ಬೆಂಗಳೂರು: ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಬಗ್ಗೆ ಮಾಜಿ ಸಚಿವ ಜಮೀರ್ ಅಹಮದ್ ಅವರು ನೀಡಿರುವ ಹೇಳಿಕೆ ವೈಯಕ್ತಿಕವಾದದ್ದು. ಅವರ ಹೇಳಿಕೆಗೂ ಪಕ್ಷಕ್ಕೂ ಯಾವುದೇ ಸಂಬಂಧ ಇಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ.
ಈ ಸಂಬಂಧ ಮಾಧ್ಯಮ ಪ್ರಕಟಣೆ ಬಿಡುಗಡೆ ಮಾಡಿರುವ ಅವರು, 'ಪಕ್ಷದ ಶಾಸಕರಾಗಲಿ, ನಾಯಕರಾಗಲಿ ಅಥವಾ ಕಾರ್ಯಕರ್ತರಾಗಲಿ ಮತ್ತೊಬ್ಬರ ವಿರುದ್ಧ ಟೀಕೆ ಮಾಡುವಾಗ ಎಚ್ಚರಿಕೆಯಿಂದ ಇರಬೇಕು. ವೈಯಕ್ತಿಕ ವಿಚಾರಗಳಿಗೆ ಹೋಗಬಾರದು. ಜಾತಿ, ಧರ್ಮ ಸೇರಿದಂತೆ ಯಾವುದೇ ಭಾವನೆಗಳಿಗೆ ಧಕ್ಕೆ ತರಬಾರದು. ಟೀಕಿಸುವ ಭರದಲ್ಲಿ ಗೌರವದ ಎಲ್ಲೆ ಮೀರಬಾರದು ಎಂದು ಶಿವಕುಮಾರ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಜಮೀರ್ ಅಹಮದ್ ಅವರು ಮುಂದಿನ ದಿನಗಳಲ್ಲಿ ಇಂತಹ ಟೀಕೆ, ಹೇಳಿಕೆ ನೀಡುವ ಮುನ್ನ ತಾವು ಒಂದು ಪಕ್ಷದ ಪ್ರತಿನಿಧಿ ಎಂಬುದನ್ನು ಮರೆಯಬಾರದು. ಇದು ಪುನಾರವರ್ತನೆ ಆಗದಂತೆ ನೋಡಿಕೊಳ್ಳಬೇಕು ಎಂದು ಶಿವಕುಮಾರ್ ಸೂಚನೆ ನೀಡಿದ್ದಾರೆ.
ಕಳೆದ ಗುರುವಾರ ಬೆಂಗಳೂರಿನ ಚಾಮರಾಜಪೇಟೆ ಕ್ಷೇತ್ರ ವ್ಯಾಪ್ತಿಯ ಸರ್ವ ಧರ್ಮೀಯರಿಗೆ ಆಹಾರದ ಕಿಟ್ ಹಾಗೂ 5000 ರೂ. ನಗದು ಪರಿಹಾರ ನೀಡಿದ ಸಂದರ್ಭ ಮಾಧ್ಯಮಗಳಿಗೆ ಮಾತನಾಡಿದ್ದ ಜಮೀರ್ ಅಹಮದ್, ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದರು. ಮಾತಿನ ಭರದಲ್ಲಿ ಕುಮಾರಸ್ವಾಮಿ ವಿರುದ್ಧ ಏಕವಚನ ಪ್ರಯೋಗ ಮಾಡಿದ್ದರು. ಇದಾದ ಬಳಿಕ ಸದಾಶಿವನಗರ ನಿವಾಸದ ಮೇಲೆ ಕುಮಾರಸ್ವಾಮಿ ಬೆಂಬಲಿಗರು ದಾಳಿ ನಡೆಸಿ ಗದ್ದಲ ಸೃಷ್ಟಿಸಿದ್ದು ಗಮನಿಸಬಹುದಾಗಿದೆ.