್ಟಣ ಪ್ರೌಢ ಶಾಲಾ ಶಿಕ್ಷಕ ಶಿವಕುಮಾರ್ ಎಂಬುವವರು ಈ ಮನವಿ ಪತ್ರ ಬರೆದಿದ್ದಾರೆ. ಕಳೆದ ಬಾರಿಯ ಫಲಿತಾಂಶದಲ್ಲಿ ಹಾಸನದ ಉಪನಿರ್ದೇಶಕ ಮಂಜುನಾಥ್ ಸಾಮೂಹಿಕ ನಕಲು ಮಾಡಲು ಮೌಖಿಕ ಆದೇಶ ನೀಡಿದ್ದರು ಎಂದು ಉಲ್ಲೇಖಿಸಿದ್ದಾರೆ. ಇವರಿಂದಲೇ ಕಳೆದ ಬಾರಿ ಜಿಲ್ಲೆ ಪ್ರಥಮ ಸ್ಥಾನ ಬರಲು ಸಾಧ್ಯವಾಗಿದೆ ಎಂದು ದೂರಿದ್ದಾರೆ.
2019-20ನೇ ಸಾಲಿನಲ್ಲಿ ನಡೆಯುವ ಪರೀಕ್ಷೆಗಳಲ್ಲಿ ಸ್ಥಳೀಯ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ಸೋಮನಾಥ್ ಇದ್ದು, ಹೆಚ್ಚು ನಕಲು ಮಾಡಿರುವ ಸಾಧ್ಯತೆಗಳಿವೆ. ಆದ ಕಾರಣ ಈ ಬಾರಿ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಬಿಗಿ ಭದ್ರತೆಯಿಂದ ನಕಲಿಗೆ ಅವಕಾಶ ನೀಡದಂತೆ ಎಲ್ಲೆಡೆ ಸಿಸಿ ಕ್ಯಾಮೆರಾ ಅಳವಡಿಸಬೇಕೆಂದು ತಿಳಿಸಿದ್ದಾರೆ. ಪರೀಕ್ಷೆಯ ನೈಜತೆಯನ್ನು ಕಾಪಾಡಲು ಆದೇಶ ಹೊರಡಿಸಲಾಗಿದೆ.