ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಇಂದು ವಿವಿಧ ಮುಖಂಡರ ಜೊತೆ ಸಭೆ ನಡೆಸಲಿದ್ದಾರೆ.
ಪಕ್ಷ ಸಂಘಟನೆ, ಮುಂಬರುವ ದಿನಗಳಲ್ಲಿ ನಡೆಯುವ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಗೆಲುವು ಸಾಧಿಸುವುದು, ಪಕ್ಷವನ್ನು ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಬಲಪಡಿಸುವುದು, ಕಾರ್ಯಕರ್ತರ ಆತ್ಮವಿಶ್ವಾಸ ಹೆಚ್ಚಿಸುವ ಜೊತೆಗೆ ತಳಮಟ್ಟದಿಂದ ಪಕ್ಷವನ್ನು ಕಟ್ಟುವ ಸಂಬಂಧ ನಾಯಕರ ಜೊತೆ ಚರ್ಚಿಸಲು ಡಿಕೆಶಿ ಈ ಸಭೆ ಕರೆದಿದ್ದಾರೆ ಎಂದು ತಿಳಿದುಬಂದಿದೆ.
ಸಭೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಜೊತೆ ಮೂವರು ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಈಶ್ವರ್ ಖಂಡ್ರೆ, ಸತೀಶ್ ಜಾರಕಿಹೊಳಿ ಹಾಗೂ ಅಹಮದ್ ಉಪಸ್ಥಿತರಿರುತ್ತಾರೆ. ಕೆಪಿಸಿಸಿ ಮಾಜಿ ಪದಾಧಿಕಾರಿಗಳ ಸಭೆ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ನಡೆಯಲಿದೆ. ಮಧ್ಯಾಹ್ನ 2 ಗಂಟೆಗೆ ಆರಂಭವಾಗುವ ಸಭೆ ಸಂಜೆಯವರೆಗೂ ಮುಂದುವರಿಯಲಿದೆ. ವೇಳಾಪಟ್ಟಿ ಪ್ರಕಾರ ಸಭೆಯಲ್ಲಿ ಭಾಗವಹಿಸಲು ಪದಾಧಿಕಾರಿಗಳಿಗೆ ಕೋರಲಾಗಿದೆ.
ಮಧ್ಯಾಹ್ನ 2 ಗಂಟೆಯಿಂದ ಮಾಜಿ ಉಪಾಧ್ಯಕ್ಷರು, ಮಾಜಿ ಖಜಾಂಚಿ, ಮಾಜಿ ಪ್ರಧಾನ ಕಾರ್ಯದರ್ಶಿಗಳು ಹಾಗೂ ಹಾಲಿ ಡಿಸಿಸಿ ಅಧ್ಯಕ್ಷರ ಜೊತೆ ಶಿವಕುಮಾರ್ ಸಭೆ ನಡೆಸಲಿದ್ದಾರೆ. ಸಂಜೆ 4 ರಿಂದ ಕಾರ್ಯದರ್ಶಿಗಳ ಜೊತೆ ಹಾಗೂ ಸಂಜೆ 6 ಗಂಟೆಯಿಂದ 2018ರ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ನೇಮಕಗೊಂಡ ಮಾಜಿ ಕೋ-ಆರ್ಡಿನೇಟರ್ ಗಳ ಸಭೆ ನಡೆಸಲಿದ್ದಾರೆ. ಮುಂದಿನ ದಿನಗಳಲ್ಲಿ ಇದೇ ರೀತಿ ವಿವಿಧ ವಿಭಾಗಗಳ ಮುಖಂಡರ ಜೊತೆ ಶಿವಕುಮಾರ್ ಸಭೆ ನಡೆಸಲಿದ್ದಾರೆ ಎಂದು ತಿಳಿದುಬಂದಿದೆ.