ಬೆಂಗಳೂರು : ಮುಂಬರುವ ವಿಧಾನಸಭೆ ಚುನಾವಣೆ ಅಭ್ಯರ್ಥಿ ಆಯ್ಕೆಗೆ ಇನ್ನೂ ಸಾಕಷ್ಟು ಕಾಲಾವಕಾಶ ಇರುವಾಗಲೇ, ಕಾಂಗ್ರೆಸ್ ತನ್ನ ತಂತ್ರಗಾರಿಕೆ ಆರಂಭಿಸಿದೆ. ದೊಡ್ಡದೊಂದು ಜಾಲ ಹೆಣೆದು ಬಿಜೆಪಿಗೆ ಶಾಕ್ ಕೊಡಲು ಮುಂದಾಗಿದೆ.
2018ರ ಸಾರ್ವತ್ರಿಕ ಚುನಾವಣೆಯಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ರಚನೆಯಾಗಿತ್ತು. ಆದರೆ, 17 ಶಾಸಕರ ರಾಜೀನಾಮೆಯಿಂದ ಮೈತ್ರಿ ಸರ್ಕಾರವೇ ಉರುಳಿದ್ದೀಗ ಇತಿಹಾಸ. ಆದರೆ, ಕೆಪಿಸಿಸಿ ಅಧ್ಯಕ್ಷರಾದ ಬಳಿಕ ಡಿ ಕೆ ಶಿವಕುಮಾರ್ ಇದೇ ಆಪರೇಷನ್ ವಿಚಾರದಲ್ಲಿ ದೊಡ್ಡದೊಂದು ಗೇಮ್ ಪ್ಲ್ಯಾನ್ ರಚಿಸಿದ್ದಾರೆ ಎಂಬ ಮಾಹಿತಿ ಇದೆ. ಮೈತ್ರಿ ಸರ್ಕಾರ ಪತನಕ್ಕೆ ಕಾರಣವಾಗಿದ್ದ 17 ಶಾಸಕರ ಕ್ಷೇತ್ರದ ಬಿಜೆಪಿ ಅಭ್ಯರ್ಥಿಗಳಿಗೆ ಗಾಳ ಹಾಕಲು ಡಿಕೆಶಿ ಮುಂದಾಗಿದ್ದಾರೆ. ಇದಕ್ಕೆ ಪಕ್ಷದ ಹೈಕಮಾಂಡ್ ಸಮ್ಮತಿಯೂ ಸಿಕ್ಕಿದೆ ಎಂಬ ಮಾಹಿತಿ ಇದೆ.
ಮೊದಲ ಯಶಸ್ಸು : ಈ ಆಪರೇಷನ್ ಹಸ್ತದ ಮೊದಲ ಯಶಸ್ಸು ನಾಳೆ ಅಧಿಕೃತವಾಗಲಿದೆ. ರಾಜೀನಾಮೆ ನೀಡಿದ 17 ಶಾಸಕರ ಪೈಕಿ 13 ಮಂದಿ ಕಾಂಗ್ರೆಸ್, ಮೂವರು ಜೆಡಿಎಸ್ ಹಾಗೂ ಒಬ್ಬ ಪಕ್ಷೇತರ ಅಭ್ಯರ್ಥಿ ಇದ್ದಾರೆ. ಉಪಚುನಾವಣೆ ನಡೆದಿದ್ದು, ಇದರಲ್ಲಿ ಹೆಚ್ ವಿಶ್ವನಾಥ್, ಆರ್ ಶಂಕರ್ ಚುನಾವಣೆ ಎದುರಿಸಿಲ್ಲ. ಎಂಟಿಬಿ ನಾಗರಾಜ್ ಸೋಲನುಭವಿಸಿದ್ದಾರೆ. ಆದಾಗ್ಯೂ ಆಯಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿದ್ದವರಿಗೆ ಕಾಂಗ್ರೆಸ್ ಗಾಳ ಹಾಕಲು ಮುಂದಾಗಿದೆ.
ಹೊಸಕೋಟೆಯಿಂದ ಅಂದು ಕಾಂಗ್ರೆಸ್ ಅಭ್ಯರ್ಥಿ ಎಂಟಿಬಿ ನಾಗರಾಜ್ ವಿರುದ್ಧ ಸ್ಪರ್ಧಿಸಿದ್ದ ಶರತ್ ಬಚ್ಚೇಗೌಡ ಉಪಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆದ್ದಿದ್ದಾರೆ. ಇವರನ್ನು ಕಾಂಗ್ರೆಸ್ಗೆ ಸೆಳೆಯುವ ಕಾರ್ಯ ಯಶಸ್ವಿಯಾಗಿದ್ದು, ಅಧಿಕೃತ ಸೇರ್ಪಡೆ ಮಾತ್ರ ಬಾಕಿ ಇದೆ. ಶೀಘ್ರವೇ ಉಪಚುನಾವಣೆ ಘೋಷಣೆಯಾಗಲಿರುವ ಮಸ್ಕಿ ವಿಧಾನಸಭೆ ಕ್ಷೇತ್ರದಿಂದ ಹಿಂದೆ ಬಿಜೆಪಿ ಅಭ್ಯರ್ಥಿಯಾಗಿದ್ದ ಬಸವನಗೌಡ ತುರುವಿಹಾಳ್ ಕಾಂಗ್ರೆಸ್ ಪಕ್ಷವನ್ನು ನಾಳೆ ಅಧಿಕೃತವಾಗಿ ಸೇರ್ಪಡೆಯಾಗಲಿದ್ದಾರೆ.
