ಬೆಂಗಳೂರು: ರಾಜ್ಯ ಸರ್ಕಾರ ಬೆಂಗಳೂರಿನ ಐಟಿ ಕಾರಿಡಾರ್ನಲ್ಲಿ ಜಲಸಂಚಾರಕ್ಕಾಗಿ ಬೋಟ್ ಫ್ಯಾಕ್ಟರಿ ಆರಂಭಿಸುವುದು ಉತ್ತಮ. ಬಿಜೆಪಿ ಜನಸ್ಪಂದನ ಕಾರ್ಯದ ಬದಲು ಜಲಸ್ಪಂದನ ಕೆಲಸ ಮಾಡಲಿ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಟೀಕಿಸಿದ್ದಾರೆ.
ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಬೆಂಗಳೂರು ಹಾಗೂ ರಾಜ್ಯದ ಇತರ ಭಾಗಗಳಲ್ಲಿ ನಿರಂತರ ಮಳೆ ಬೀಳುತ್ತಿದೆ. ಈ ರಾಜ್ಯ ಸರ್ಕಾರಕ್ಕೆ ಬೆಂಗಳೂರಿನ ಬೆಲೆ ತಿಳಿದಿಲ್ಲ. ಬೆಂಗಳೂರು ಎಷ್ಟು ಜನರಿಗೆ ಉದ್ಯೋಗ ನೀಡಿದೆ ಎಂಬುದು ಗೊತ್ತಿಲ್ಲ. ದೇಶದಲ್ಲಿ ರಾಜ್ಯದಿಂದಲೇ ಸುಮಾರು ಶೇ 30 ರಷ್ಟು ತೆರಿಗೆ ಕೇಂದ್ರಕ್ಕೆ ಹೋಗುತ್ತದೆ.
ನಾನು ಬೆಂಗಳೂರು ನಿವಾಸಿಯಾಗಿದ್ದು, ನಮಗೆ ಒಂದು ಅವಕಾಶ ನೀಡಿ. ನಾವು ನಿಮ್ಮ ಗೌರವ ಕಾಪಾಡಿ ಉತ್ತಮ ಬದುಕು ನೀಡುವಂತಹ ಆಡಳಿತ ನೀಡುತ್ತೇವೆ ಎಂದು ಜನರಿಗೆ ಮನವಿ ಮಾಡಿದರು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಂಗಳೂರು ಮಾನ ಹರಾಜಾಗುತ್ತಿರುವ ಬಗ್ಗೆ ಕೇಳಿದಾಗ, ನಮಗೆ ಅವಕಾಶ ಕೊಟ್ಟರೆ ನಾವು ಬೆಂಗಳೂರಿನ ಬ್ರ್ಯಾಂಡ್ ಅನ್ನು ಮರುಸ್ಥಾಪಿಸುತ್ತೇವೆ ಎಂದು ಉತ್ತರಿಸಿದರು.
ಇದನ್ನೂ ಓದಿ: ಕಾಂಗ್ರೆಸ್ನಿಂದ ಬ್ರ್ಯಾಂಡ್ ಬೆಂಗಳೂರು ನಾಶ: ಸಂಸದ ತೇಜಸ್ವಿ ಸೂರ್ಯ ಆಕ್ರೋಶ