ಬೆಂಗಳೂರು: ತಾವು ಉತ್ಪಾದಿಸಿದ ರೇಷ್ಮೆ ಗೂಡುಗಳನ್ನು ವಿಲೇವಾರಿ ಮಾಡಲಾಗದೇ ತೀವ್ರ ಸಂಕಷ್ಟ ಅನುಭವಿಸುತ್ತಿರುವ ರಾಜ್ಯದ ರೇಷ್ಮೆ ಬೆಳೆಗಾರರು, ಇದರಿಂದ ಪರೋಕ್ಷ ಹೊಡೆತಕ್ಕೆ ಸಿಕ್ಕಿ ನಲುಗುತ್ತಿರುವ ರೇಷ್ಮೆ ಬಿಚ್ಚಣಿಕೆದಾರರ ನೆರವಿಗೆ ಸರ್ಕಾರ ಬರಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸಿಎಂ ಯಡಿಯೂರಪ್ಪಗೆ ಆಗ್ರಹಿಸಿದ್ದಾರೆ.
ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಪತ್ರ ಬರೆದಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ರಾಮನಗರ, ಚನ್ನಪಟ್ಟಣ, ಕನಕಪುರ, ಮಾಗಡಿ, ಕುಣಿಗಲ್, ಮಳವಳ್ಳಿ, ಮಂಡ್ಯ, ತುಮಕೂರು ಸೇರಿದಂತೆ ರಾಜ್ಯದ ಅನೇಕ ಕಡೆ ರೇಷ್ಮೆ ಬೆಳೆಗಾರರು ಗೂಡುಗಳನ್ನು ಉತ್ಪಾದಿಸಿಟ್ಟಿದ್ದಾರೆ. ಆದರೆ, ಕೊರೊನಾ ಸೋಂಕು ನಿಯಂತ್ರಣಕ್ಕೆ ಹೇರಿರುವ ಲಾಕ್ಡೌನ್ನಿಂದಾಗಿ ರೈತರು ರೇಷ್ಮೆ ಗೂಡುಗಳನ್ನು ಮಾರುಕಟ್ಟೆಗಳಿಗೆ ತೆಗೆದುಕೊಂಡು ಹೋಗಲು ಆಗುತ್ತಿಲ್ಲ. ಒಂದು ಕಡೆ ಮಾರುಕಟ್ಟೆ ಬಂದ್ ಆಗಿದೆ. ಇನ್ನೊಂದೆಡೆ ರೈತರು ಮನೆಯಿಂದ ಹೊರಗೆ ಕಾಲಿಡಲಾಗುತ್ತಿಲ್ಲ. ಇದರಿಂದ ಉತ್ಪನ್ನ ಹಾಳಾಗುತ್ತಿದೆ. ಜತೆಗೆ ರೇಷ್ಮೆ ಬಿಚ್ಚಾಣಿಕೆದಾರರು ಸಹ ಕೆಲಸವಿಲ್ಲದೇ ದಿನನಿತ್ಯದ ಬದುಕಿಗೆ ಪರಿತಪಿಸುತ್ತಿದ್ದಾರೆ. ಹೀಗಾಗಿ ರಾಜ್ಯ ಸರ್ಕಾರವೇ ರೈತರಿಂದ ರೇಷ್ಮೆ ಗೂಡುಗಳನ್ನು ಸಂಗ್ರಹಿಸಲು ವ್ಯವಸ್ಥೆ ಮಾಡಬೇಕು. ಇಲ್ಲವೆ ರೈತರೇ ರೇಷ್ಮೆ ಮಾರುಕಟ್ಟೆಗಳಿಗೆ ಗೂಡುಗಳನ್ನು ತಂದು ಬಿಕರಿ ಮಾಡಲು ವ್ಯವಸ್ಥೆ ಕಲ್ಪಿಸಬೇಕು ಎಂದು ತಿಳಿಸಿದ್ದಾರೆ.
ಕೊರೊನಾ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮ ಅಗತ್ಯ ಎಂಬುದು ಸರಿ. ಆದರೆ, ಅದರಿಂದ ರೈತರ ಉತ್ಪನ್ನಗಳು ನಾಶವಾಗಬಾರದು. ಹಾಗೇನಾದರೂ ಆದರೆ ಯಾರಿಗೂ ಲಾಭವಾಗದೆ ರಾಷ್ಟ್ರೀಯ ನಷ್ಟ ಆಗುತ್ತದೆ. ರಾಜ್ಯದಲ್ಲಿ ರೇಷ್ಮೆ ಬೆಳೆಗಾರರು ಹೆಚ್ಚಾಗಿದ್ದಾರೆ. ರೈತರ ಸಂಕಷ್ಟವೇನೆಂಬುದು ನನಗೆ ಚೆನ್ನಾಗಿ ಗೊತ್ತು. ರೇಷ್ಮೆ ಗೂಡು ಹಾಳಾಗಬಾರದು. ಹೀಗಾಗಿ ರೇಷ್ಮೆಗೂಡು ವಿಲೆವಾರಿಗೆ ರಾಜ್ಯ ಸರ್ಕಾರ ಮಾರುಕಟ್ಟೆ ಒದಗಿಸಬೇಕು. ರೇಷ್ಮೆನೂಲು ಬಿಚ್ಚಣಿಕೆದಾರರ ಸಂಕಷ್ಟಕ್ಕೆ ಸ್ಪಂದಿಸಬೇಕು ಎಂದು ಒತ್ತಾಯಿಸಿದ್ದಾರೆ.