ಇನ್ನುಳಿದ 15 ಕ್ಷೇತ್ರದ ಬಿಜೆಪಿ ಅಭ್ಯರ್ಥಿಗಳ ಜತೆ ಕಾಂಗ್ರೆಸ್ ಸಂಪರ್ಕ ಸಾಧಿಸಲು ಯತ್ನಿಸುತ್ತಿದೆ. ಕಳೆದ ಉಪಚುನಾವಣೆ ವೇಳೆ ರಾಜರಾಜೇಶ್ವರಿನಗರ ಕ್ಷೇತ್ರದಿಂದ ಸ್ಪರ್ಧಿಸಿದ್ದ ಮುನಿರಾಜು ಗೌಡ ಅವರನ್ನೂ ಸೆಳೆಯುವ ಯತ್ನ ನಡೆಸಲಾಗಿತ್ತು. ಆಗ ಸಾಧ್ಯವಾಗಿರಲಿಲ್ಲ, ಇದೀಗ ಮತ್ತೆ ಪ್ರಯತ್ನ ನಡೆಯಲಿದೆ ಎಂಬ ಮಾತಿದೆ. ಚಿಕ್ಕಬಳ್ಳಾಪುರದಲ್ಲಿ ಬಿಜೆಪಿಗೆ ಬಲವಿಲ್ಲ.
ಆದ್ದರಿಂದ ಕಾಂಗ್ರೆಸ್ ಬಲವನ್ನೇ ಹೆಚ್ಚಿಸಲು ಚಿಂತನೆ ನಡೆಸಲಾಗಿದೆ. ಕಡೆಯ ಕ್ಷಣದಲ್ಲಿ ಸಚಿವ ಸುಧಾಕರ್ ಜತೆ ತೆರಳಿರುವ ನಾಯಕರನ್ನು ವಾಪಸ್ ಸೆಳೆಯುವ ಚಿಂತನೆ ನಡೆಯುತ್ತಿದೆ. ಮಂಡ್ಯದ ಕೆಆರ್‌ಪೇಟೆಯಲ್ಲೂ ಇದೇ ಸ್ಥಿತಿ ಇದೆ. ಇಲ್ಲಿ ಬಿಜೆಪಿ ಲೆಕ್ಕಕ್ಕಿಲ್ಲ. ಹೀಗಾಗಿ ಕಾಂಗ್ರೆಸ್ ಪಕ್ಷ ತಮ್ಮದೇ ಅಭ್ಯರ್ಥಿಗೆ ಬೆಂಬಲಿಸುವ ಸಾಧ್ಯತೆ ಜತೆ ಜೆಡಿಎಸ್ ಬುಟ್ಟಿಗೆ ಕೈ ಹಾಕಬಹುದು. ಹುಣಸೂರಿನಲ್ಲಿ ಡಾ. ಮಂಜುನಾಥ್ ಹಾಗೂ ಶಿವಾಜಿನಗರದಲ್ಲಿ ರಿಜ್ವಾನ್ ಅರ್ಷದ್ ಗೆದ್ದಿರುವ ಹಿನ್ನೆಲೆ ಸಮಸ್ಯೆ ಇಲ್ಲ.
ಮಹಾಲಕ್ಷ್ಮಿಲೇಔಟ್ನಲ್ಲಿ ಕಾಂಗ್ರೆಸ್ಗೆ ಅಭ್ಯರ್ಥಿಯಾಗಿ ಹಿಂದೆ ಇದೇ ಪಕ್ಷದಿಂದ ಶಾಸಕರಾಗಿದ್ದ ನೆ ಲ ನರೇಂದ್ರಬಾಬುರನ್ನು ಸೆಳೆಯುವ ಯತ್ನ ಶುರುವಾಗಿದೆ. ಯಶವಂತಪುರದಲ್ಲಿ ತಾರಾ ಮೆರುಗು ನೀಡಿದ್ದ, ಜಗ್ಗೇಶ್‌ಗಿಂತ ಗೆಲುವಿನ ಅಂಚಿಗೆ ತೆರಳಿದ್ದ ಜೆಡಿಎಸ್ನ ಜವರಾಯಿಗೌಡರನ್ನು ಸೆಳೆಯುವ ಚಿಂತನೆ ಇದೆ. ಕೆಆರ್‌ಪುರದಲ್ಲಿ ಉಪಚುನಾವಣೆ ವೇಳೆ ಬಿಜೆಪಿಯ ಮಾಜಿ ಶಾಸಕ ನಂದೀಶ್ ರೆಡ್ಡಿ ಸೆಳೆಯುವ ಯತ್ನ ನಡೆದಿತ್ತು. ಇದು ಇನ್ನೊಮ್ಮೆ ಆರಂಭವಾಗಲಿದೆ.
