ಬೆಂಗಳೂರು: ನಮ್ಮ ಕುಟುಂಬಕ್ಕೆ ಸೋಲು ಹೊಸದೇನಲ್ಲ. ದೇವೇಗೌಡರು ರಾಜಕೀಯ ಜೀವನದಲ್ಲಿ ಪ್ರವಾಹದ ಎದುರು ಹೋರಾಟ ಮಾಡಿದವರು. ಐದಾರು ವರ್ಷ ಅಷ್ಟೇ ಅವರು ಅಧಿಕಾರದಲ್ಲಿ ಇದ್ದದ್ದು. ಉಳಿದ 55 ವರ್ಷ ವಿರೋಧ ಪಕ್ಷದಲ್ಲೇ ಕೆಲಸ ಮಾಡಿದ್ದಾರೆ ಎಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಟೀಕಾಕಾರರಿಗೆ ಮಾತಿನ ಚಾಟಿ ಬೀಸಿದ್ದಾರೆ.
ದೇವೇಗೌಡರ ಬಗ್ಗೆ ಲಘು ಮಾತು ಬೇಡ:
ಅರಮನೆ ಮೈದಾನದಲ್ಲಿ ಜೆಡಿಎಸ್ ವತಿಯಿಂದ ಇಂದು ಹಮ್ಮಿಕೊಂಡಿದ್ದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಜಯಗಳಿಸಿರುವ ಪಕ್ಷದ ಸದಸ್ಯರನ್ನು ಸನ್ಮಾನಿಸುವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ದೇವೇಗೌಡರ ಬಗ್ಗೆ ತಿಳಿಯದೆ ಲಘುವಾಗಿ ಮಾತನಾಡಬೇಡಿ. ನಮ್ಮ ತಂದೆಯನ್ನು ಎರಡು ಬಾರಿ ಚುನಾವಣೆಯಲ್ಲಿ ಸೋಲಿಸಿದ್ದಾರೆ. ಮತ್ತೆ ಜನರೇ ಗೆಲ್ಲಿಸಿದ್ದಾರೆ. ನಮಗೆ ಅಧಿಕಾರದ ಮದ ಇಲ್ಲ. ಯಾರಿಂದಲೂ ಪಾಠ ಹೇಳಿಸಿಕೊಳ್ಳಬೇಕಿಲ್ಲ.ಸುದ್ದಿ ಚಾನಲ್‍ಗಳಲ್ಲಿ ಕುಳಿತುಕೊಂಡು ಬಾಯಿಗೆ ಬಂದಂತೆ ಮಾತನಾಡುವ ಮೊದಲು ಎಚ್ಚರಿಕೆಯಿಂದಿರಿ ಎಂದು ಗುಡುಗಿದರು.
1999 ರಲ್ಲಿ ನಾನು, ನನ್ನ ತಂದೆ, ರೇವಣ್ಣ ಎಲ್ಲರೂ ಸೋತಿದ್ದೇವೆ. ಸೋಲು-ಗೆಲುವು ಎಲ್ಲವನ್ನೂ ನೋಡಿದ್ದೇವೆ. ನನ್ನ ವಿಷಯಕ್ಕೆ ಬರಬೇಕಿಲ್ಲ ಎಂದು ಮಾಧ್ಯಮವೊಂದಕ್ಕೆ ತಿರುಗೇಟು ನೀಡಿದರು.
ಮಾಧ್ಯಮಗಳಿಗೆ ಕಾನೂನು ಕ್ರಮದ ಎಚ್ಚರಿಕೆ:
ಚಾನಲ್‍ಗಳು ಅಪಪ್ರಚಾರದ ಸುದ್ದಿ ಮಾಡುವುದನ್ನು ನಿಲ್ಲಿಸಬೇಕು. ಮಾಧ್ಯಮದ ಸ್ನೇಹಿತನಾಗಿ, ಮಾಧ್ಯಮ ಸಂಸ್ಥೆಯೊಂದರ ಮಾಲೀಕನಾಗಿ ಹೇಳುತ್ತಿದ್ದೇನೆ. ನಿಮ್ಮ ಕೆಲಸವನ್ನು ನೀವು ಸರಿಯಾಗಿ ನಿಭಾಯಿಸದಿದ್ದರೆ ಕಾನೂನು ಕ್ರಮ ಎದುರಿಸಲೇಬೇಕಾಗುತ್ತದೆ ಎಂದು ಎಚ್ಚರಿಸಿದರು.
