ಬೆಂಗಳೂರು: ಎರಡು ಕ್ಷೇತ್ರದ ಉಪಚುನಾವಣೆ ಫಲಿತಾಂಶ ಬಂದಿದೆ, ನಾವು ಸೋತಿದ್ದೇವೆ. ಉಪ ಚುನಾವಣೆಯಲ್ಲಿ ಜನರು ನೀಡಿದ ತೀರ್ಪನ್ನು ಒಪ್ಪುತ್ತೇವೆ. ಇದನ್ನು ಪ್ರಶ್ನೆ ಮಾಡೋದಿಲ್ಲ. ಯಾಕೆ ಹೀಗಾಯ್ತು ಅಂತ ಚರ್ಚೆ ಮಾಡಿ ಆತ್ಮ ಅವಲೋಕನ ಮಾಡಿಕೊಳ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ.
ಆರ್.ಆರ್.ನಗರದಲ್ಲಿ ಕುಸುಮಾ ಒಳ್ಳೆಯ ಅಭ್ಯರ್ಥಿ. ಆದರೆ ಅಂತರ ಇಷ್ಟು ದೊಡ್ಡದಿರುತ್ತದೆ ಎಂದುಕೊಂಡಿರಲಿಲ್ಲ. 10 ಸಾವಿರ ಅಂತರದಲ್ಲಿ ಕ್ಲೋಸ್ ಫೈಟ್ ಇರುತ್ತೆ ಅಂತ ಭಾವಿಸಿದ್ದೆವು. ಆದರೆ ಲೆಕ್ಕಾಚಾರ ತಪ್ಪಾಗಿದೆ. ಮುಂದಿನ ದಿನಗಳಲ್ಲಿ ಕುಸುಮಾ ವಿಧಾನಸೌಧ ಮೆಟ್ಟಿಲೇರಲಿದ್ದಾರೆ ಎಂದರು.
ಸಿರಾದಲ್ಲಿ ಗೆಲುವಿನ ನಿರೀಕ್ಷೆ ಇತ್ತು. ಆದರೆ ಬಿಜೆಪಿಗೆ ಅಷ್ಟು ಲೀಡ್ ನಾನು ನಿರೀಕ್ಷೆ ಮಾಡಿರಲಿಲ್ಲ. ಹಾಗಂತ ಪಕ್ಷ ಧೃತಿಗೆಡಲಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಚುನಾವಣಾ ಫಲಿತಾಂಶದ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ.
ನನ್ನ ನೇತೃತ್ವದ ಮೊದಲ ಚುನಾವಣೆ ಸೋತಿದೆ ಅಂತ ನನಗೆ ಬೇಸರ ಇಲ್ಲ. 1985ರಲ್ಲಿ ನಾನು ಮೊದಲ ಚುನಾವಣೆ ಸೋತವನೇ, ಆ ನಂತರ ನಿರಂತರವಾಗಿ ಗೆದ್ದಿರುವೆ. ಸೋಲು ಗೆಲುವಿನ ಮೆಟ್ಟಿಲು ಎಂದರು.
ಸಿರಾದಲ್ಲಿ ಬಿಜೆಪಿಗೆ ಬಿದ್ದಿರುವ ಮತಗಳನ್ನು ಕಂಡು ನನಗೂ ಆಶ್ಚರ್ಯ ಆಗಿದೆ. ಆದರೆ ಸರಕಾರದ ವಿರುದ್ಧ ನಮ್ಮ ಹೋರಾಟ ಮುಂದುವರಿಯುತ್ತದೆ. ಸರಕಾರ ಅಧಿಕಾರ ದುರ್ಬಳಕೆ ಮಾಡಿಕೊಂಡಿದೆ. ಹಣಬಲದಿಂದ ಗೆದ್ದಿದೆ ಎಂದರು.
ನಮ್ಮ ನಾಯಕರ ನಡುವೆ ಯಾವುದೇ ಗೊಂದಲ ಇಲ್ಲ. ಸಾಮೂಹಿಕ ನಾಯಕತ್ವದ ಬಗ್ಗೆ ನಂಬಿಕೆ ಇದೆ. ಅಧ್ಯಕ್ಷನಾಗಿ ಸೋಲಿನ ಹೊಣೆ ಹೊತ್ತುಕೊಳ್ಳುತ್ತೇನೆ ಎಂದು ಹೇಳಿದರು.