ಬೆಂಗಳೂರು: ಎರಡು ವಿಧಾನಸಭೆಗಳಿಗೆ ನಡೆಯುವ ಉಪಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಅಭ್ಯರ್ಥಿಗಳಿಗೆ ಕಾಂಗ್ರೆಸ್ ಪಕ್ಷ ಇಂದು ಬಿಫಾರಂ ವಿತರಿಸಿದೆ. ನಿರೀಕ್ಷೆಯಂತೆ ಹಾನಗಲ್ ವಿಧಾನಸಭೆ ಕ್ಷೇತ್ರಕ್ಕೆ ಕಳೆದ ಸಾರಿಯ ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ್ ಮಾನೆ ಅವರೇ ಆಯ್ಕೆಯಾಗಿದ್ದಾರೆ.
ಇನ್ನೊಂದೆಡೆ ಸಿಂದಗಿ ಕ್ಷೇತ್ರದಿಂದ ಅಶೋಕ್ ಮನಗೂಳಿ ಅವರಿಗೆ ಬಹು ಸಮಯದ ಹಿಂದೆಯೇ ಟಿಕೆಟ್ ಘೋಷಣೆಯಾಗಿತ್ತು. ಬಿಜೆಪಿ ಶಾಸಕರಾಗಿದ್ದ ಮಾಜಿ ಸಚಿವ ಸಿಎಂ ಉದಾಸಿ ನಿಧನದಿಂದ ಹಾನಗಲ್ ಹಾಗೂ ಶಾಸಕ ಹಾಗೂ ಮಾಜಿ ಸಚಿವ ಎಂ.ಸಿ. ಮನಗೂಳಿ ನಿಧನದಿಂದ ಸಿಂದಗಿ ಕ್ಷೇತ್ರ ತೆರವಾಗಿತ್ತು. ಸಿಂದಗಿಯಿಂದ ಮನಗೂಳಿ ಪುತ್ರನಿಗೆ ಕಾಂಗ್ರೆಸ್ ಟಿಕೆಟ್ ನೀಡಿದೆ.
ಹಾನಗಲ್ ನಲ್ಲಿ ಮಾಜಿ ಸಚಿವ ಮನೋಹರ್ ತಹಶೀಲ್ದಾರ್ ಹಾಗೂ ಕಳೆದ ಸಾರಿಯ ಅಭ್ಯರ್ಥಿ ಶ್ರೀನಿವಾಸ್ ಮಾನೆ ನಡುವೆ ತೀವ್ರ ಪೈಪೋಟಿ ನಡೆದಿತ್ತು. ಹೈಕಮಾಂಡ್ ಅಧಿಕೃತ ಆದೇಶ ಬಂದ ಬಳಿಕ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಇಂದು ಹಾನಗಲ್ ಹಾಗೂ ಸಿಂದಗಿ ಅಭ್ಯರ್ಥಿಗಳಿಗೆ ಬಿಫಾರಂ ವಿತರಿಸಿದ್ದಾರೆ.
ಸಿಂದಗಿ ವಿಧಾನಸಭೆ ಕ್ಷೇತ್ರದ ಉಪ ಚುನಾವಣೆ ಕಾಂಗ್ರೆಸ್ ಅಭ್ಯರ್ಥಿ ಅಶೋಕ ಮನಗೂಳಿ ಅವರ ಬಿ ಫಾರಂ ಅನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಅವರಿಗೆ ಹಸ್ತಾಂತರಿಸಿದರು.
ಮತ್ತೊಬ್ಬ ಕಾರ್ಯಾಧ್ಯಕ್ಷ ಧೃವನಾರಾಯಣ್ ಅವರು ಹಾಜರಿದ್ದರು. ಹಾನಗಲ್ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಅಭ್ಯರ್ಥಿ ಶ್ರೀನಿವಾಸ್ ಮಾನೆ ಪರವಾಗಿ ಆನಂದಸ್ವಾಮಿ ಗಡ್ಡದೇವರಮಠ ಅವರಿಗೆ ಬಿ ಫಾರಂ ಹಸ್ತಾಂತರಿಸಲಾಯಿತು.
ರಾಜ್ಯ ಕಾಂಗ್ರೆಸ್ ನಾಯಕರೆಲ್ಲ ತೆರಳಿ ನಾಮಪತ್ರ ಸಲ್ಲಿಕೆ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಅಭ್ಯರ್ಥಿಗಳ ಜತೆ ನಾಮಪತ್ರ ಸಲ್ಲಿಕೆ ಕೇಂದ್ರಕ್ಕೆ ತೆರಳಿ ಬೆಂಬಲ ಸೂಚಿಸಲಿದ್ದು, ಅ.30ಕ್ಕೆ ನಡೆಯುವ ಚುನಾವಣೆ ಪ್ರಚಾರ ಕಾರ್ಯದಲ್ಲೂ ಭಾಗಿಯಾಗಲಿದ್ದಾರೆ.