ಬೆಂಗಳೂರು: ಅಪ್ಪುನನ್ನು ನೆನೆದು ಅಭಿಮಾನಿಗಳು ಕಣ್ಣೀರು ಹಾಕುವುದು ಬೇಡ. ಅದರ ಬದಲಿಗೆ ಅಪ್ಪು ಹೆಸರಿನಲ್ಲಿ ಎಲ್ಲರೂ ಒಂದೊಂದು ಗಿಡ ನೆಡೋಣ. ಈ ಮೂಲಕ ಪರಿಸರ ರಕ್ಷಣೆಯ ಕಾರ್ಯದಲ್ಲಿ ತೊಡಗೋಣ ಎಂದು ನಟ, ಪುನೀತ್ ಸಹೋದರ ರಾಘವೇಂದ್ರ ರಾಜ್‍ಕುಮಾರ್ ಕರೆ ನೀಡಿದರು.
ಅದಮ್ಯ ಚೇತನ ಸಂಸ್ಥೆ ವತಿಯಿಂದ ಇಂದು 325ನೇ ಹಸಿರು ಭಾನುವಾರ ಕಾರ್ಯಕ್ರಮವನ್ನು ಎಚ್‍ಎಸ್‍ಆರ್ ಲೇಔಟ್‍ನಲ್ಲಿರುವ ಸ್ವಾಭಿಮಾನ್ ಪಾರ್ಕ್‌ನಲ್ಲಿ ದಿ. ಅನಂತಕುಮಾರ್ ನೆನಪಿನಲ್ಲಿ ಮತ್ತು ನಟ ದಿ. ಡಾ. ಪುನೀತ್ ರಾಜ್‍ಕುಮಾರ್ ಅವರ ಜನ್ಮದಿನಾಚರಣೆ ಸ್ಮರಣಾರ್ಥವಾಗಿ ಗಿಡ ನೆಡುವ ಕಾರ್ಯಕ್ರಮದಲ್ಲಿ ಗಿಡ ನೆಟ್ಟು ಮಾತನಾಡಿದರು.
ಭೂಮಿಯನ್ನು ಮನುಷ್ಯ ತನ್ನದು ಎಂದುಕೊಂಡಿದ್ದಾನೆ. ನಮಗೋಸ್ಕರ ಮಾಡಿದ್ದು ಎಂದುಕೊಂಡಿದ್ದಾನೆ. ಆದರೆ ಈ ಭೂಮಿಯ ಮೇಲೆ ಕೋಟ್ಯಂತರ ಜೀವರಾಶಿಗಳಿವೆ. ಅವುಗಳನ್ನು ತಮ್ಮದೆಂದು ಭಾವಿಸಿ ಅವುಗಳ ಉಳಿವಿಗೆ ಅನುವು ಮಾಡಿಕೊಡಬೇಕಾದ್ದ ನಮ್ಮ ಕರ್ತವ್ಯವಲ್ಲವೇ. ನಾನು ಈ ಕಾರ್ಯಕ್ರಮಕ್ಕೆ ರಾಘವೇಂದ್ರ ರಾಜ್‍ಕುಮಾರ್ ಅಗಿ ಬಂದಿಲ್ಲ. ಅದಮ್ಯ ಚೇತನ ಕುಟುಂಬದ ಸದಸ್ಯನಾಗಿ, ಪುನೀತ್ ರಾಜ್‍ಕುಮಾರ್ ಪ್ರತಿನಿಧಿಯಾಗಿ ಬಂದಿದ್ದೇನೆ. ಈವರೆಗೆ ಸಿನಿಮಾ ನೋಡಿ ಸಹಕರಿಸುತ್ತಿದ್ದ ಅಭಿಮಾನಿಗಳು ಗಿಡ ನೆಡುವ ಕಾರ್ಯಕ್ಕೂ ಸಹಕಾರ ನೀಡುತ್ತಾರೆ ಎಂಬ ನಂಬಿಕೆ ಇದೆ ಎಂದರು.
ಎಲ್ಲಾ ಸೇವೆಗಳಿಗಿಂತ ಪರಿಸರ ಕಾಪಾಡುವುದು ದೊಡ್ಡ ಸೇವೆ. ಇದನ್ನು ಅದಮ್ಯ ಚೇತನ ಹಲವು ವರ್ಷಗಳಿಂದ ಮಾಡುತ್ತಾ ಬಂದಿರುವುದು ಆದರ್ಶವಾಗಿದೆ. ಇದರಿಂದ ಜನರಿಗೆ ನೆರಳು ಕೊಡುತ್ತದೆ ಎಂಬುದಲ್ಲ, ಪ್ರಾಣಿ-ಪಕ್ಷಿಗಳಿಂದ ಹಿಡಿದು ಸಕಲ ಜೀವರಾಶಿಗೂ ಇದು ನೆರವಾಗುತ್ತದೆ. ಹೀಗಾಗಿ ಅಭಿಮಾನಿಗಳೆಲ್ಲರೂ ಗಿಡ ನೆಟ್ಟು, ಅದಮ್ಯ ಚೇತನದ ಕೆಲಸಕ್ಕೆ ನಾವೂ ಕೈ ಜೋಡಿಸೋಣ ಎಂದು ಕರೆ ನೀಡಿದರು.