ಈ ಸರ್ಕಾರ ಗುತ್ತಿಗೆದಾರರಿಗೆ ನೀವು ತಿನ್ನಿ ನಮಗೂ ತಿನ್ನಿಸಿ ಎಂಬಂತೆ ನಡೆದುಕೊಳ್ಳುತ್ತಿದೆ ಎಂದು ಮಾತನಾಡುತ್ತಾರೆ. ಬ್ಲಾಕ್ ಲಿಸ್ಟ್ ಆಗಿರುವ ಗುತ್ತಿಗೆದಾರರಿಗೆ ಹೊಸ ಕೆಲಸಗಳನ್ನು ನೀಡುವ ಸಂಬಂಧ ಹಿಂದಿನ ಸರ್ಕಾರ ಕಾಯ್ದೆ ರೂಪಿಸಿದೆ, ನಾವು ಅದನ್ನು ಪಾಲಿಸುತ್ತಿದ್ದೇವೆ ಎಂದು ಸುಳ್ಳು ಪ್ರಚಾರದ ಮೂಲಕ ಜನರ ದಿಕ್ಕು ತಪ್ಪಿಸುತ್ತಿದ್ದಾರೆ. ಸಾರ್ವಜನಿಕ ಜೀವನದಲ್ಲಿ ನಾನು ಕೂಡ ನೈತಿಕತೆ ಉಳಿಸಿಕೊಂಡಿದ್ದೇನೆ ಎಂದು ಹೇಳಿದರು.
ನನ್ನ ಮಗ ಕುಡಿದು ಗಲಾಟೆ ಮಾಡಿದ ಎಂದು ಪತ್ರಿಕೆಯೊಂದು ವರದಿ ಮಾಡಿದೆ. ವ್ಯಕ್ತಿಯೊಬ್ಬನ ತೇಜೋವಧೆ ಮಾಡುವುದರಿಂದ ವೃತ್ತಿಧರ್ಮ ಹಾಳಾಗುತ್ತದೆ. ಪತ್ರಿಕೆಗಳಿಂದ ಸರ್ಕಾರ ಹೋಗಲ್ಲ. ನಿಮ್ಮ ಧಾರವಾಹಿಯಂತಹ ವರದಿಗಳಿಂದ ಸರ್ಕಾರ ಹೋಗಲ್ಲ. ಮಾಧ್ಯಮದವರನ್ನು ಮೆಚ್ಚಿಸಲು ನಾನು ಅಧಿಕಾರಕ್ಕೆ ಬಂದಿಲ್ಲ. ನಾಡಿನ ಜನರ ಸೇವೆ ಮಾಡಲು ಬಂದಿದ್ದೇನೆ ಎಂದು ಮಾರ್ಮಿಕವಾಗಿ ಹೇಳಿದರು.
ಸರ್ಕಾರ ಉಳಿಸೋದು ಗೊತ್ತಿದೆ:
ಸರ್ಕಾರದಲ್ಲಿ ತಪ್ಪುಗಳಿರಬಹುದು. ಕೆಲವು ಭಿನ್ನಾಭಿಪ್ರಾಯಗಳೂ ಇರಬಹುದು. ಸರ್ಕಾರಕ್ಕೆ ಏನೂ ಆಗಲ್ಲ. ಮೈತ್ರಿ ಸರ್ಕಾರವನ್ನು ಹೇಗೆ ಉಳಿಸಬೇಕೆಂಬುದು ನನಗೆ ಗೊತ್ತಿದೆ. ಮೈತ್ರಿ ಸರ್ಕಾರವನ್ನು ಸುಭದ್ರವಾಗಿಡಲು ಎಲ್ಲ ವ್ಯವಸ್ಥೆ ಮಾಡಿಕೊಂಡಿದ್ದೇನೆ. ಇದಕ್ಕೆ ಕಾಂಗ್ರೆಸ್ ನಾಯಕರು ಸಹಕಾರ ನೀಡಿದ್ದಾರೆ ಎಂದು ಸಿಎಂ ಹೇಳಿದರು.ಮೈತ್ರಿ ಸರ್ಕಾರ ಜನರ ಪರವಾಗಿ ಕೆಲಸ ಮಾಡಲಿದೆ. ಚುನಾಯಿತರಾದ ನಿಮಗೆ ಅಗೌರವ ತರುವಂತಹ ಕೆಲಸವನ್ನು ನಾನು ಮಾಡುವುದಿಲ್ಲ. ಜನರ ಆಶೋತ್ತರಗಳಿಗೆ ಸ್ಪಂದಿಸಿ ಒಳ್ಳೆಯ ಹೆಸರು ಬರುವಂತೆ ಮಾಡುತ್ತೇನೆ ಎಂದರು.
