ಬೆಂಗಳೂರು: ಅನಿವಾಸಿ ಕನ್ನಡಿಗರಿಂದ ಪಕ್ಷದ ಪ್ರಣಾಳಿಕೆ 'ಗ್ಲೋಬಲ್ ಕರ್ನಾಟಕ ಬೆಟರ್ ಕರ್ನಾಟಕ'ಕ್ಕಾಗಿ ಸಲಹೆಗಳನ್ನು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಆಹ್ವಾನಿಸಿದ್ದಾರೆ. ಈ ಕುರಿತಾದ ವಿಡಿಯೋವನ್ನು ಮಂಗಳವಾರ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಬಿಡುಗಡೆಗೊಳಿಸಿದರು.
ಇವತ್ತು ಕರ್ನಾಟಕಕ್ಕೆ ಒಂದು ಕಳಂಕ ಕೂಡ ಬಂದಿದೆ. ಅದನ್ನು ತಪ್ಪಿಸಿ ನಮ್ಮ ರಾಜ್ಯ ಹಾಗೂ ಅಸ್ತಿತ್ವದ ಘನತೆಯನ್ನು ಕಾಪಾಡಬೇಕಿದೆ ಎಂದು ಅನಿವಾಸಿ ಭಾರತೀಯರನ್ನು ಉದ್ದೇಶಿಸಿ ಡಿಕೆಶಿ ಮಾತನಾಡಿದ್ದು, 'ರಾಜ್ಯದ ಒಳಿತಿಗಾಗಿ ಹಾಗೂ ಉತ್ತಮ ಆಡಳಿತಕ್ಕಾಗಿ ಅನಿವಾಸಿ ಕನ್ನಡಿಗರು ಸಲಹೆ ನೀಡಬೇಕು. ಗ್ಲೋಬಲ್ ಕರ್ನಾಟಕ, ಬೆಟರ್ ಕರ್ನಾಟಕಕ್ಕಾಗಿ ನಿಮ್ಮ ಸಲಹೆ-ಸೂಚನೆಗಳನ್ನು ನೀಡಬೇಕು' ಎಂದು ವಿನಂತಿಸಿಕೊಂಡಿದ್ದಾರೆ.
ಜಾಗತಿಕ ಮಟ್ಟದಲ್ಲಿ ಕನ್ನಡಿಗರು ಸೇವೆ ಸಲ್ಲಿಸುವ ಮೂಲಕ ಭಾರತಕ್ಕೆ ಹೆಮ್ಮೆ ತಂದಿದ್ದಾರೆ. ವಿಶ್ವದ ಅನೇಕ ನಾಯಕರು ಬೆಂಗಳೂರು ಮತ್ತು ಕರ್ನಾಟಕದ ಮುಖಾಂತರ ಭಾರತವನ್ನು ಗುರುತಿಸುತ್ತಿದ್ದಾರೆ. ರಾಜ್ಯವು ಪ್ರಗತಿ ಸಾಧಿಸುವ ನಿಟ್ಟಿನಲ್ಲಿ ಅಭಿಪ್ರಾಯ ಹಾಗೂ ರಾಜ್ಯದ ವಿವಿಧ ಭಾಗಗಳಲ್ಲಿ ಆಗಬೇಕಿರುವ ಕೆಲಸ ಕಾರ್ಯಗಳ ಕುರಿತು ಸಲಹೆ ಸೂಚನೆಯ ಜೊತೆಗೆ ರಾಜ್ಯದಲ್ಲಿ ಅಳವಡಿಸಬೇಕಿರುವ ವಿಷಯಗಳ ಕುರಿತು ಅನಿಸಿಕೆಗಳನ್ನು ಮುಕ್ತವಾಗಿ ಹಂಚಿಕೊಳ್ಳುವಂತೆ ಜಗತ್ತಿನಾದ್ಯಂತ ನೆಲೆಸಿರುವ ಕನ್ನಡಿಗರಲ್ಲಿ ಕೇಳಿಕೊಂಡಿದ್ದಾರೆ.
ಡಾ.ಜಿ.ಪರಮೇಶ್ವರ್ ಪ್ರಣಾಳಿಕಾ ಸಮಿತಿಯ ಅಧ್ಯಕ್ಷರಾಗಿದ್ದು, ಪ್ರಣಾಳಿಕೆಯ ಕರಡನ್ನು ಅಂತಿಮಗೊಳಿಸಲಿದ್ದಾರೆ. ಪಕ್ಷವನ್ನು ಮುನ್ನಡೆಸುವ ಜವಾಬ್ದಾರಿ ಹೊತ್ತಿರುವ ನನಗೆ ಪ್ರತಿಯೊಂದು ವಿಷಯಕ್ಕೆ ಸಂಬಂಧಿಸಿದಂತೆ ನಿಮ್ಮೆಲ್ಲರ ಸಹಕಾರ, ಸಲಹೆ ಸೂಚನೆಗಳ ಅಗತ್ಯವಿದೆ. ಕರ್ನಾಟಕದ ಅಭಿವೃದ್ಧಿಗಾಗಿ ನಿಮ್ಮ ಸಲಹೆಗಳನ್ನು ಆಹ್ವಾನಿಸುತ್ತಿದ್ದೇನೆ ಎಂದು ಹೇಳಿರುವ ಡಿಕೆಶಿ makekarnatakaproud@gmail.com ಇಮೇಲ್ ಐಡಿಯನ್ನು ಬಿಡುಗಡೆಗೊಳಿಸಿದರು.
ಸಲಹೆ-ಸೂಚನೆಗಳನ್ನು ವಿಡಿಯೋ, ಟೆಕ್ಸ್ಟ್ ಮೆಸೇಜ್ ಹಾಗೂ ವಿವರವಾದ ವರದಿಗಳ ಮೂಲಕ ಸೋಶಿಯಲ್ ಮೀಡಿಯಾಗಳಲ್ಲಿ ಹಂಚಿಕೊಂಡು ತಮ್ಮನ್ನು ಟ್ಯಾಗ್ ಮಾಡುವಂತೆ ಹೇಳಿದ್ದು, ಈ ಮೂಲಕ ವೈಯಕ್ತಿಕವಾಗಿ ಜನರ ಸಲಹೆ-ಸೂಚನೆಗಳನ್ನು ಓದಿ, ಅಧ್ಯಯನ ಮಾಡಬಹುದು ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಪರಿಷ್ಕರಣೆ ನೆಪದಲ್ಲಿ ಸಾಂಸ್ಕೃತಿಕ ಅತ್ಯಾಚಾರ ನಡೆದಿದೆ : ಡಿ.ಕೆ. ಶಿವಕುಮಾರ್ ಸಿಡಿಮಿಡಿ