ಇದನ್ನೂ ಓದಿ: ಸಿಲಿಕಾನ್ ಸಿಟಿಯಲ್ಲಿ ಮೋಡ ಕವಿದ ವಾತಾವರಣ, ಹಲವೆಡೆ ಮಳೆ
ಈವರೆಗೆ ನಾವು ಸಿನಿಮಾ ಮಾಡುತ್ತಿದ್ದೆವು. ಅದು ನಮ್ಮ ಜೀವನಕ್ಕಾಗಿ ಮಾಡುತ್ತಿದ್ದೆವು. ಆದರೆ ಇದು ಸಮಾಜಕ್ಕಾಗಿ ಮಾಡುವಂಥದ್ದು. ನಮ್ಮ ತಂದೆಯವರು ಬಂಗಾರದ ಮನುಷ್ಯ, ಮಣ್ಣಿನ ಮಗನಂತಹ ಸಿನಿಮಾಗಳನ್ನು ಮಾಡಿದ್ದಾರೆ. ಅದರ ಉದ್ದೇಶ ಆಗ ಅರಿಯಲಿಲ್ಲ. ಏನೋ ಸಿನಿಮಾ ಅನ್ನುವ ರೀತಿ ಸ್ವೀಕರಿಸಿದೆವು. ಮಣ್ಣು, ಕೃಷಿಯನ್ನು ಕಾಪಾಡುವ, ಸಂರಕ್ಷಿಸುವ ಕೆಲಸ ಮಾಡಬೇಕು ಎಂಬ ಒಳ್ಳೆಯ ಸಂದೇಶವನ್ನು ಹೊತ್ತು ಆ ಸಿನಿಮಾಗಳನ್ನು ಮಾಡಿದರು. ಅದನ್ನು ಅರಿತು ನನ್ನ ಸೋದರ ಕೂಡ ಭೂಮಿಗೆ ಏನಾದರೂ ಮಾಡಬೇಕು ಎಂದು ಗಂಧದ ಗುಡಿ ಸಿನಿಮಾ ಮಾಡುತ್ತಿದ್ದು, ಅದು ತಯಾರಿ ಹಂತದಲ್ಲಿದೆ. ಅದು ಸಿದ್ಧವಾದ ನಂತರ ಒಂದು ದೊಡ್ಡ ಸಂದೇಶ ಈ ಸಮಾಜಕ್ಕೆ ಅದರಿಂದ ಸಿಗುತ್ತದೆ ಎಂದು ರಾಘವೇಂದ್ರ ರಾಜ್‍ಕುಮಾರ್ ನುಡಿದರು.
ಬಳಿಕ ಅದಮ್ಯ ಚೇತನದ ಅಧ್ಯಕ್ಷೆ ಡಾ. ತೇಜಸ್ವಿನಿ ಅನಂತಕುಮಾರ್ ಮಾತನಾಡಿ, ಅನಂತಕುಮಾರ್ ಮತ್ತು ಪುನೀತ್‍ರಾಜ್‍ಕುಮಾರ್ ಈ ಸಮಾಜದ ಎರಡು ಕಣ್ಣುಗಳಾಗಿದ್ದವು. ಅವುಗಳನ್ನು ಕಳೆದುಕೊಂಡಿದ್ದರೂ ಇದೀಗ ಮರ, ಗಿಡಗಳನ್ನು ನೆಟ್ಟು ಬೆಳೆಸುವ ಮೂಲಕ ಅವರ ಸೇವೆಯನ್ನು ಸಾರ್ಥಕಗೊಳಿಸಲು ಮುಂದಾಗಿದ್ದೇವೆ. ರಾಘವೇಂದ್ರ ರಾಜ್‍ಕುಮಾರ್ ಒಬ್ಬ ಕಾರ್ಯಕರ್ತನಾಗಿ ಬಂದು ಗಿಡ ನೆಟ್ಟಿದ್ದಾರೆ. ಅನಂತಕುಮಾರ್ ಅವರಿಗೆ ರಾಜ್ ಕುಟುಂಬದ ಬಗ್ಗೆ ಒಳ್ಳೆಯ ಗೌರವ, ಅಭಿಮಾನ ಇತ್ತು. ರಾಜ್‍ಕುಮಾರ್ ಸೇರಿದಂತೆ ಅವರು ಕುಟುಂಬ ವರ್ಗ ಸಿನಿಮಾಗೆ ಮಾತ್ರ ಸೇವೆಯನ್ನು ಸೀಮಿತಗೊಳಿಸಲಿಲ್ಲ. ಚಿತ್ರರಂಗದಲ್ಲಿರುವವರು ಸಮಾಜ ಸೇವೆಯನ್ನು ಹೇಗೆ ಮಾಡಬಹುದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ ಎಂದರು.