ಪ್ರತಿದಿನ ಸಾವಿರಾರು ಜನರ ಕಷ್ಟಗಳಿಗೆ ಸ್ಪಂದಿಸುತ್ತಿದ್ದೇನೆ. ಕೃಷಿ ಇಲಾಖೆಯಲ್ಲಿ ಇಸ್ರೇಲ್ ಮಾದರಿಯ ಯೋಜನೆ ಜಾರಿಗೆ ತಂದಿದ್ದೇನೆ, ಇದ್ಯಾವುದನ್ನು ತೋರಿಸುತ್ತಿಲ್ಲ. ನಮ್ಮ ಸರ್ಕಾರ ಜನರಿಗಾಗಿ ಸಾವಿರಾರು ಯೋಜನೆಗಳನ್ನು ಜಾರಿಗೆ ತಂದಿದೆ. ಅವುಗಳಿಗೆ ಶಬಾಷ್ಗಿರಿ ಕೊಡಿ ಎಂದು ನಾನು ಕೇಳುತ್ತಿಲ್ಲ. ಒಳ್ಳೆಯದನ್ನು ಜನರಿಗೆ ತಲುಪಿಸಿ ಎಂದು ಸಲಹೆ ನೀಡಿದರು.
ಲೋಕಸಭೆ ಚುನಾವಣೆ ಸೋತಿದ್ದಕ್ಕೆ ನಾನು ಗ್ರಾಮ ವಾಸ್ತವ್ಯ ಮಾಡುತ್ತಿಲ್ಲ, ಚುನಾವಣೆಗೂ ಮೊದಲು ಇದನ್ನು ಯೋಜಿಸಲಾಗಿತ್ತು. ಈ ಹಿಂದೆ ಗ್ರಾಮ ವಾಸ್ತವ್ಯದಲ್ಲಿ ಸಾಕಷ್ಟು ಕೆಲಸ ಮಾಡಿದ್ದೇವೆ. ತಡ ರಾತ್ರಿವರೆಗೂ ಜನರ ಸಮಸ್ಯೆಗಳಿಗೆ ಸ್ಪಂದಿಸಿದ್ದೇನೆ. ಎಡನೇ ಬಾರಿ ನನಗೆ ಹೃದಯ ಶಸ್ತ್ರ ಚಿಕಿತ್ಸೆಯಾದಾಗ ವೈದ್ಯರ ಸಲಹೆಯಂತೆ ಗ್ರಾಮ ವಾಸ್ತವ್ಯ ನಿಲ್ಲಿಸಲಾಗಿತ್ತು ಎಂದು ಹೇಳಿದರು. ಜೂನ್ 28-29 ಕ್ಕೆ ಗುರುಮಿಠಕಲ್, ಅಫ್ಜಲ್‍ಪುರದಲ್ಲಿ ಗ್ರಾಮ ವಾಸ್ತವ್ಯ ಮಾಡುತ್ತಿದ್ದೇನೆ. ನಾನು ಯಾರನ್ನು ಮೆಚ್ಚಿಸಲು ಈ ಕಾರ್ಯಕ್ರಮ ಮಾಡುತ್ತಿಲ್ಲ ಎಂದರು.
