ಬೆಂಗಳೂರು: ಕೋವಿಡ್-19 ಮಹಾಮಾರಿ ಬಂದ ದಿನದಿಂದ ಎಲ್ಲರೂ ಸಾಮಾಜಿಕ ಅಂತರ ಕಾಯ್ದುಕೊಂಡು ಕೆಲಸವನ್ನು ನಿರ್ವಹಣೆ ಮಾಡುತ್ತಿದ್ದಾರೆ. ಲಾಕ್ಡೌನ್ ಜಾರಿಯಾದ ಬಳಿಕ ರಸ್ತೆ ಮೇಲೆ ವಾಹನ ಓಡಾಟಗಳ ಸಂಖ್ಯೆಯೂ ಸಹ ಕಡಿಮೆಯಾಗಿತ್ತು. ಇದರಿಂದ ಟ್ರಾಫಿಕ್ ಪೊಲೀಸರು ಸ್ವಲ್ಪ ದಿನ ಟ್ರಾಫಿಕ್ ನಿಯಮಗಳ ಕಡೆ ಹೆಚ್ಚು ಗಮನ ಹರಿಸಿರಲಿಲ್ಲ.
ಲಾಕ್ಡೌನ್ ಜಾರಿಯಾಗಿದ್ದರಿಂದ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯದಲ್ಲಿಯೇ ನಿರತರಾಗಿದ್ದರು. ಈ ವೇಳೆ ಟ್ರಾಫಿಕ್ ಉಲ್ಲಂಘಿಸಿದವರ ಪ್ರಕರಣಗಳ ಪತ್ತೆಗೆ ಪೊಲೀಸರು ತಲೆಕೆಡಿಸಿಕೊಂಡಿರಲಿಲ್ಲ.
ಆದರೆ, ಕುಡಿದು ವಾಹನ ಚಾಲನೆ ಮಾಡಿದಾಗ ತಪಾಸಣೆ, ವಾಹನ ಸವಾರರು ನಿಯಮ ಉಲ್ಲಂಘನೆ, ಹೆಲ್ಮೆಟ್ ಹಾಕದೇ ಓಡಾಟ, ಸೀಟ್ ಬೆಲ್ಟ್ ಹಾಕದೇ ವಾಹನ ಚಲಾವಣೆ, ತ್ರಿಬಲ್ ರೈಡ್ ಹೀಗೆ ನಿಯಮ ಉಲ್ಲಂಘನೆ ಮಾಡಿದವರನ್ನ ರಸ್ತೆ ಬದಿಗಳಲ್ಲಿ ನಿಂತು ಪೊಲೀಸರು ತನಿಖೆ ಮಾಡೋದಾಗಲಿ ಅಥವಾ ದಂಡ ಹಾಕುವ ಕೆಲಸವನ್ನು ಮಾಡುತ್ತಿಲ್ಲ.
ಹೀಗಾಗಿ ಇದನ್ನು ಬಂಡವಾಳ ಮಾಡಿಕೊಂಡ ಸಿಲಿಕಾನ್ ಸಿಟಿ ವಾಹನ ಸವಾರರು ನಗರದಲ್ಲಿ ಸಿಗ್ನಲ್ ಜಂಪ್, ಹೆಲ್ಮೆಟ್ ಇಲ್ಲದೇ ಓಡಾಟ, ತ್ರಿಬಲ್ ರೈಡಿಂಗ್ನಂತಹ ನಿಯಮ ಉಲ್ಲಂಘನೆ ಮಾಡಿದ್ದಾರೆ. ಆದರೆ, ಸಂಚಾರಿ ಪೊಲೀಸ್ ಇಲಾಖೆಯ ಪೊಲೀಸರು ಜಾಣತನ ಪ್ರದರ್ಶನ ಮಾಡಿ ಯಾರೆಲ್ಲ ನಿಯಮಗಳನ್ನ ಉಲ್ಲಂಘನೆ ಮಾಡಿದ್ದಾರೆ ಅವರ ಮನೆ, ಕಚೇರಿಗಳಿಗೆ ನೋಟಿಸ್ ಜಾರಿ ಮಾಡಿದ್ದಾರೆ.
ಇನ್ನು ಪೊಲೀಸ್ ಇಲಾಖೆಯು ನಗರದ ಪ್ರತಿ ಸಿಗ್ನಲ್ ಬಳಿ ಸಿಸಿಟಿವಿ ಅಳವಡಿಕೆ ಮಾಡಿದೆ. ಈ ಸಿಸಿಟಿವಿ ಅತ್ಯಾಧುನಿಕ ತಂತ್ರಜ್ಞಾನ ಹೊಂದಿದ್ದು, ಅತೀ ಸೂಕ್ಷ್ಮತೆ ಕೂಡ ಸೆರೆ ಹಿಡಿಯುವ ಸಾಮರ್ಥ್ಯ ಇದಕ್ಕಿದೆ. ಹೀಗಾಗಿ ಲಾಕ್ಡೌನ್ ಜಾರಿಯಾದ ಇಂದಿನವರೆಗೆ ನಿಯಮ ಉಲ್ಲಂಘನೆ ಮಾಡಿದ ಒಟ್ಟು 8,89,254 ವಾಹನ ಸವಾರರು ಹಾಗೂ ವಾಹನಗಳ ನಂಬರನ್ನು ಸೆರೆಹಿಡಿದಿದ್ದು, ಒಟ್ಟು 6,50,534 ಮಂದಿಗೆ ದಂಡ ಪಾವತಿಸುವಂತೆ ನೋಟಿಸ್ ಜಾರಿ ಮಾಡಿದ್ದಾರೆ. ಇನ್ನು ಸಂಚಾರಿ ಪೊಲೀಸರು ರಸ್ತೆ ಮೇಲೆ ಕರ್ತವ್ಯ ನಿರ್ವಹಿಸಿ ನಿಯಮ ಉಲ್ಲಂಘನೆ ಮಾಡುವವರನ್ನು ಹಿಡಿಯುವ ಸಂಖ್ಯೆಗಿಂತ ಅತಿ ಹೆಚ್ಚು ದಂಡವನ್ನು ಈ ಸಿಸಿಟಿವಿಗಳ ಸಹಾಯದಿಂದ ವಸೂಲಿ ಮಾಡಲಾಗಿದೆ.