ಬೆಂಗಳೂರು: ಕೆಪಿಸಿಸಿ ಅಧ್ಯಕ್ಷರಾಗಿ ಅಧಿಕೃತವಾಗಿ ಪದಗ್ರಹಣ ಮಾಡಲು ಹಮ್ಮಿಕೊಂಡಿರುವ ಪ್ರತಿಜ್ಞಾವಿಧಿ ಕಾರ್ಯಕ್ರಮಕ್ಕೆ ಜೂನ್ 14ರಂದು ಅವಕಾಶ ಮಾಡಿಕೊಡುವಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.
ಇಂದು ಈ ಸಂಬಂಧ ಸಿಎಂ ಬಿ.ಎಸ್.ಯಡಿಯೂರಪ್ಪ ಹಾಗೂ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯ್ ಭಾಸ್ಕರ್ ಅವರಿಗೆ ಪತ್ರ ಬರೆದು ಮನವಿ ಮಾಡಿಕೊಂಡಿದ್ದಾರೆ. ಪತ್ರದಲ್ಲಿ ತಮಗೆ ತಿಳಿದಿರುವಂತೆ ನನ್ನನ್ನು ಕಾಂಗ್ರೆಸ್ ಪಕ್ಷದ ರಾಜ್ಯಾಧ್ಯಕ್ಷನಾಗಿ ಅಖಿಲ ಭಾರತ ಕಾಂಗ್ರೆಸ್ ಸಮಿತಿ ನೇಮಕ ಮಾಡಿದ್ದು, ನಂತರ ಕೋವಿಡ್-19 ಕಾರಣ ಸರ್ಕಾರವು ಲಾಕ್‌ಡೌನ್ ಘೋಷಣೆ ಮಾಡಿದ್ದರಿಂದ ನಾನು ಪದಗ್ರಹಣ ಮಾಡಲು ಸಾಧ್ಯವಾಗಿರಲಿಲ್ಲ. ಲಾಕ್‌ಡೌನ್ ಅವಧಿ ಬೇಗನೆ ಮುಗಿಯುವ ನಿರೀಕ್ಷೆಯಲ್ಲಿದ್ದ ನಾನು ಮೇ 31ರಂದು ಈ ಕಾರ್ಯಕ್ರಮ ಇಟ್ಟುಕೊಂಡಿದ್ದೆ. ಆದರೆ ಲಾಕ್‌ಡೌನ್ ಅವಧಿ ಮುಂದುವರೆದ ಕಾರಣ ಅದನ್ನು ರದ್ದು ಮಾಡಿ, ಜೂನ್ 7ರಂದು ಪದಗ್ರಹಣಕ್ಕೆ ಎಲ್ಲಾ ತಯಾರಿ ಮಾಡಿದ್ದೆವು. ಆದರೆ ಕೇಂದ್ರ ಸರ್ಕಾರವು ಲಾಕ್‌ಡೌನ್ ಅವಧಿಯನ್ನು ಮತ್ತೆ ವಿಸ್ತರಿಸಿದ ಕಾರಣ ಈ ಕಾರ್ಯಕ್ರಮ ಮುಂದೂಡಿದ್ದೇವೆ ಎಂದು ವಿವರಿಸಿದ್ದಾರೆ.