ಹಿರೇಕೆರೂರು ಬಿಜೆಪಿ ಅಭ್ಯರ್ಥಿಯಾಗಿದ್ದ ಯು.ಬಿ. ಬಣಕಾರ್ ಅವರನ್ನು ಸೆಳೆಯುವ ಯತ್ನದ ಜತೆ, ಬಿ.ಸಿ. ಪಾಟೀಲ್ ಜತೆ ಕಾಂಗ್ರೆಸ್ ತ್ಯಜಿಸಿದ್ದವರನ್ನು ಮರಳಿ ಕರೆಸುವ ಯತ್ನ ಶುರುವಾಗಿದೆ. ಅಥಣಿಯಲ್ಲಿ ಗಜಾನನ ಮಂಗ್ಸುಳಿ ಅಭ್ಯರ್ಥಿಯಾಗಿ ಮುಂದುವರಿಯಲಿದ್ದು, ಕಾಂಗ್ರೆಸ್ ಪಕ್ಷ ರಾಣೆಬೆನ್ನೂರಿನಲ್ಲಿ ಅಂದು ಬಿಜೆಪಿ ಅಭ್ಯರ್ಥಿಯಾಗಿದ್ದ ಬಸವರಾಜ ಕೇಲಗಾರಗೆ ಗಾಳ ಹಾಕಿದೆ. ಜತೆಗೆ ಕೆ ಬಿ ಕೋಳಿವಾಡ ಪುತ್ರನನ್ನೂ ಮುನ್ನೆಲೆಗೆ ತರಲು ಯತ್ನಿಸಲಾಗ್ತಿದೆ.
ಶ್ರೀಮಂತಪಾಟೀಲ್ ಪ್ರತಿನಿಧಿಸುತ್ತಿದ್ದ ಕಾಗವಾಡದಲ್ಲಿ ಕಳೆದ ಉಪಚುನಾವಣೆಯಲ್ಲೇ ಹಿಂದೆ ಬಿಜೆಪಿ ಅಭ್ಯರ್ಥಿಯಾಗಿದ್ದ ಬರಮಗೌಡ ಕಾಗೆ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದರು. ಇವರನ್ನು ಇನ್ನಷ್ಟು ಬಲಿಷ್ಠಗೊಳಿಸಿ ಮತ್ತೊಮ್ಮೆ ಅವಕಾಶ ನೀಡುವ ನಿರ್ಧಾರ ಕೈಗೊಳ್ಳಲಾಗಿದೆ. ಗೋಕಾಕ್ ಕ್ಷೇತ್ರದಲ್ಲಿ ಲಖನ್ ಅಭ್ಯರ್ಥಿಯಾಗಲಿದ್ದು, ಇವರ ಜತೆ ಕಳೆದ ಉಪಚುನಾವಣೆ ವೇಳೆ ಜೆಡಿಎಸ್ ಸೇರ್ಪಡೆಯಾಗಿದ್ದ ಹಿಂದಿನ ಬಿಜೆಪಿ ಅಭ್ಯರ್ಥಿ ಅಶೋಕ್ ಪೂಜಾರಿಯನ್ನೂ ಕೈ ಸೆಳೆಯುವ ಸಿದ್ಧತೆ ನಡೆಸಿದೆ.
ಬಳ್ಳಾರಿಯ ವಿಜಯನಗರ ಕ್ಷೇತ್ರದಿಂದ ಆನಂದ್ಸಿಂಗ್ ವಿರುದ್ಧ 2018ರಲ್ಲಿ ಅಭ್ಯರ್ಥಿಯಾಗಿದ್ದ ಹೆಚ್ ಆರ್ ಗವಿಯಪ್ಪರನ್ನು ಸೆಳೆಯುವ ಸಿದ್ಧತೆ ಆರಂಭವಾಗಿದೆ. ಕಡೆಯದಾಗಿ ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರ ವಿಧಾನಸಭೆ ಕ್ಷೇತ್ರದಿಂದ 2018ರಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ವಿ ಎಸ್ ಪಾಟೀಲ್ ಅವರಿಗೂ ಕಾಂಗ್ರೆಸ್ ಗಾಳ ಹಾಕಿದೆ. ಮುಂದಿನ ವಿಧಾನಸಭೆ ಚುನಾವಣೆ ವೇಳೆಗೆ ಒಂದಿಷ್ಟು ಪಕ್ಷ ಬಲಪಡಿಸುವ ಜತೆಗೆ ಆಪರೇಷನ್ ಮೂಲಕ ಒಂದಿಷ್ಟು ಹೆಚ್ಚುವರಿ ಸ್ಥಾನಗಳಿಸಿ ಅಧಿಕಾರದ ಚುಕ್ಕಾಣಿ ಹಿಡಿಯುವುದು ಕಾಂಗ್ರೆಸ್ ಆಶಯವಾಗಿದೆ.