ಸುವರ್ಣ ಗ್ರಾಮೋದಯ ಯೋಜನೆ, ರೈತರ ಸಾಲದಂತಹ ಯೋಜನೆಗಳು ಜಾರಿಗೆ ಬಂದಿದ್ದು ಗ್ರಾಮ ವಾಸ್ತವ್ಯದಿಂದ. ಈ ಬಾರಿ ಗ್ರಾಮ ವಾಸ್ತವ್ಯ ಬೆಳಗ್ಗೆ 10 ಗಂಟೆಯಿಂದ ಆರಂಭಗೊಳ್ಳುತ್ತದೆ. ಜಿಲ್ಲಾಧಿಕಾರಿ ಸೇರಿ ಎಲ್ಲಾ ಅಧಿಕಾರಿಗಳು ಅಲ್ಲಿರುತ್ತಾರೆ. ಸ್ಥಳದಲ್ಲೇ ಎಲ್ಲರ ಸಮಸ್ಯೆಗಳಿಗೂ ಪರಿಹಾರ ದೊರಕಿಸಿಕೊಡುವ ಪ್ರಯತ್ನ ಮಾಡಲಾಗುವುದು ಎಂದರು.
ನನ್ನ ಕಾರ್ಯಕ್ರಮಗಳ ಬಗ್ಗೆ ಲಘುವಾಗಿ ಮಾತನಾಡುವುದನ್ನು ಬಿಡಿ. ಮನೆಯಲ್ಲಿ, ಸ್ಟಾರ್ ಹೋಟೆಲ್‍ನಲ್ಲಿ ನಿದ್ದೆ ಬರುತ್ತಿಲ್ಲ ಎಂದು ನಾನು ಸರ್ಕಾರಿ ಶಾಲೆಯಲ್ಲಿ ಮಲಗುತ್ತಿಲ್ಲ. ಅಲ್ಲಿ ತಂಗುವುದರಿಂದ ಶಾಲೆಯ ಮೂಲ ಸೌಲಭ್ಯಗಳು ವೃದ್ಧಿಯಾಗಲಿವೆ ಎಂದು ಬಿಜೆಪಿ ನಾಯಕರ ಹೇಳಿಕೆಗೆ ತಿರುಗೇಟು ನೀಡಿದರು.
ಅಲ್ಪಸಂಖ್ಯಾತರು ನಮ್ಮ ಪಕ್ಷಕ್ಕೆ ಮತ ಹಾಕಲಿಲ್ಲ. ನಮಗೆ ಮತ ಹಾಕಿದ್ದರೆ ಬಿಜೆಪಿ ಹೆಚ್ಚು ಸೀಟು ಗೆಲ್ಲುತ್ತಿರಲಿಲ್ಲ. ಆಪರೇಷನ್ ಕಮಲದ ಭೀತಿಯೂ ಇರುತ್ತಿರಲಿಲ್ಲ. ಕಾರ್ಯಕರ್ತರಿಗೆ ನೋವು ಮಾಡಿ ಕಾಂಗ್ರೆಸ್ ಜೊತೆ ಕೈ ಜೋಡಿಸಿದ್ದೇವೆ. ಈ ನೋವಿನಿಂದ ನಾನು ಹಿಂದೆ ಜೆಪಿ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಣ್ಣೀರಿಟ್ಟಿದ್ದೆ. ಆದರೆ ಅದನ್ನು ಮೊಸಳೆ ಕಣ್ಣೀರು ಎಂದು ವಿರೋಧ ಪಕ್ಷದವರು ಟೀಕಿಸಿದರು. ತಾಜ್ ವೆಸ್ಟೆಂಡ್ ನಲ್ಲಿದ್ದರೂ ಟೀಕೆ ಮಾಡುತ್ತೀರಿ. ಗ್ರಾಮ ವಾಸ್ತವ್ಯ ಮಾಡಿದ್ರೂ ಟೀಕೆ ಮಾಡುತ್ತೀರಿ. ಇನ್ನೇನು ಮಾಡಬೇಕೆಂದು ನೀವೆೇ(ಬಿಜೆಪಿಯವರು) ಹೇಳಿ ಎಂದು ಪ್ರಶ್ನಿಸಿದರು.