ಆದರೆ ನನ್ನ ನೇಮಕಾತಿಯಾಗಿ ಸುಮಾರು ಮೂರು ತಿಂಗಳು ಮುಗಿದಿದ್ದು, ಇನ್ನಷ್ಟು ಕಾಯಲು ಸಾಧ್ಯವೇ ಇಲ್ಲದ ಕಾರಣ ಜೂನ್ 14ರಂದು ನನ್ನ ಪದಗ್ರಹಣ ಕಾರ್ಯಕ್ರಮ ಏರ್ಪಡಿಸುವಂತೆ ಪಕ್ಷದ ಹಿರಿಯ ನಾಯಕರ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಲಾಕ್‌ಡೌನ್ ಅವಧಿ ಜಾರಿಯಲ್ಲಿದ್ದರೂ ಅದರ ಎಲ್ಲಾ ನಿಯಮ ಮತ್ತು ನಿಬಂಧನೆಗಳನ್ನು ಪಾಲಿಸಿ ಈ ಕಾರ್ಯಕ್ರಮವನ್ನು ನಾವು ನಡೆಸುತ್ತೇವೆ. ಬೆಂಗಳೂರಿನ ಕೆಪಿಸಿಸಿ ಕಚೇರಿ ಮುಂದೆ ಕೇವಲ 150 ಮಂದಿ ನಾಯಕರ ಸಮ್ಮುಖದಲ್ಲಿ ಈ ಕಾರ್ಯಕ್ರಮ ನೆರವೇರಿಸುತ್ತೇವೆ. ರಾಜ್ಯಾದ್ಯಂತ ಪ್ರತಿಯೊಂದು ಗ್ರಾಮ ಪಂಚಾಯಿತಿ, ಮುನಿಸಿಪಾಲಿಟಿ/ಕಾರ್ಪೋರೇಷನ್ ವಾರ್ಡ್ ಹಾಗೂ ಜಿಲ್ಲಾ ಮತ್ತು ಬ್ಲಾಕ್ ಕಾಂಗ್ರೆಸ್ ಸಮಿತಿಗಳ ಕಾರ್ಯಾಲಯಗಳಲ್ಲಿ ಅದರ ನೇರ ಪ್ರಸಾರ ಮಾಡಲಾಗುತ್ತದೆ. ಎಲ್ಲಾ ಕಡೆ ಸ್ಥಳೀಯ ನಾಯಕರು ಮತ್ತು ಕಾರ್ಯಕರ್ತರು ಲಾಕ್‌ಡೌನ್ ನಿಯಮಗಳನ್ನು ಪಾಲಿಸಿಕೊಂಡೇ ಅದನ್ನು ವೀಕ್ಷಣೆ ಮಾಡಲಿದ್ದಾರೆ ಎಂದು ತಿಳಿಸಿದ್ದಾರೆ.
ಮನವಿ ಪರಿಗಣಿಸಿ ಇಂತಹ ಸಭೆಗಳನ್ನು ಲಾಕ್‌ಡೌನ್ ಸಂದರ್ಭದಲ್ಲೇ ರಾಷ್ಟ್ರದ ಬೇರೆ ಬೇರೆ ಕಡೆಗಳಲ್ಲಿ ಇತರರು ಆಯೋಜಿಸಿ ನಡೆಸಿದ ವಿಚಾರ ತಮ್ಮ ಗಮನಕ್ಕೆ ಬಂದಿರಬಹುದು. ಆದುದರಿಂದ ನನ್ನ ಈ ಮೇಲಿನ ಮನವಿಯನ್ನು ತಾವು ದಯವಿಟ್ಟು ಪರಿಗಣಿಸಿ, ನಾವು ಹಮ್ಮಿಕೊಂಡಿರುವ ಈ ಪ್ರಮುಖ ಮತ್ತು ಅಗತ್ಯ ಕಾರ್ಯಕ್ರಮವನ್ನು ನಡೆಸಲು ಅನುಮತಿ ನೀಡಬೇಕಾಗಿ ತಮ್ಮಲ್ಲಿ ಮನವಿ ಮಾಡುತ್ತೇನೆ ಎಂದು ಮುಖ್ಯಮಂತ್ರಿ ಬಿಎಸ್ವೈ ಹಾಗೂ ಸರ್ಕಾರದ ಮುಖ್ಯ ಕಾರ್ಯದರ್ಶಿ ವಿಜಯ್ ಭಾಸ್ಕರ್ ಅವರಲ್ಲಿ ಮನವಿ ಮಾಡಿದ್ದಾರೆ.