ಬೆಂಗಳೂರು: ಪುಲಕೇಶಿನಗರ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಹಾಗೂ ಅವರ ಕುಟುಂಬಕ್ಕೆ ಪೊಲೀಸ್ ಭದ್ರತೆ ಒದಗಿಸುವಂತೆ ಸಿಎಂ ಬಿ.ಎಸ್. ಯಡಿಯೂರಪ್ಪಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮನವಿ ಮಾಡಿದ್ದಾರೆ.
ಈ ಸಂಬಂಧ ಪತ್ರ ಬರೆದಿರುವ ಅವರು, ಆ.1 ರಂದು ರಾತ್ರಿ ಪುಲಕೇಶಿನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಶಾಸಕರಾದ ಅಖಂಡ ಶ್ರೀನಿವಾಸಮೂರ್ತಿ ಅವರ ಪ್ರಾಣಹಾನಿ ಮಾಡಲು ಪ್ರಯತ್ನಿಸಿ, ಶಾಸಕರ ಮನೆಗೆ ಹಾಗೂ ಅವರ ಸಂಬಂಧಿಕರ ಮನೆಗಳಿಗೆ ಕಿಡಿಗೇಡಿಗಳು ಬೆಂಕಿ ಹಚ್ಚಿ ಸಂಪೂರ್ಣವಾಗಿ ಧ್ವಂಸ ಮಾಡಿದ್ದಾರೆ. ಇದರಿಂದ ಶಾಸಕರ ಇಡೀ ಕುಟುಂಬ ಆತಂಕದಲ್ಲಿದೆ. ಘಟನೆ ನಡೆದ ಸ್ಥಳಗಳಿಗೆ ನಾನು ಹಾಗೂ ನಮ್ಮ ಪಕ್ಷದ ಹಿರಿಯ ಮುಖಂಡರು ಭೇಟಿ ನೀಡಿ ಪರಿಶೀಲಿಸಿದ್ದೇವೆ. ಇದೊಂದು ಅಮಾನವೀಯ ಕೃತ್ಯವಾಗಿದೆ ಹಾಗೂ ನಮ್ಮ ಪಕ್ಷ ಈ ರೀತಿಯ ಘಟನೆಯನ್ನು ತೀವ್ರವಾಗಿ ಖಂಡಿಸುತ್ತದೆ ಎಂದು ಡಿಕೆಶಿ ಅಭಿಪ್ರಾಯಪಟ್ಟಿದ್ದಾರೆ.
ನೆಪಮಾತ್ರಕ್ಕೆ ಭೇಟಿ:
ಇಂತಹ ಘೋರ ಕೃತ್ಯ ನಡೆದರೆ ಸರ್ಕಾರದ ಸಚಿವರು ಹಾಗೂ ಹಿರಿಯ ಅಧಿಕಾರಿಗಳು ಘಟನಾ ಸ್ಥಳಕ್ಕೆ ನೆಪ ಮಾತ್ರಕ್ಕೆ ಭೇಟಿ ನೀಡಿ, ಅನಾವಶ್ಯಕವಾಗಿ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಅಖಂಡ ಶ್ರೀನಿವಾಸಮೂರ್ತಿ ಅವರಿಗೆ ರಕ್ಷಣೆ ನೀಡಲಾಗುವುದು ಎಂದು ಸಚಿವರು ಭರವಸೆ ನೀಡಿದ್ದರು.
ಆದರೆ, ಇದುವರೆಗೂ ಶಾಸಕರಿಗೆ ಹಾಗೂ ಅವರ ಕುಟುಂಬಕ್ಕೆ ಸರ್ಕಾರ ರಕ್ಷಣೆ ನೀಡಲು ಯಾವುದೇ ಕ್ರಮ ಕೈಗೊಳ್ಳದಿರುವುದು ಸರ್ಕಾರ ಹಾಗೂ ಪೊಲೀಸ್ ಇಲಾಖೆ ನಿರ್ಲಕ್ಷ್ಯತನವನ್ನು ತೋರಿಸುತ್ತದೆ. ಒಬ್ಬ ಶಾಸಕರಿಗೆ ಸರ್ಕಾರ ಭದ್ರತೆ ಒದಗಿಸಲು ವಿಫಲವಾದರೆ, ಇನ್ನು ಸಾಮಾನ್ಯ ಜನರನ್ನು ಈ ಸರ್ಕಾರ ರಕ್ಷಿಸಲು ಸಾಧ್ಯವೇ? ಎಂದು ಖಾರವಾಗಿ ಪ್ರಶ್ನಿಸಿದ್ದಾರೆ. ಆದ್ದರಿಂದ ಶಾಸಕರಿಗೆ ಹಾಗೂ ಅವರ ಕುಟುಂಬದ ಸದಸ್ಯರಿಗೂ ಕೂಡಲೇ ಭದ್ರತೆ ಒದಗಿಸಬೇಕು ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಸರ್ಕಾರವನ್ನು ಆಗ್ರಹಿಸುತ್ತದೆ ಎಂದು ಅವರು ವಿವರಿಸಿದ್ದಾರೆ.