ಬೆಂಗಳೂರು: ಅಚ್ಚರಿ ಬೆಳವಣಿಗೆ ಎಂಬಂತೆ ಡಿಎಂಕೆ ಪಾರ್ಟಿಯೂ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ವ್ಯಕ್ತಪಡಿಸಿದೆ. ಡಿಎಂಕೆ ಪಕ್ಷದ ಎಲ್ಲಾ ನಾಯಕರು ಕೆಪಿಸಿಸಿ ಕಚೇರಿಯಲ್ಲಿ ಒಟ್ಟಿಗೆ ಸೇರಿ ಸುದ್ದಿಗೋಷ್ಠಿ ನಡೆಸಿ ಈ ವಿಚಾರ ತಿಳಿಸಿದ್ದಾರೆ.
ಕಾಂಗ್ರೆಸ್ ಮುಖಂಡ ಕೆ. ಪ್ರಕಾಶ್ ಮಾತನಾಡಿ, ಬೆಂಗಳೂರಿನ ಮೂರು ಕ್ಷೇತ್ರಗಳು, ಚಾಮರಾಜನಗರ, ಶಿವಮೊಗ್ಗ, ಭದ್ರಾವತಿ, ಕೋಲಾರ, ಚಿಕ್ಕಮಗಳೂರು, ಕೊಡಗು ಸೇರಿದಂತೆ ರಾಜ್ಯದ ಬಹುತೇಕ ಕಡೆ ಡಿಎಂಕೆ ಅಸ್ತಿತ್ವ ಇದೆ. ಲೋಕಸಭಾ ಚುನಾವಣಾ ಹಿನ್ನೆಲೆ ಕೆಪಿಸಿಸಿ ಅಧ್ಯಕ್ಷರು, ಡಿಎಂಕೆ ಅಧ್ಯಕ್ಷ ಸ್ಟಾಲಿನ್ ಅವರಿಗೆ ತಮ್ಮ ಪಕ್ಷಕ್ಕೆ ಬೆಂಬಲ ನೀಡುವಂತೆ ಮನವಿ ಮಾಡಿದ್ದರು. ಅದರಂತೆ ರಾಜ್ಯದ ಡಿಎಂಕೆ ಪಕ್ಷ ಕಾಂಗ್ರೆಸ್, ಜೆಡಿಎಸ್ಗೆ ಸಹಕಾರ ನೀಡಲಿದೆ ಎಂದು ತಿಳಿಸಿದ್ರು.
ಗುರಪ್ಪ ನಾಯ್ಡು ಮಾತನಾಡಿ, ತಮಿಳುನಾಡಿನಲ್ಲಿ ಪೂರ್ವನಿರ್ಧಾರಿತ ಮೈತ್ರಿಯಿದೆ. ಕರ್ನಾಟಕದಲ್ಲಿ ಅದರಲ್ಲಿಯೂ ಬೆಂಗಳೂರಿನಲ್ಲಿ ಕನ್ನಡಿಗರು ಬಿಟ್ಟರೆ ಹೆಚ್ಚು ಜನರು ತಮಿಳು ಭಾಷಿಕರೆ. ಡಿಎಂಕೆ ಸಮರ್ಥ ಪಕ್ಷ. ತಮಿಳಿನಾಡಿನಲ್ಲಿ 39 ಸೀಟು ಕಾಂಗ್ರೆಸ್ ಲೀಡ್ ಬರಲಿದೆ. ಡಿಎಂಕೆ ಕಾಂಗ್ರೆಸ್-ಜೆಡಿಎಸ್ ಪರ ಕ್ಯಾಂಪೇನ್ ಮಾಡಲಿದೆ ಎಂದರು. ಪೆರಿಯಸ್ವಾಮಿ ಮಾತನಾಡಿ, ಜನಸಾಮಾನ್ಯರ ಬದುಕನ್ನು ಮೋದಿ ಬೀದಿಗೆ ತಂದಿದ್ದಾರೆ. ಬಿಜೆಪಿ ತೊಲಗಿಸಲು ಡಿಎಂಕೆ ಕಾಂಗ್ರೆಸ್ಗೆ ಬೆಂಬಲ ನೀಡಿದೆ. ಮೈತ್ರಿಕೂಟದ ಅಭ್ಯರ್ಥಿಗಳ ಗೆಲುವಿಗೆ ಮನೆ ಮನೆ ಪ್ರಚಾರ ಮಾಡುತ್ತೇವೆ ಎಂದರು.
ರಾಮಸ್ವಾಮಿ ಮಾತನಾಡಿ, ಐಟಿ ದಾಳಿನಡೆಸುವುದು ಅನ್ಯಾಯ. ಆದ್ರೆ ತಮಿಳುನಾಡು ಪಶ್ಚಿಮ ಬಂಗಾಳ, ಕರ್ನಾಟಕದಲ್ಲಿ ಬಿಜೆಪಿ ವಿರೋಧ ಪಕ್ಷಗಳ ನಾಯಕರ ಮೇಲೆ ಐಟಿ ದಾಳಿ ಮಾಡಲಾಗಿದೆ. ಇದನ್ನೆಲ್ಲ ತಡೆಯಲು ಮೊದಲು ಮೋದಿಯನ್ನು ತಡೆಗಟ್ಟಬೇಕು. ಇದೇ ಸಂದರ್ಭ ದಕ್ಷಿಣಮೂರ್ತಿ ಎಐಸಿಸಿ ಕಾರ್ಯದರ್ಶಿ ಸೂರಜ್ ಹೆಗಡೆ ನಾಯ್ಡು ಉಪಸ್ಥಿತರಿದ್ದರು.