ಬೆಂಗಳೂರು: ಉತ್ತರ ಕರ್ನಾಟಕ ಅತಿವೃಷ್ಟಿಯಿಂದ ಅಸ್ತವ್ಯಸ್ತಗೊಂಡಿದ್ದು, ಸಿಎಂ ಬಿ.ಎಸ್.ಯಡಿಯೂರಪ್ಪ ದೆಹಲಿಯಲ್ಲಿ ಠಿಕಾಣಿ ಹೂಡಿರುವುದು ಸರಿಯಲ್ಲ ಎಂದು ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಬೆಂಗಳೂರಿನ ಸದಾಶಿವನಗರದ ನಿವಾಸದಲ್ಲಿ ಮಾತನಾಡಿದ ಅವರು, ಇದೇ ಯಡಿಯೂರಪ್ಪನವರ ಸ್ಟೈಲ್. ನಮ್ಮನ್ನೆಲ್ಲ ದೆಹಲಿ ಹೈಕಮಾಂಡ್ ಎಂದು ಟೀಕಿಸುತಿದ್ದರು. ಈಗ ಅವರೂ ಅದನ್ನೇ ಮಾಡ್ತಿದ್ದಾರೆ. ಯಡಿಯೂರಪ್ಪನವರಿಗೆ ಏನು ಕಷ್ಟ ಇದೆಯೋ. ಅವರು ಬಹಳ ಆತುರದಲ್ಲಿದ್ದಾರೆ. ಅವರ ಆತುರವನ್ನ ಜನ ಗಮನಿಸುತ್ತಿದ್ದಾರೆ ಎಂದರು.
ಒನ್ ಮ್ಯಾನ್ ಶೋ :
ಸರ್ಕಾರ ಬಂದು 10 ದಿನ ಕಳೆದರೂ ಒನ್ ಮ್ಯಾನ್ ಶೋ ಆಗಿದೆ. ಪಾಪ ಅವರಂತೆ ಆತುರದಲ್ಲಿ ನಾನು ಏನನ್ನೂ ಹೇಳಲ್ಲ. ಎಲ್ಲವನ್ನೂ ರಾಜ್ಯದ ಜನರೇ ಗಮನಿಸುತ್ತಾರೆ ಎಂದಿದ್ದಾರೆ. ಇನ್ನು ಗೋಕಾಕ್ ಕಾಂಗ್ರೆಸ್ ಮುಖಂಡರ ಭೇಟಿ ವಿಚಾರ ಮಾತನಾಡಿ, ಹಲವು ಕಡೆಯವರು ಹುಡುಕಿಕೊಂಡು ಬರುತ್ತಾರೆ. ತಮ್ಮ ತಮ್ಮ ಸಮಸ್ಯೆಗಳನ್ನ ಹೇಳಿಕೊಳ್ತಾರೆ. ಅವರ ಸಮಸ್ಯೆಗಳನ್ನ ಪರಿಹರಿಸುವ ಪ್ರಯತ್ನ ಮಾಡ್ತೇನೆ. ಗೋಕಾಕ್ ಟಿಕೆಟ್ ಯಾರಿಗೆ ಅಂತ ನಾನು ಹೇಗೆ ಹೇಳೋದು. ನಮ್ಮ ನಾಯಕರು ತೀರ್ಮಾನ ಮಾಡ್ತಾರೆ. ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ನೋಡಿಕೊಳ್ತಾರೆ. ವೈಯಕ್ತಿಕವಾಗಿ ನಾನು ಏನೂ ಮಾತನಾಡಲ್ಲ ಎಂದರು.
ಕೇಂದ್ರದ ಮಾಜಿ ಸಚಿವೆ ಸುಷ್ಮಾ ಸ್ವರಾಜ್ ನಿಧನಕ್ಕೆ ಸಂತಾಪ ಸೂಚಿಸಿದ ಅವರು, ಅವರೊಬ್ಬ ಉತ್ತಮ ಸಂಸದೀಯ ಪಟುವಾಗಿದ್ದರು. ಒಬ್ಬ ಹೆಣ್ಣುಮಗಳಾಗಿ ಸವಾಲನ್ನ ಮೆಟ್ಟಿ ನಿಂತವರು. ಪಂಜಾಬ್, ಹರಿಯಾಣದಲ್ಲಿ ಉತ್ತಮ ಸಂಘಟಕಿಯಾಗಿದ್ದರು. ಅವರಲ್ಲಿ ನಾನು ವಿಶೇಷ ಗುಣವನ್ನ ಕಂಡಿದ್ದೆ. ಅವರ ಆದರ್ಶ ಜೀವನ ಮುಂದಿನವರಿಗೆ ದಾರಿದೀಪ. ಅವರಿಗೆ ಸಾವು ಬರುವಂತಹ ವಯಸ್ಸಾಗಿರಲಿಲ್ಲ. ದೆಹಲಿ ಚುನಾವಣೆ ವೇಳೆ ಸುಷ್ಮಾ ಸ್ವರಾಜ್ ಅವರ ಎದುರು ನಿಂತು ಕೆಲಸ ಮಾಡಿದ್ದೆ. ಅವರೆಂದೂ ವಿರೋಧ ಪಕ್ಷದವರನ್ನ ತುಚ್ಚವಾಗಿ ಕಂಡಿರಲಿಲ್ಲ. ನಮ್ಮ ಬಳ್ಳಾರಿಯಲ್ಲೂ ಚುನಾವಣೆಗೆ ನಿಂತಿದ್ದರು. ಅವರ ಆತ್ಮಕ್ಕೆ ದೇವರು ಶಾಂತಿ ನೀಡಲಿ ಎಂದು ಡಿಕೆಶಿ ಪ್ರಾರ್ಥಿಸಿಕೊಂಡರು.