ಬೆಂಗಳೂರು: ಬಿಜೆಪಿಯವರು ತಮ್ಮನ್ನ ಯಾಮಾರಿಸುತ್ತಿದ್ದಾರೆ, ವಾಪಸ್ ಬಂದುಬಿಡಿ ಎಂದು ರಾಜೀನಾಮೆ ಕೊಟ್ಟು ಮುಂಬೈ ಸೇರಿರುವ ಶಾಸಕರಿಗೆ ಸಚಿವ ಡಿ.ಕೆ.ಶಿವಕುಮಾರ್ ಮನವಿ ಮಾಡಿದ್ದಾರೆ.
ಕುಮಾರಕೃಪ ಅತಿಥಿ ಗೃಹದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಸುಮ್ಮನೆ ನಿಮ್ಮ ಜೀವನವನ್ನು ಹಾಳು ಮಾಡಿಕೊಳ್ಳಬೇಡಿ. ಬಂದು ಸರ್ಕಾರದ ಜೊತೆ ಸಂಧಾನ ಮಾಡಿಕೊಳ್ಳಿ. ನಿಮಗೆ ಏನು ಬೇಕು ಅದನ್ನು ಪಡೆದುಕೊಳ್ಳಿ ಎಂದು ಅತೃಪ್ತ ಶಾಸಕರಿಗೆ ಸಲಹೆ ನೀಡಿದರು.
ಭಾವನಾತ್ಮಕ ಮಾತು:
ಪಕ್ಷ ನೀವು ಕಟ್ಟಿದ ಮನೆ. ಇದನ್ನು ಬಿಟ್ಟು ಬೇರೆ ಕಡೆ ಹೋಗುವುದಕ್ಕೆ ಯಾಕೆ ಪ್ರಯತ್ನ ಮಾಡುತ್ತೀರಾ. ನಿಮ್ಮ ಮನೆ ನಿಮ್ಮದು, ನಾವೆಲ್ಲ ಅಣ್ಣ-ತಮ್ಮಂದಿರು. ಕೂತು ಮಾತುಕತೆ ನಡೆಸಿ ಸಮಸ್ಯೆ ಬಗೆಹರಿಸಿಕೊಳ್ಳೋಣ. ನಮ್ಮ ಎಲ್ಲಾ ಸಮಸ್ಯೆಯನ್ನು ಬಗೆಹರಿಸಿಕೊಳ್ಳೋಣ. ನಮ್ಮೆಲ್ಲಾ ನಾಯಕರು ತ್ಯಾಗಕ್ಕೆ ಸಿದ್ಧರಿದ್ದಾರೆ ಎಂದರು.
ತೀರ್ಪಿಗೆ ತಲೆಬಾಗುತ್ತೇವೆ:
ಸುಪ್ರೀಂ ಕೋರ್ಟ್ ಸರ್ಕಾರಕ್ಕೆ ಅನುಕೂಲವಾಗುವ ತೀರ್ಪು ನೀಡಲಿದೆ ಎಂಬ ವಿಶ್ವಾಸ ನಮ್ಮದು. ನ್ಯಾಯಾಲಯ ಏನು ತೀರ್ಪು ನೀಡುತ್ತದೆಯೋ ಅದಕ್ಕೆ ತಲೆಬಾಗುವ ಕಾರ್ಯವನ್ನು ಸ್ಪೀಕರ್ ಮಾಡುತ್ತಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಇದಕ್ಕೂ ಮುನ್ನ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಅವರನ್ನು ಭೇಟಿ ಮಾಡಿ ಅರ್ಧ ಗಂಟೆಗೂ ಹೆಚ್ಚು ಕಾಲ ಡಿಕೆಶಿ ಚರ್ಚೆ ನಡೆಸಿದರು. ಪ್ರಸಕ್ತ ರಾಜಕೀಯ ವಿದ್ಯಮಾನಗಳು, ಸುಪ್ರೀಂ ತೀರ್ಪು ಹಾಗೂ ಸ್ಪೀಕರ್ ನಿರ್ಧಾರ ಸೇರಿದಂತೆ ವಿವಿಧ ವಿಚಾರಗಳ ಕುರಿತು ಚರ್ಚಿಸಿದ್ದಾರೆ ಎಂದು ತಿಳಿದು ಬಂದಿದೆ.